ಬೆಂಗಳೂರು: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ನ್ನು ಹಂತಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿರುವ 15 ವರ್ಷ ಪೂರೈಸಿರುವ 15,295 ವಾಹನಗಳು ನಾಶಪಡಿಸುವ ಪಟ್ಟಿಯಲ್ಲಿದ್ದು, ಮೊದಲ ಹಂತದಲ್ಲಿ ಐದು ಸಾವಿರ ವಾಹನಗಳನ್ನು ನಾಶಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಶುಕ್ರವಾರ ಅನುಮತಿ ನೀಡಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಕಾನೂನು ಸಚಿವ ಎಚ್.ಕೆ ಪಾಟೀಲ್, ಗುಜರಿ ಪಾಲಿಸಿಯನ್ನು ಜಾರಿ ಮಾಡುವಂತೆ ಕೇಂದ್ರ ಸರ್ಕಾರ ನಿರಂತರ ಒತ್ತಡ ಹೇರುತ್ತಿದೆ. 15 ವರ್ಷ ಬಳಕೆ ಮಾಡಿದ ಸರ್ಕಾರಿ ವಾಹನಗಳನ್ನು ಗುರುತಿಸಲಾಗಿದ್ದು, ಹಂತಹಂತವಾಗಿ ಅವುಗಳನ್ನು ನಾಶ ಪಡಿಸಬೇಕೆಂದು ನಿರ್ಧರಿಸಲಾಗಿದೆ ಎಂದು ವಿವರಿಸಿದರು. ಗುಜರಿಯಲ್ಲಿ ನಾಶವಾಗುವ ವಾಹನಗಳು ಒಂದು ವರ್ಷದ ಅವಧಿಯಲ್ಲಿ ಯಾವುದಾದರೂ ದಂಡ ಪ್ರಕರಣ ಎದುರಿಸುತ್ತಿದ್ದರೆ ಒಂದು ವರ್ಷದ ಅವಧಿಯ ವಿನಾಯ್ತಿ ನೀಡಲಾಗುತ್ತದೆ. ಒಂದು ವಾಹನ ನಾಶಪಡಿಸುವುದರಿಂದ 10 ಲಕ್ಷ ರೂ. ವರೆಗೂ ನಷ್ಟವಾಗಲಿದೆ. ಅಂದಾಜು 500 ಕೋಟಿ ರೂ. ನಷ್ಟವಾಗುವುದು. ಹಾಗೆಯೇ, ಕೇಂದ್ರದಿಂದ ನೂರು ಕೋಟಿ ಪೋ›ತ್ಸಾಹಕ ಧನ ಲಭಿಸಲಿದೆ ಎಂದು ತಿಳಿಸಿದರು. ಅದೇ ರೀತಿ ಮೋಟಾರು ವಾಹನ ಕಾಯ್ದೆಯಡಿ ಎಲೆಕ್ಟ್ರಾನಿಕ್ ಮಾನಿಟರಿಂಗ್ ಮತ್ತು ಎನ್ ಫೋರ್ಸ್ವೆುಂಟ್ ಆಫ್ ರೋಡ್ ಸೇಫ್ಟಿ ಯೋಜನೆಯನ್ನು 20 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನ ಗೊಳಿಸಲು ಅನುಮೋದನೆ ನೀಡಲಾಗಿದೆ. ಧಾರವಾಡ, ಬೆಂಗಳೂರು, ಗದಗ ಸೇರಿ ಪ್ರಮುಖ ನಗರಗಳಲ್ಲಿ ಕ್ಯಾಮರಾ ಸೇರಿ ವಿವಿಧ ಉಪಕರಣ ಬಳಸಿ ಅಪಘಾತ ನಿಯಂತ್ರಿಸಲಾಗುತ್ತದೆ ಎಂದು ಹೇಳಿದರು.
ಇನ್ಮುಂದೆ ನೀರಾವರಿಗೆ ಅಕ್ರಮವಾಗಿ ಐಪಿ ಸೆಟ್ ಅಳವಡಿಸುವುದಕ್ಕೆ ಸರ್ಕಾರ ಬ್ರೇಕ್ ಹಾಕಿದೆ. 2015ರಿಂದ ಈ ವರೆಗೂ ಅಕ್ರಮ ಐಪಿ ಸೆಟ್ಗಳನ್ನು ಸಕ್ರಮ ಮಾಡಿರುವುದಕ್ಕೆ ಸಂಪುಟ ಘಟನೋತ್ತರ ಅನುಮತಿ ನೀಡುವ ಜತೆಗೆ ಇನ್ನು ಮುಂದೆ ಸಕ್ರಮ ಮಾಡುವುದಿಲ್ಲ ಎಂದು ಘೋಷಿಸಿದೆ. ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಎಚ್ ಕೆ ಪಾಟೀಲ, ಕಳೆದ ಎಂಟು ವರ್ಷಗಳಲ್ಲಿ 2 ಲಕ್ಷದಷ್ಟು ಅಕ್ರಮ ಪಂಪ್ಗಳನ್ನು ಸಕ್ರಮಗೊಳಿಸಲಾಗಿದೆ. ಇದಕ್ಕಾಗಿ ಎಸ್ಕಾಂಗಳು 6999 ಕೋಟಿ ರೂ. ವೆಚ್ಚ ಮಾಡಿದೆ. ರೈತರ ಹಿತದೃಷ್ಟಿಯಿಂದ ಈ ಅನುಕೂಲತೆ ಕಲ್ಪಿಸಿದ್ದು, ಸೆ.22ಕ್ಕೆ ಕಟ್ ಆಫ್ ಡೇಟ್ ನಿಗದಿಯಾಗಿದೆ. ಇನ್ಮುಂದೆ ಸಕ್ರಮ ಮಾಡುವುದಿಲ್ಲ. ಈಗಾಗಲೆ ಅರ್ಜಿ ಸಲ್ಲಿಸಿದ, ಶುಲ್ಕ ಪಾವತಿಸಿದ ಮತ್ತಿತರ ಮಾನದಂಡಗಳಡಿ ಸಕ್ರಮ ಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಸೌರೀಕರಣಕ್ಕೆ ಪ್ರೋತ್ಸಾಹ: ಸೌರಶಕ್ತಿ ಚಾಲಿತ ನೀರಾವರಿ ಪಂಪ್ಸೆಟ್ಗಳನ್ನು ಅಳವಡಿಸಿಕೊಳ್ಳಲು ಮುಂದೆ ಬರುವ ರೈತರಿಗೆ ಪ್ರೋತ್ಸಾಹಿಸಲು ಸರ್ಕಾರ ತೀರ್ವನಿಸಿದೆ. ವೈಯಕ್ತಿಕ ಸೌರಶಕ್ತಿ ಚಾಲಿತ ನೀರಾವರಿ ಪಂಪ್ಸೆಟ್ ಅಳವಡಿಸುವುದಕ್ಕೆ ಕೇಂದ್ರ ಸರ್ಕಾರದ ಪಿಎಂ ಕುಸುಮ್ ಬಿ ಯೋಜನೆಯಡಿ ನೆರವು ಒದಗಿಸಲಾಗುತ್ತದೆ. ಪ್ರತಿ ಸೌರಶಕ್ತಿ ಚಾಲಿತ ಪಂಪ್ಸೆಟ್ಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟು ಸಹಾಯಧನ ರಾಜ್ಯ ಸರ್ಕಾರ ಭರಿಸಲಿದೆ. ಶೇ.20ರಷ್ಟು ಬಂಡವಾಳವನ್ನು ಫಲಾನುಭವಿ ರೈತ ಭರಿಸಬೇಕು. ಬಾಕಿ ಶೇ.30 ಅನ್ನು ಕೇಂದ್ರ ಸರ್ಕಾರ ತುಂಬಿಕೊಡಲಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.