ನ್ಯೂಸ್

ದೇವಸ್ಥಾನದ ಬಳಿಯೇ ಉರುಳಿಬಿದ್ದ ಟ್ರಕ್: 16 ಮಂದಿಯ ದುರ್ಮರಣ, ಐವರು ಗಂಭೀರ!​

ಮುಂಬೈ: ಪಪ್ಪಾಯಿ ತುಂಬಿದ ಟ್ರಕ್​ ಉರುಳಿಬಿದ್ದ ಪರಿಣಾಮ 16 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಅಪಘಾತದಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ.

ಯವಾಲ್​ ತಾಲೂಕಿನ ಕಿಂಗೌನ್​ ಗ್ರಾಮದ ದೇವಸ್ಥಾನದ ಬಳಿ ಭಾನುವಾರ ಮಧ್ಯರಾತ್ರಿ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರು ಜಲ್ಗಾಂವ್​ ಜಿಲ್ಲೆಯ ಅಭೋದಾ, ಕೆರ್ಹಾಲಾ ಮತ್ತು ರೆವೆರಾ ಮೂಲದ ಕಾರ್ಮಿಕರು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಕ್​ನಲ್ಲಿ ಒಟ್ಟು 21 ಮಂದಿ ಇದ್ದರು. ಪಪ್ಪಾಯಿ ತುಂಬಿಕೊಂಡು ಧುಲೆಯಿಂದ ಛೋಪ್ರಾಗೆ ತೆರಳುತ್ತಿತ್ತು. ವೇಗವಾಗಿ ತೆರಳುತ್ತಿದ್ದ ಟ್ರಕ್​ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಅವಘಡ ಸಂಭವಿಸಿದೆ.

ಮಾಹಿತಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಮೃತದೇಹಗಳನ್ನು ಶವಪರೀಕ್ಷೆಗೆಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)