ಬೆಂಗಳೂರು : ಅಂಚೆ ಇಲಾಖೆ ಆಯೋಜಿಸಿರುವ 13ನೇ ರಾಜ್ಯಮಟ್ಟದ ಅಂಚೆಚೀಟಿಗಳ ಬೃಹತ್ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆತಿದೆ. 'ಕರ್ನಾಪೆಕ್ಸ್-2024' ಅಂಚೆ ಚೀಟಿಗಳ ಹಬ್ಬ ಎಂಬ ಹೆಸರಿನಲ್ಲಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಜ್ಯದ ವಿವಿಧ ನಗರಗಳಲ್ಲಿ ಹಮ್ಮಿಕೊಳ್ಳುವ ರಾಜ್ಯಮಟ್ಟದ ಪ್ರದರ್ಶನವನ್ನು ಈ ಬಾರಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ನಾಲ್ಕು ದಿನಗಳ ಪ್ರದರ್ಶನವು ನಾಲ್ಕು ವಿಭಿನ್ನ ವಿಷಯ ವಸ್ತುಗಳನ್ನು ಹೊಂದಿದ್ದು, ಮೊದಲನೇ ದಿನ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ಎಂಬ ವಿಷಯವನ್ನಾಧರಿಸಿದ್ದು, ಇನ್ನುಳಿದಂತೆ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ, ಮಾನಸಿಕ ಆರೋಗ್ಯ ಮತ್ತು ಕ್ರೀಡೆ, ಸೀ ಸಬಲೀಕರಣ ಎಂಬ ವಿಷಯಗಳನ್ನಾಧರಿಸಿ ಇನ್ನೂ ಮೂರು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆಚೀಟಿ ಪ್ರದರ್ಶನಗಳು ನಡೆಯಲಿವೆ. ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆ, ಸಂವಾದಗಳನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್, ಗೌರವ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಅಶ್ವಿನಿ ಪುನೀತ್ ರಾಜಕುಮಾರ್, ಅಂಚೆ ಇಲಾಖೆ ಹಿರಿಯ ಅಧಿಕಾರಿಗಳಾದ ಎಸ್.ರಾಜೇಂದ್ರ ಕುಮಾರ್, ಎಲ್.ಕೆ.ಡ್ಯಾಶ್, ಕರ್ನಲ್ ಸುಶೀಲ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
" ಪೂರ್ವಜನ್ಮದ ಪುಣ್ಯ ಮಾಡಿದವರು ಕರ್ನಾಟಕದಲ್ಲಿ ಹುಟ್ಟುತ್ತಾರೆ. ಪೂಜಾಫಲ ಇದ್ದರೆ ಕನ್ನಡಿಗರಾಗುತ್ತಾರೆ. ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತವಾಗಿದ್ದು, ಅಂತಹ ಶ್ರೀಮಂತ ಪರಂಪರೆಯನ್ನು ಪರಿಚಯಿಸಲು ಅಂಚೆ ಇಲಾಖೆಯ ಕರ್ನಾಪೆಕ್ಸ್ ಕಾರ್ಯಕ್ರಮ ಪೂರಕವಾಗಿದೆ. ದೇಶದ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಕನ್ನಡಿಗರ ಸೇವೆ ಅನನ್ಯವಾಗಿದೆ. ನ್ಯಾಯಾಂಗ, ವೈದ್ಯಕೀಯ, ಭಾರತೀಯ ಸೇನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಕನ್ನಡಿಗರ ಹೆಜ್ಜೆಗುರುತುಗಳು ಅಚ್ಚಳಿಯದಂತೆ ಉಳಿದಿವೆ".
-ನಾಡೋಜ ಡಾ. ಮಹೇಶ ಜೋಶಿ, ಕಸಾಪ ಅಧ್ಯಕ್ಷ
ಇತಿಹಾಸ, ಸಂಸ್ಕೃತಿ ಅನಾವರಣ : ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲು ಕರ್ನಾಪೆಕ್ಸ್ ಅಂಚೆಚೀಟಿಗಳ ಹಬ್ಬದ ಮೂಲಕ ಅಂಚೆ ಇಲಾಖೆ ವಿಶೇಷ ವೇದಿಕೆಯನ್ನು ನಿರ್ಮಿಸಿದೆ. ನಾಲ್ಕು ದಿನಗಳ ರಾಜ್ಯಮಟ್ಟದ ಪ್ರದರ್ಶನದಲ್ಲಿ ೬೦೦ ಸ್ಪರ್ಧಾತ್ಮಕ ಹಾಗೂ ಸಂಗ್ರಹಾತ್ಮಕ ್ರೇಮ್‌ಗಳ ಪ್ರದರ್ಶನ, ೩೦ ಡೀಲರ್ ಭೂತಗಳು, ಡಿಜಿಟಲ್ ವಸ್ತುಪ್ರದರ್ಶನ, ವಿಚಾರ ಸಂಕಿರಣ, ಅಂಚೆಚೀಟಿ ಕುರಿತು ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಅಂಚೆ ಚೀಟಿ ಮತ್ತು ಲಕೋಟೆಗಳ ಬಿಡುಗಡೆ, ಇತ್ಯಾದಿ ವಿಭಿನ್ನ ಥೀಮ್‌ಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂಚೆಚೀಟಿ ಸಂಗ್ರಹವು ಒಂದು ವಿಲಕ್ಷಣ ಹವ್ಯಾಸವಾಗಿದ್ದು, ಯುವ ಸಮುದಾಯವನ್ನು ಪ್ರೇರೇಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾಗುವವರನ್ನು ರಾಷ್ಟ್ರಮಟ್ಟದ ಅಂಚೆಚೀಟಿ ಪ್ರದರ್ಶನಕ್ಕೆ ಕಳುಹಿಸುವುದು ಹಾಗೂ ಆಯ್ಕೆಯಾದವರಿಗೆ ಪದಕಗಳನ್ನು ನೀಡಲಾಗುತ್ತದೆ.