ನ್ಯೂಸ್

14,542 ಮಹಿಳೆಯರಲ್ಲಿ ಕ್ಯಾನ್ಸರ್ ರೀತಿಯ ರೋಗಲಕ್ಷಣಗಳು ಪತ್ತೆ! ಮಹಾರಾಷ್ಟ್ರ ಆರೋಗ್ಯ ಇಲಾಖೆಗೆ ತಲೆಬಿಸಿ | Maharashtra

Maharashtra: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಸಂಜೀವನಿ ಯೋಜನೆಯಡಿಯಲ್ಲಿ ಸುಮಾರು 14,500ಕ್ಕೂ ಹೆಚ್ಚು ಮಹಿಳೆಯರಲ್ಲಿ ಕ್ಯಾನ್ಸರ್ ತರಹದ ಲಕ್ಷಣಗಳು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಪ್ರಕಾಶ್ ಅಬಿತ್ಕರ್ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೈಅಲರ್ಟ್​ ಆಗಿದೆ.

ಮಾರ್ಚ್ 8ರಿಂದ ಇಲ್ಲಿಯವರೆಗೆ ಒಟ್ಟು 2,92,996 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆ ಕ್ಯಾನ್ಸರ್ ಲಕ್ಷಣಗಳಿಗೆ ಸಂಬಂಧಿಸಿದಂತೆ ಸರಣಿ ಪ್ರಶ್ನೆಗಳು ಕೇಳಲಾಯಿತು. ಇದಕ್ಕೆ ಉತ್ತರವು ದೊರತಿದೆ ಎಂದು ಸಚಿವರು ಸದನದಲ್ಲಿ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. ಈ ಪೈಕಿ 14,542 ಮಹಿಳೆಯರಿಗೆ ಕ್ಯಾನ್ಸರ್ ತರಹದ ಲಕ್ಷಣಗಳು ಪತ್ತೆಯಾಗಿವೆ. ಇಲ್ಲಿಯವರೆಗೆ, ಮೂವರಿಗೆ ಗರ್ಭಾಶಯದ ಕ್ಯಾನ್ಸರ್, ಒಬ್ಬರಿಗೆ ಸ್ತನ ಕ್ಯಾನ್ಸರ್ ಮತ್ತು ಎಂಟು ಜನರಿಗೆ ಬಾಯಿಯ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಮಹಿಳೆಯರಿಗಾಗಿ ಪ್ರತ್ಯೇಕ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದು, ಕ್ಯಾನ್ಸರ್ ರೋಗನಿರ್ಣಯಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು ಮತ್ತು ತಪಾಸಣೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೋಗನಿರ್ಣಯ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಟಾಟಾ ಮೆಮೋರಿಯಲ್ ಆಸ್ಪತ್ರೆಯಿಂದ ತರಬೇತಿ ಪಡೆದಿರುವ 'ಕ್ಯಾನ್ಸರ್ ಯೋಧರು' ಪ್ರತಿ ತಿಂಗಳಿಗೆ ಎರಡು ಬಾರಿ ತಜ್ಞರೊಂದಿಗೆ 11 ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ಕೊಡಲಿದ್ದಾರೆ ಎಂದರು.

ಪ್ರಸ್ತುತ ಎಂಟು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ-ಕೇರ್ ಕಿಮೊಥೆರಪಿ ಕೇಂದ್ರಗಳು ಪ್ರಾರಂಭವಾಗಿದ್ದು, ಇವುಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ,(ಏಜೆನ್ಸೀಸ್).