ನ್ಯೂಸ್

ಪೊಲೀಸ್ ಕಾನ್​ಸ್ಟೆಬಲ್ ನೇಮಕಾತಿ ಕಳ್ಳಾಟ: 14 ಅಭ್ಯರ್ಥಿಗಳು ದೈಹಿಕ-ಲಿಖಿತ ಪರೀಕ್ಷೆಗೆ ಬೇರೆಯವರನ್ನು ಕಳಿಸಿ ವಂಚನೆ!

ಬೆಂಗಳೂರು: ಬೆಂಗಳೂರು ನಗರ ಆಯುಕ್ತರ ಘಟಕದ 76 ಕಾನ್​ಸ್ಟೇಬಲ್​ಗಳ ನೇಮಕಾತಿಯಲ್ಲಿ 14 ಅಭ್ಯರ್ಥಿಗಳು ಕಳ್ಳಾಟವಾಡಿರುವುದು ಸಿಸಿ ಕ್ಯಾಮರಾದ ದೃಶ್ಯಾವಳಿಯಲ್ಲಿ ಬಯಲಾಗಿದೆ. ಅಕ್ರಮ ಎಸಗಿದ 14 ಅಭ್ಯರ್ಥಿಗಳು ಮತ್ತು ಅವರಿಗೆ ಸಹಾಯ ಮಾಡಿದವರ ವಿರುದ್ಧ ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಎಫ್​ಐಆರ್ ದಾಖಲಾಗಿದ್ದು, ಕೆಲವರನ್ನು ಬಂಧಿಸಿ ಪೊಲೀಸರು ಜೈಲಿಗೆ ತಳ್ಳಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಿಂದ ಪೊಲೀಸ್ ಕಾನ್​ಸ್ಟೇಬಲ್ (ನಾಗರಿಕ ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ 2020-21ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ 2020ರ ನವೆಂಬರ್​ನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. 2020ರ ಅಕ್ಟೋಬರ್​ನಲ್ಲಿ ಸಿಎಆರ್ ಕೇಂದ್ರ ವಿಭಾಗ, ಕೋರಮಂಗಲ ಕೆಎಸ್​ಆರ್​ಪಿ ಮೈದಾನದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿತ್ತು. ಎರಡೂ ಪರೀಕ್ಷೆಗಳನ್ನು ಸಿಸಿ ಕ್ಯಾಮರಾ ಮತ್ತು ವಿಡಿಯೋ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಅಂತಿಮವಾಗಿ ಆಯ್ಕೆಯಾದ 76 ಅಭ್ಯರ್ಥಿಗಳಿಗೆ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ ಸಿಂಧುತ್ವ ಪರಿಶೀಲನೆ ಚಾಲನೆ ನೀಡಲಾಗಿತ್ತು. ಕೇಂದ್ರ ವಿಭಾಗ, ದಕ್ಷಿಣ ವಿಭಾಗ, ಆಗ್ನೇಯಾ ವಿಭಾಗ ಡಿಸಿಪಿ ಮತ್ತು ಸಿಎಆರ್ ಎಸಿಪಿಗಳ ನೇತೃತ್ವದಲ್ಲಿ 76 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ಸೆರೆಯಾಗಿದ್ದ ವಿಡಿಯೋ ತುಣುಕುಗಳನ್ನು ತಾಳೆ ಮಾಡಿದ್ದಾಗ ಕೆಲ ಅಭ್ಯರ್ಥಿಗಳ ಮುಖ ಚಹರೆ ಹೋಲಿಕೆ ಆಗದೆ ಗೊಂದಲ ಉಂಟಾಗಿತ್ತು. ಅರ್ಜಿಯಲ್ಲಿ ಲಗತ್ತಿಸಿರುವ ಫೋಟೋಗೂ ಮತ್ತು ಲಿಖಿತ, ದೈಹಿಕ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳ ಫೋಟೋ ಮತ್ತು ಮುಖ ಚಹರೆಗೂ ತಾಳೆ ಆಗುತ್ತಿರಲಿಲ್ಲ. ಅನುಮಾನ ಬಂದು ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಿದಾಗ 14 ಅಭ್ಯರ್ಥಿಗಳ ಕಳ್ಳಾಟ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ 9 ಪ್ರಕರಣ ಮತ್ತು ಇತರ ಜಿಲ್ಲೆಗಳಲ್ಲಿ 5 ಎಫ್​ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಬಾರಿಗೆ ಕೆಎಸ್​ಆರ್​ಪಿ ಪೇದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದು ಐವರು ಅಭ್ಯರ್ಥಿಗಳು ಸೆರೆಸಿಕ್ಕಿದ್ದರು. ಸಿವಿಲ್ ಪೇದೆಗಳ ನೇಮಕಾತಿಯಲ್ಲೂ ಅಕ್ರಮ ಎಸಗಿರುವ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಖಚಿತವಾಗಿದೆ. ಉತ್ತರ ಕರ್ನಾಟಕ ಅಭ್ಯರ್ಥಿಗಳೇ ಹೆಚ್ಚಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅನ್ಯರು ಪರೀಕ್ಷೆಗೆ ಹಾಜರು: ಲಿಖಿತ ಪರೀಕ್ಷೆ ಬರೆಯಲು ಸಾಮರ್ಥ್ಯವಿದ್ದು, ದೈಹಿಕ ಸಾಮರ್ಥ್ಯ ಇಲ್ಲದಂಥ ಅಭ್ಯರ್ಥಿ ತಾನು ಲಿಖಿತ ಪರೀಕ್ಷೆ ಬರೆಯುತ್ತಿದ್ದ. ದೈಹಿಕ ಪರೀಕ್ಷೆಗೆ ಮೊದಲೇ ಗುರುತಿಸಿದ್ದ ಯುವಕನನ್ನು ಕಳುಹಿಸುತ್ತಿದ್ದ. ಅದೇ ರೀತಿ ದೈಹಿಕ ಪರೀಕ್ಷೆ ಎದರಿಸಲು ಬಲಶಾಲಿಯಾಗಿದ್ದು, ಲಿಖಿತ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗದೆ ಇದ್ದವರು ತಮ್ಮ ಪರವಾಗಿ ಲಿಖಿತ ಪರೀಕ್ಷೆಯನ್ನು ಬೇರೆಯವರ ಕಡೆಯಿಂದ ಬರೆಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಲೆಮರೆಸಿಕೊಂಡ ಅಭ್ಯರ್ಥಿಗಳು: ಆರಂಭದಲ್ಲಿ ಸಿಂಧುತ್ವ ಪರೀಕ್ಷೆಗೆ ಹಾಜರಾಗಿದ್ದ ಕೆಲವರ ಕಳ್ಳಾಟ ಬಯಲಾಗಿ ಪೊಲೀಸರಿಗೆ ಸೆರೆಯಾದರು. ಈ ವಿಷಯ ತಿಳಿದ ಅಕ್ರಮ ಎಸಗಿದ್ದ ಅಭ್ಯರ್ಥಿಗಳು ಸಿಂಧುತ್ವಕ್ಕೆ ಹಾಜರಾಗಿಲ್ಲ. ಅಂತವರಿಗೆ ನೋಟಿಸ್ ಕೊಟ್ಟು ಮೊಬೈಲ್​ಗೆ ಕರೆ ಮಾಡಿದರೂ ಗೈರಾಗಿದ್ದಾರೆ. ಅವರ ವಿರುದ್ಧವೂ ಎಫ್​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.