ನಾಗ್ಪುರ: ಅದೆಷ್ಟೋ ಮಕ್ಕಳು ಆನ್ಲೈನ್ ಗೇಮ್ಗಳಿಗೆ ಅಂಟಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗೇ, ಇದೇ ಆನ್ಲೈನ್ ಗೇಮ್ ಕಾರಣದಿಂದ ಜೀವ ತೆಗೆದುಕೊಂಡವರೂ ಇದ್ದಾರೆ.
ಇದೀಗ ಪೊಲೀಸ್ ಸಿಬ್ಬಂದಿಯೋರ್ವನ 13 ವರ್ಷದ ಪುತ್ರ ಪಬ್ ಜಿಯಲ್ಲಿ ಸೋತ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಈ ಬಾಲಕ ಏಳನೇ ತರಗತಿಯಲ್ಲಿ ಓದುತ್ತಿದ್ದ. ನಾಗ್ಪುರದ ನರ್ಮದಾ ಕಾಲನಿಯಲ್ಲಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದ. ಸದಾ ಮೊಬೈಲ್ನಲ್ಲಿ ಪಬ್ ಜಿ ಆಡುತ್ತಿದ್ದ. ಆದರೆ ಪದೇಪದೆ ಸೋಲುತ್ತಿದ್ದ. ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ. ಮಂಗಳವಾರ ತನ್ನ ಮನೆಯ ಕಿಟಕಿಗೆ ವೇಲಿನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ತಂದೆ ನಾಗ್ಪುರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಕೆಗೆ ನಮ್ಮ ಬಗ್ಗೆ ಎಷ್ಟು ಕಾಳಜಿ … ಕಂಗನಾಗೆ ಮತ್ತೊಮ್ಮೆ ಟಾಂಗ್ ಕೊಟ್ಟ ತಾಪ್ಸಿ
ಹೆಚ್ಚಿನ ಸಂಖ್ಯೆಯ ಮಕ್ಕಳು, ಯುವಕರು ಪಬ್ ಜಿ ಆಟದ ಗೀಳು ಅಂಟಿಸಿಕೊಂಡಿದ್ದಾರೆ. ಇದರಿಂದಾಗಿ ಕ್ರೈಂಗಳ ಪ್ರಮಾಣವೂ ಹೆಚ್ಚಾಗಿದೆ. ಬೆಳೆಯುತ್ತಿರುವ ಮನಸುಗಳ ಮೇಲೆ ಋಣಾತ್ಮಕ ಪ್ರಭಾವ ಬೀರುವ ಈ ಆಟದಿಂದಾಗಿ ಅನೇಕರು ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)