More

    ಮಾನವನನ್ನು ಮಹಾದೇವನನ್ನಾಗಿಸುವ ಸಾಧನ ಇಷ್ಟಲಿಂಗ; ಕಾಶಿ ಜಗದ್ಗುರುಗಳ ಪ್ರವಚನ

    ಬೆಂಗಳೂರು : ಮಾನವನನ್ನು ಮಹಾದೇವನನ್ನಾಗಿಸಲು ಇರುವ ಸಾಧನವೇ ಇಷ್ಟಲಿಂಗವಾಗಿದ್ದು, ಅಷ್ಠಾವರಣದ ರಕ್ಷಣೆಯಲ್ಲಿ ಅರಿಷಡ್ವರ್ಗಗಳೆಂಬ ಶತ್ರುಗಳನ್ನು ನಾಶ ಮಾಡಿ, ಪಂಚ ಆಚಾರಣೆಯಿಂದ ಧರ್ಮ ಪಾಲನೆ ಮಾಡಬೇಕು ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.

    ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಮನುಷ್ಯನಿಗೆ ಸಂಸ್ಕಾರದ ಮೂಲಕ ದೈವತ್ವ ಪಡೆಯಲು ಅವಕಾಶವಿದೆ. ವೀರಶೈವರು ಪೂಜಿಸುವ ಇಷ್ಟಲಿಂಗ ಪೂಜಾವ್ರತವು ಶಿರೋವ್ರತವಾಗಿದ್ದು, ಮನುಷ್ಯ ಭೂಮಿಗೆ ಜನಿಸಿ ಬರುವುದಕ್ಕಿಂತ ಮೊದಲೇ ಆತನೊಂದಿಗೆ ಸಂಬಂಧವನ್ನು ಹೊಂದಿದ್ದು, ಆತನ ಅಂತ್ಯದ ನಂತರವೂ ಆತನೊಂದಿಗಿರುತ್ತದೆ.

    ಶ್ರೀಸಿದ್ಧಾಂತ ಶಿಖಾಮಣಿಯಲ್ಲಿ ಜಗದ್ಗುರು ರೇಣುಕಾಚಾರ್ಯರು ‘ಭಕ್ತ ಮಾರ್ಗ ಕ್ರಿಯಾಚರ್ಯ ಸ್ಥಲ’ದಲ್ಲಿ ಹೊರಗಿನ ಶತ್ರುಗಳಿಂದ ರಕ್ಷಣೆ ಪಡೆಯಲು ಕೆಲವು ಕವಚಗಳಿರುವಂತೆ, ಅಷ್ಠಾವರಣಗಳೆಂಬ ಕವಚದಿಂದ ಅರಿಷಡ್ವರ್ಗಗಳೆಂಬ ಒಳಗಿನ ಶತ್ರುಗಳನ್ನು ನಿವಾರಿಸಿ ಧರ್ಮವನ್ನು ಪರಿಪಾಲಿಸಬೇಕೆಂದು ಉಪದೇಶಿಸಿದ್ದಾರೆ. ಭಗವಂತನನ್ನು ಸದಾ ನಿಷ್ಕಲ್ಮಶವಾಗಿ ಪ್ರೀತಿ ಮಾಡಬೇಕು, ಅದನ್ನೇ ಭಕ್ತಿ ಎನ್ನಲಾಗುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

    ಸಮಾರಂಭದಲ್ಲಿ ಶಿವಗಂಗೆಯ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಚಾಮರಾಜಪೇಟೆಯ ಸ್ನೇಹ ಬಳಗದವರು ಮಾಡಿದ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣದ ಭಾವಾರ್ಥ ತಿಳಿಸಿದರು. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಶಾಸಕರಾದ ಎಂ.ಕೃಷ್ಣಪ್ಪ, ಬಿ.ಎಸ್.ಪರಮಶಿವಯ್ಯ, ವಿದ್ವಾನ್ ಡಾ.ಸಿ.ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಷಡಕ್ಷರಿ ಶಾಸ್ತ್ರಿಗಳು ವೇದಘೋಷ ಮಾಡಿದರು. ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಉಮಾದೇವಿ, ಶಾಂತ ವಿ.ಗೌಡ, ಗಾಯಿತ್ರಿ ಮತ್ತಿತರರಿದ್ದರು.

    “ಭಾಷೆ, ಬಣ್ಣ, ಜಾತಿ ಎಂಬ ಕಾರಣಕ್ಕೆ ಮನುಷ್ಯರ ನಡುವೆ ಭೇದವಿರಬಾರದು. ಪರೋಪಕಾರವೆಂಬುದು ಜಗತ್ತಿನ ಯಾವುದೇ ಪ್ರಾಣಿಗಳಲ್ಲಿರದ ಮನುಷ್ಯನ ವಿಶೇಷ ಗುಣ. ಆದ್ದರಿಂದ ಕೈಲಾದಷ್ಟು ಪರೋಪಕಾರ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದನ್ನು ಮನವರಿಕೆ ಮಾಡಿಕೊಡುವುದಕ್ಕಾಗಿಯೇ ಕಾಶೀ ಜಗದ್ಗುರುಗಳು ಬೆಂಗಳೂರಿಗೆ ಆಗಮಿಸಿದ್ದು, ಎಲ್ಲರೂ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು.” – ಎಂ.ಕೃಷ್ಣಪ್ಪ, ವಿಜಯನಗರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts