ನ್ಯೂಸ್

ವಿಮಾನದ ಚಕ್ರದ ಬದಿ ಕುಳಿತು ಅಫ್ಘಾನ್​ನಿಂದ ಭಾರತಕ್ಕೆ ಬಂದ 13 ವರ್ಷದ ಬಾಲಕ!| Shocking

Shocking: ಅಫ್ಘಾನಿಸ್ತಾನದ ಕಾಬೂಲ್​ನಿಂದ 13 ವರ್ಷದ ಬಾಲಕನೊಬ್ಬ ಕಾಮ್ ಏರ್​ಲೈನ್ಸ್​ ವಿಮಾನದ ಚಕ್ರದ ಬಳಿ ಕುಳಿತು ಬರೋಬ್ಬರಿ 94 ನಿಮಿಷಗಳ ಪ್ರಯಾಣಿಸಿ ಸುರಕ್ಷಿತವಾಗಿ ಭಾನುವಾರ (ಸೆ.21) ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಭದ್ರತಾ ಸಿಬ್ಬಂದಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಕಾಬೂಲ್​ನ​ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಮಾನದ ಪ್ರಯಾಣದ ಸಮಯ 94 ನಿಮಿಷ. ಅಷ್ಟು ನಿಮಿಷಗಳ ಕಾಲ ಬಾಲಕ KAM ಏರ್ ವಿಮಾನದ (RQ4401) ಚಕ್ರದ ಬದಿ ಕುಳಿತು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ.

ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಬಾಲಕ ಚಕ್ರದಿಂದ ಇಳಿದು ಏರ್​ಪೋರ್ಟ್​ನ T3 ಟ್ಯಾಕ್ಸಿವೇಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ತಕ್ಷಣ ಭದ್ರತಾ ಸಿಬ್ಬಂದಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾಬೂಲ್​ ಏರ್​ಪೋರ್ಟ್​ನಿಂದ ಬಾಲಕ ಕಳ್ಳಮಾರ್ಗದ ಮೂಲಕ ಇರಾನ್​ಗೆ ತೆರಳಲು ಇಚ್ಚಿಸಿದ್ದ ಎನ್ನಲಾಗಿದೆ. ಆದರೆ ತಪ್ಪಾದ ವಿಮಾನದ ಚಕ್ರದ ಬಳಿ ಕುಳಿತು ದೆಹಲಿಗೆ ಬಂದಿಳಿದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ದೆಹಲಿ ಏರ್​​ಪೋರ್ಟ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಬಾಲಕನನ್ನು ಅಂದೆ ಭಾನುವಾರ ಸಂಜೆ 3:31 ಕ್ಕೆ ಅದೇ ವಿಮಾನಯಾನ ಸಂಸ್ಥೆಯಾದ ಕೆಎಎಂ ಏರ್‌ನಲ್ಲಿ ವಾಪಸ್ ಕಳುಹಿಸಲಾಗಿದೆ. ಅಪ್ರಾಪ್ತ ವಯಸ್ಕನಾಗಿದ್ದರಿಂದ ಮತ್ತುವೀಸಾ ಇಲ್ಲದೆ ದೇಶವನ್ನು ಪ್ರವೇಶಿಸಿದ್ದಕ್ಕೆ ಅವನಿಗೆ ಶಿಕ್ಷೆ ವಿಧಿಸಲಾಗಿಲ್ಲ. ಸುರಕ್ಷಿತವಾಗಿ ಅವನನ್ನು ಕುಟುಂಬಕ್ಕೆ ಹಿಂದಿರುಗಿಸುವುದು ಆದ್ಯತೆಯಾಗಿತ್ತು ಎಂದು ಹೇಳಿದ್ದಾರೆ.

ಏರ್​ಪೋರ್ಟ್​ನ ಭದ್ರತಾ ವಿಭಾಗದ ಅಧಿಕಾರಿಗಳ ಉನ್ನತ ಮಟ್ಟದ ಚರ್ಚೆಗಳ ಬಳಿಕ ಬಾಲಕನನ್ನು ವಾಪಸ್ ಅಫ್ಘಾನಿಸ್ತಾಕ್ಕೆ ಗಡಿಪಾರು ಮಾಡಲಾಗಿದೆ ಎನ್ನಲಾಗಿದೆ. ವಾಪಸ್ ಕಳುಹಿಸಿಲು ಪ್ರಮಾಣಿರ ಕಾರ್ಯವಿಧಾನಗಳನ್ನು ಅನುಸರಿಸಲಾಗಿದ್ದು ಬಾಲಕ ಈಗಾಗಲೇ ಕಾಬೂಲ್ ತಲುಪಿದ್ದಾನೆ ಎಂದು ತಿಳಿಸಿದ್ದಾರೆ.

ಕಾಬೂಲ್ ಏರ್​ಪೋರ್ಟ್​ನಲ್ಲಿ ಭದ್ರತಾ ಲೋಪ

ಕಾಬೂಲ್‌ನಲ್ಲಿ ಭದ್ರತಾ ತಪಾಸಣೆಗಳನ್ನು ತಪ್ಪಿಸಲು ಇಂತಹ ಅಪ್ರಾಪ್ತ ಯುವಕರು ಕಾನೂನುಬದ್ಧ ಪ್ರಯಾಣಿಕರನ್ನು ಬೆನ್ನಟ್ಟಿ, ಯಾವುದೇ ಸುಳಿವು ಸಿಗದಂತೆ ವಿಮಾನವನ್ನು ಪ್ರವೇಶಿಸುತ್ತಾರೆ ಎನ್ನಲಾಗಿದೆ. ಬಾಲಕನ ಈ ಅಪಾಯಕಾರಿ ಪ್ರಯಾಣವು ಕಾಬೂಲ್ ಏರ್​ಪೋರ್ಟ್​ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಭದ್ರತಾ ತಪಾಸಣೆಯಲ್ಲಿನ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಠಿಣ ತಪಾಸಣೆಗೆ ಸರ್ಕಾರ ಸೂಚಿಸಿದೆ. (ಏಜೆನ್ಸೀಸ್)