ಹೈದರಾಬಾದ್: ಹದಿಮೂರು ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯ ಮರಿಪೆದ ಮಂಡಲದ ಬೊಯಪಲೇಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋದತಾಂಡದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಶ್ರಾವಂತಿ (13) ಮೃತ ಬಾಲಕಿ. ಮಂಡಲ ಕೇಂದ್ರದ ಶಾಲೆಯಲ್ಲಿ ಶ್ರಾವಂತಿ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ರಾಮನವಮಿ ರಜೆ ಹಿನ್ನೆಲೆಯಲ್ಲಿ ತನ್ನ ಫ್ರೆಂಡ್ಸ್ ಜತೆ ಗುರುವಾರ ಸಂಜೆಯವರೆಗೂ ಶ್ರಾವಂತಿ ಆಟವಾಡಿದ್ದಳು. ತಾಂಡದಿಂದ ಕೆಲವೇ ದೂರದಲ್ಲಿ ನಿರ್ಮಾಣವಾಗಿರುವ ಹೊಸ ಮನೆಯಲ್ಲಿ ಮಲಗಲು ಪಾಲಕರು ಹೋದರು. ಆದರೆ, ಶ್ರಾವಂತಿ ತನ್ನ ಅಜ್ಜಿಯ ಜತೆ ಹಳೆಯ ಮನೆಯಲ್ಲೇ ಮಲಗಿಕೊಂಡಳು.
ಶುಕ್ರವಾರ ಮುಂಜಾನೆ 3 ಗಂಟೆಗೆ ಎಚ್ಚರಗೊಂಡ ಶ್ರಾವಂತಿ ಎದೆನೋವು ಎಂದು ತನ್ನ ಅಜ್ಜಿಯ ಬಳಿ ಹೇಳಿದ್ದಾಳೆ. ಹೊರಗಡೆ ಹೋಗಿ ಮೂರ್ತ ವಿಸರ್ಜನೆ ಮಾಡಿ ಮತ್ತೆ ಮನೆಗೆ ಬಂದು ಮಲಗಿಕೊಂಡಳು. ಆಕೆಯ ತುಂಬಾ ಸುಸ್ತಾಗಿರುವುದನ್ನು ಗಮನಿಸಿದ ಅಜ್ಜಿ, ಶ್ರಾವಂತಿಯ ತಂದೆಗೆ ಮಾಹಿತಿ ತಿಳಿಸಿದರು.
ಹಳೆಯ ಮನೆಗೆ ಬಂದ ಶ್ರಾವಂತಿ ತಂದೆ ಆಕೆಯ ಸಿಪಿಆರ್ ಮಾಡಿ, ತಕ್ಷಣ ಆಕೆಯನ್ನು ಮರಿಪೆದ ಮಂಡಲದಲ್ಲಿರುವ ಆರ್ಎಂಪಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆದರೆ, ಅದನ್ನು ಒಪ್ಪದ ಪಾಲಕರು ಬದುಕಿಸಿಕೊಳ್ಳಬಹುದು ಎಂಬ ಆಸೆಯಿಂದ ಖಮ್ಮಮ್ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.
ಮಗಳ ಸಾವಿನ ಸುದ್ದಿ ಕೇಳಿದ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಆಡಿ ನಲಿಯಬೇಕಾದ ಬಾಲಕಿ ಹೃದಯಾಘಾತಕ್ಕೆ ಬಲಿಯಾದಳು ಎಂಬುದನ್ನು ತಿಳಿದು ಇಡೀ ಊರೇ ಕಂಬಿನಿ ಮಿಡಿದಿದೆ. (ಏಜೆನ್ಸೀಸ್)