ಮೃತ ಲಾವಣ್ಯ 
ನ್ಯೂಸ್

ಹಬ್ಬದ ಸಂಭ್ರಮದ ಮಧ್ಯೆ ಯಾರಿಗೂ ಕೇಳಲಿಲ್ಲ ಅಪ್ರಾಪ್ತೆಯ ಅಳು: ದುರಂತ ಅಂತ್ಯ ಕಂಡ 13ರ ಬಾಲೆ

ಚೆನ್ನೈ: ಹಬ್ಬದ ಸಂದರ್ಭದಲ್ಲಿ ಎತ್ತಿನ ಬಂಡಿಯಲ್ಲಿಟ್ಟಿದ್ದ ಜನರೇಟರ್​ಗೆ ಕೂದಲು ಸಿಲುಕಿ 13 ವರ್ಷದ ಅಪ್ರಾಪ್ತೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.

ಮೃತ ಹುಡುಗಿಯನ್ನು ಲಾವಣ್ಯ ಎಂದು ಗುರುತಿಸಲಾಗಿದೆ. ಈಕೆ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

ಡೀಸೆಲ್​ ಚಾಲಿತ ಜನರೇಟರ್​ ಅನ್ನು ಎತ್ತಿನ ಬಂಡಿಯಲ್ಲಿ ಇಡಲಾಗಿತ್ತು. ಅದೇ ಎತ್ತಿನ ಗಾಡಿಯಲ್ಲಿ ಹುಡುಗಿ ಇರುವಾಗ ಜನರೇಟ್​ನ ಸಣ್ಣ ಫ್ಯಾನ್​ಗೆ ಕೂದಲು ಸಿಲುಕಿದೆ. ಆದರೆ, ಸ್ಥಳದಲ್ಲಿ ಭಾರೀ ಶಬ್ದ ಇದ್ದಿದ್ದರಿಂದ ಬಾಲಕಿ ಅಳುವುದು ಯಾರಿಗೂ ಗೊತ್ತಾಗಲಿಲ್ಲ. ಜನರೇಟರ್​ ಸ್ವಿಚ್​ ಆಫ್​ ಮಾಡಿದಾಗ ಮಾತ್ರ ಬಾಲಕಿ ಅಳುವುದು ಕೇಳಿಸಿದೆ.

ಬಾಲಕಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಂದು ಕಾಂಚಿಪುರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಬಾಲಕಿಯ ಪ್ರಾಣವನ್ನು ಉಳಿಸಲು ಆಗಲಿಲ್ಲ. ಈ ಕುರಿತು ಮಗರಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನರೇಟರ್ ಆಪರೇಟರ್ ಮುನಿಸಾಮಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಲಾವಣ್ಯ ಅವರ ತಾಯಿ ಮೂರು ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಆಕೆಯ ತಂದೆ ಸರವಣನ್ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ತನ್ನ ಸಹೋದರ ಭುವನೇಶ್ ಜೊತೆಗೆ ತನ್ನ ಅಜ್ಜಿಯರ ಜೊತೆ ವಾಸಿಸುತ್ತಿದ್ದಳು. (ಏಜೆನ್ಸೀಸ್​)