ನ್ಯೂಸ್

ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರ್ಮಿಕರ ಮೇಲೆ ಹರಿದ ಬಸ್​, ಪ್ರತ್ಯೇಕ ಪ್ರಕರಣದಲ್ಲಿ 14 ಜನರ ಸಾವು

ಮುಜಫ್ಫರ್​ನಗರ: ವಲಸೆ ಕಾರ್ಮಿಕರ ದಾರುಣ ಸಾವು ಮುಂದುವರಿದಿದೆ. ಒಂದೆಡೆ, ಮುಜಫ್ಪರ್​ನಗರದ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾಮಿರ್ಕರ ಮೇಲೆ ಬಸ್​ ಹರಿದು 6 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಮಧ್ಯಪ್ರದೇಶದ ಗುನಾದಲ್ಲಿ ಟ್ರಕ್ಕೊಂದು ಬಸ್​ಗೆ ಡಿಕ್ಕಿಯಾಗಿದ್ದರಿಂದ 8 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಮುಜಫ್ಫರ್​ನಗರ- ಸಹರಣ್​ಪುರ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮೂರುಗಳಿಗೆ ಸಾಗುತ್ತಿದ್ದರು. ಗಲೌಲಿ ಚೆಕ್​ಪೋಸ್ಟ್​ ಬಳಿ ಉತ್ತರಪ್ರದೇಶದ ಸಾರಿಗೆ ಸಮಸ್ತೆ ಬಸ್​ ಅವರ ಮೇಲೆ ಹರಿದಿದೆ. ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, ನಾಲ್ವರ ಸ್ಥಿತಿ ಗಂಭೀರವಾಗಿದೆ.

ದೂರದ ಮುಂಬೈನಿಂದ ಟ್ರಕ್​ನಲ್ಲಿ ಉತ್ತರಪ್ರದೇಶದ ತಮ್ಮೂರುಗಳಿಗೆ ಹೊರಟಿದ್ದರು. ಬುಧವಾರ ರಾತ್ರಿ ಮಧ್ಯಪ್ರದೇಶದ ಗುನಾ ಬಳಿ ಬಸ್​ವೊಂದಕ್ಕೆ ಟ್ರಕ್​ ಡಿಕ್ಕಿಯಾಗಿದೆ. ಪರಿಣಾಮ 8 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ವಲಸೆ ಕಾರ್ಮಿಕರಿಗಾಗಿ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳನ್ನು ಬಿಡಲಾಗುತ್ತಿದೆಯಾದರೂ, ಸಾವಿರಾರು ಸಂಖ್ಯೆಯಲ್ಲಿ ಜನರು ರೈಲು ನಿಲ್ದಾಣಗಳ ಎದುರು ಬೀಡು ಬಿಟ್ಟಿದ್ದಾರೆ. ಸೀಮಿತ ಸಂಖ್ಯೆಯಲ್ಲಿರುವ ರೈಲುಗಳಲ್ಲಿ ಸಾಗಲು ದಿನಗಟ್ಟಲೇ ಕಾಯಬೇಕಿದೆ. ಹೀಗಾಗಿ ಜನರು ಕಾಲ್ನಡಿಗೆ ಹಾಗೂ ಟ್ರಕ್​, ಲಾರಿ ಹಾಗೂ ಇತರ ವಾಹನಗಳಲ್ಲಿ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ.