ನ್ಯೂಸ್

ಕೋವಿಡ್​ನಿಂದ ಗುಣವಾಗಿ ಡಿಸ್​​ಚಾರ್ಜ್​ ಆದಮೇಲೆ ಸತ್ತವರೆಷ್ಟು ಗೊತ್ತೇ?; ಐಸಿಎಂಆರ್​ ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್​-19 ಸಾಂಕ್ರಾಮಿಕ ಪಿಡುಗಿನಿಂದ ಈಗ ಬಹುತೇಕ ಮುಕ್ತಿ ಸಿಕ್ಕಿದ್ದರೂ ಅದರ ಪರಿಣಾಮಗಳಿಂದ ಇಲ್ಲವೇ, ಆ ಸೋಂಕಿನ ಬಳಿಕದ ಸಮಸ್ಯೆಗಳಿಂದ ಸಾಯುತ್ತಿರುವವರು ಕೂಡ ಬಹಳಷ್ಟಿದ್ದಾರೆ. ಇದು ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್ (ಐಸಿಎಂಆರ್​) ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.

ಕೋವಿಡ್ ಸೋಂಕಿಗೆ ಒಳಗಾದವರ ಪೈಕಿ ಶೇ. 17.1 ಮಂದಿ ಅದರ ಸುದೀರ್ಘ ಪರಿಣಾಮದಿಂದ ಇಲ್ಲವೇ ಮತ್ತೆ ಹೊಸದಾಗಿ ಸೋಂಕಿಗೆ ಒಳಗಾಗಿ ಬಳಲುತ್ತಿದ್ದಾರೆ. ಹೀಗೆ ಕೋವಿಡ್​​ನ ಸುದೀರ್ಘ ಪರಿಣಾಮವು ಸುಸ್ತು, ಉಸಿರಾಟದ ಸಮಸ್ಯೆ ಅಥವಾ ನರಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ.

ಈ ಕರೋನೋತ್ತರ ಪರಿಸ್ಥಿತಿಯಲ್ಲಿ ಕೋವಿಡ್​ನಿಂದ ಗುಣವಾಗಿ ಡಿಸ್​ಚಾರ್ಜ್​ ಆದಮೇಲೆ ಸಾಯುತ್ತಿರುವವ ಪ್ರಮಾಣದಲ್ಲಿ 2.7 ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಐಸಿಎಂಆರ್​​ನ ಕ್ಲಿನಿಕಲ್ ಸ್ಟಡೀಸ್ ಮತ್ತು ಟ್ರಯಲ್ಸ್ ಯುನಿಟ್ ಅಂಕಿ-ಅಂಶಗಳ ಪ್ರಕಾರ ಕೋವಿಡ್​ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ. 6.5 ಮಂದಿ ಡಿಸ್​ಚಾರ್ಜ್ ಆದ ಒಂದು ವರ್ಷದಲ್ಲಿ ಸಾವಿಗೀಡಾಗಿದ್ದಾರೆ.

ಮಕ್ಕಳು, ವೃದ್ಧರು, ಪುರುಷರು ಹಾಗೂ ಲಘು-ತೀವ್ರ ಸೋಂಕಿನವರು ಎಲ್ಲರೂ ಸೇರಿದಂತೆ ಒಟ್ಟು 31 ಆಸ್ಪತ್ರೆಗಳ 14,419 ರೋಗಿಗಳ ಅಂಕಿ-ಅಂಶಗಳನ್ನು ತಾಳೆ ಹಾಕಿ ಅಧ್ಯಯನ ಮಾಡಿ ಈ ಅಂಶವನ್ನು ಕಂಡುಕೊಳ್ಳಲಾಗಿದೆ.

ಇನ್ನೊಂದು ಅಂಕಿ-ಅಂಶದ ವಿಶ್ಲೇಷಣೆ ಪ್ರಕಾರ ಅಧ್ಯಯನಕ್ಕೆ ಒಳಪಟ್ಟ 18 ವರ್ಷದೊಳಗಿನ ರೋಗಿಗಳಲ್ಲಿ ಡಿಸ್​ಚಾರ್ಜ್ ಆದಮೇಲೆ ಸಾಯುವ ಪ್ರಮಾಣ 1.7 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ. -ಏಜೆನ್ಸೀಸ್