ಉತ್ತರ ಪ್ರದೇಶ: 144 ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಮಹಾಕುಂಭ ಮೇಳ ಕುರಿತಂತೆ ಸಾಮಾಜಿಕ ಜಾಲತಾಣವಾದ 'ಎಕ್ಸ್' ಖಾತೆಗಳಲ್ಲಿ ತಪ್ಪು ಮಾಹಿತಿಯನ್ನು (Misinformation) ಹಬ್ಬಿಸಿದ 14 ಖಾತೆಗಳ ವಿರುದ್ಧ ಇದೀಗ ಯೋಗಿ ಆದಿತ್ಯನಾಥ್ ಸರ್ಕಾರ ಶಿಸ್ತಿನ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಮತ್ತಷ್ಟು ದುಬಾರಿ; 90,000 ಗಡಿ ದಾಟಿದ್ರೂ ಆಶ್ಚರ್ಯವಿಲ್ಲ! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Price
ಮಹಾಕುಂಭಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಿದ್ದಕ್ಕಾಗಿ 14 ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಗಳನ್ನು ಗುರುತಿಸಿ, ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, "ಮಹಾಕುಂಭ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಕಟಿಸಿರುವ 'ಎಕ್ಸ್' ಖಾತೆಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
"ಕೊತ್ವಾಲಿ ಕುಂಭಮೇಳದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮಗಳು ಆರಂಭಗೊಂಡಿವೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ಎಕ್ಸ್ ಖಾತೆಗಳು ಜಾರ್ಖಂಡ್‌ನ ಧನ್ಬಾದ್‌ನಿಂದ ಹಳೆಯ ವೀಡಿಯೊವನ್ನು ಪ್ರಯಾಗ್‌ರಾಜ್ ಮಹಾಕುಂಭಕ್ಕೆ ಹೋಲಿಸಿ, ತಪ್ಪಾಗಿ ಲಿಂಕ್ ಮಾಡಿ ಪ್ರಸಾರ ಮಾಡಿರುವುದು ಸ್ಪಷ್ಟವಾಗಿದೆ. ಮತ್ತೊಂದರಲ್ಲಿ, "ಯೋಗಿ ಸರ್ಕಾರದ ಪೊಲೀಸರು ಮಹಾ ಕುಂಭದಲ್ಲಿ ಕಾಣೆಯಾದ ತಮ್ಮ ಸಂಬಂಧಿಕರನ್ನು ಹುಡುಕುತ್ತಿರುವ ಭಕ್ತರನ್ನು ಕ್ರೂರವಾಗಿ ಥಳಿಸುತ್ತಿರುವ" ತಪ್ಪಾದ ಪೋಸ್ಟ್‌ಗಳನ್ನು ಹಂಚಿಕೊಂಡಿವೆ. ಈ ವೀಡಿಯೊ ಜಾರ್ಖಂಡ್‌ನ ಧನ್ಬಾದ್‌ನಿಂದ ಬಂದಿದ್ದು, ಜನವರಿ 1, 2025ರಂದು ಸ್ಥಳೀಯ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದು ಎಂದು ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗವಾಗಿದೆ.
"ವಿಶೇಷವಾಗಿ ಮಹಾಕುಂಭದಂತಹ ಬೃಹತ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜನರ ದಾರಿತಪ್ಪಿಸುವ ವಿಷಯಗಳ ಹರಡುವಿಕೆಯನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರವು ಸಾಮಾಜಿಕ ಮಾಧ್ಯಮಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಈಗ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).