ನವದೆಹಲಿ: ಯುವ ಉದ್ಯಮಿ ನವ್ ಶಾ ಎಂಬುವರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅವರು ಫಿಜಿ ದೇಶದಲ್ಲಿ ಭೇಟಿಯಾದ 86 ವರ್ಷದ ಉಬರ್ ಚಾಲಕನ ಬಗ್ಗೆ ಮಾತನಾಡಿದ್ದಾರೆ. ಕೇವಲ ಚಾಲಕ ( Uber Driver ) ಮಾತ್ರವಲ್ಲದೆ ಹಲವಾರು ಕಂಪನಿಗಳನ್ನು ಹೊಂದಿರುವ ಉದ್ಯಮಿಯೂ ಆಗಿದ್ದಾರೆ ಎಂದು ನವ್ ಶಾ ಅವರು ತಿಳಿಸಿದ್ದಾರೆ.
ಉಬರ್ ಕಾರು ಏರಿದ ನವ್ ಶಾ ಅವರು ವೃದ್ಧ ಚಾಲಕನನ್ನು ಮಾತನಾಡಿಸುತ್ತಾ ನಿಮ್ಮ ಖರ್ಚುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಈ ವೇಳೆ ಉತ್ತರಿಸುವ ಚಾಲಕ, ನಾನು ವಾರ್ಷಿಕ 175 ಬಿಲಿಯನ್ ಡಾಲರ್ ವಹಿವಾಟು ಹೊಂದಿರುವ ಕಂಪನಿಯ ಮಾಲೀಕನೆಂದು ಎಂದು ಹೇಳುತ್ತಾರೆ. ಅಲ್ಲದೆ, ಪ್ರತಿ ವರ್ಷ 24 ಹುಡುಗಿಯರ ಶಿಕ್ಷಣವನ್ನು ಉಚಿತವಾಗಿ ಪ್ರಾಯೋಜಿಸುತ್ತಿರುವುದಾಗಿಯೂ ತಿಳಿಸುತ್ತಾರೆ. ವೃದ್ಧನ ಮಾತು ಕೇಳಿದ ನವ್ ಶಾ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸುತ್ತಾರೆ.
ನಾನು ಮೂವರು ಹೆಣ್ಣುಮಕ್ಕಳ ತಂದೆ. ನಾನು ಅವರೆಲ್ಲರಿಗೂ ಉತ್ತಮ ಶಿಕ್ಷಣ ನೀಡಿದ್ದೇನೆ. ಅವರು ಈಗ ದೊಡ್ಡ ಹುದ್ದೆಗಳಲ್ಲಿದ್ದಾರೆ. ನನ್ನ ಹೆಣ್ಣುಮಕ್ಕಳಿಗೆ ನಾನು ನೀಡಿದಂತೆಯೇ ಇತರ ಹುಡುಗಿಯರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡಲು ಬಯಸಿದ್ದೆ. ನನಗೆ 13 ಆಭರಣ ಅಂಗಡಿಗಳು, ಆರು ರೆಸ್ಟೋರೆಂಟ್‌ಗಳು ಮತ್ತು ಒಂದು ಸೂಪರ್ ಮಾರ್ಕೆಟ್ ಇದೆ. ನಾನಿದನ್ನು ಒಬ್ಬಂಟಿಯಾಗಿ ಪ್ರಾರಂಭಿಸಲಿಲ್ಲ. ಇದು ನನ್ನ ತಂದೆ 1929 ರಲ್ಲಿ ಕೇವಲ ಐದು ಪೌಂಡ್‌ಗಳೊಂದಿಗೆ ಪ್ರಾರಂಭಿಸಿದ ವ್ಯವಹಾರವಾಗಿದೆ ಎಂದರು.
ನಿಜವಾದ ಯಶಸ್ಸು ನೀವು ಎಷ್ಟು ಎತ್ತರಕ್ಕೆ ಏರುತ್ತೀರಿ ಎಂಬುದಲ್ಲ. ಆ ಪ್ರಯಾಣದಲ್ಲಿ ನೀವು ಎಷ್ಟು ಜನರನ್ನು ಮೇಲೆ ಎತ್ತುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ವೃದ್ಧ ಚಾಲಕ ಇದೇ ಸಮಯದಲ್ಲಿ ಹೇಳುತ್ತಾರೆ. ಸುಮ್ಮನೇ ಮನೆಯಲ್ಲಿ ಕೂರುವ ಬದಲು ಉಬರ್ ಚಾಲನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅನೇಕ ಜನರು ಲೈಕ್ಸ್ ಮತ್ತು ಕಾಮೆಂಟ್‌ಗಳ ಸುರಿಮಳೆಹೈಯುತ್ತಿದ್ದಾರೆ.
ಈ ರೀತಿಯ ಸುದ್ದಿಯಿಂದಾಗಿ ಈ ಹಿಂದೆ ಬೆಂಗಳೂರಿನ ಆಟೋ ಚಾಲಕನೊಬ್ಬ ವೈರಲ್ ಆಗಿದ್ದ. 2025, ಅಕ್ಟೋಬರ್ 4ರಂದು ಅಕಾಶ್ ಅನಂದಾನಿ ಹೆಸರಿನ ಇಂಜಿನಿಯರ್ ಒಬ್ಬರು ತಮ್ಮ ಎಕ್ಸ್ (@Kashh56) ಖಾತೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಅವರು ಆಟೋ ಸವಾರಿ ಮಾಡುತ್ತಿದ್ದಾಗ, ಚಾಲಕನ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಚಾಲಕ ಹೇಳಿದ್ದನ್ನು ಕೇಳಿ ದಂಗಾಗಿದ್ದರು. ಅಷ್ಟಕ್ಕೂ ಚಾಲಕ ಹೇಳಿದ್ದೇನೆಂದರೆ, ನನಗೆ 4 ರಿಂದ 5 ಕೋಟಿ ಮೌಲ್ಯದ ಎರಡು ಮನೆಗಳಿವೆ. ಅವುಗಳನ್ನು ಬಾಡಿಗೆಗೆ ನೀಡಿದ್ದೇನೆ. ಅದರಿಂದ ತಿಂಗಳಿಗೆ 2 ರಿಂದ 3 ಲಕ್ಷ ರೂ. ಆದಾಯ ಬರುತ್ತದೆ. ಹಾಗೆಯೇ, AI ಆಧಾರಿತ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಹೇಳುತ್ತಾನೆ. ಈ ವೇಳೆ ಚಾಲಕ ಕೈಯಲ್ಲಿ ಆ್ಯಪಲ್ ವಾಚ್ ಮತ್ತು ಏರ್‌ಪಾಡ್ಸ್ ಕೂಡ ಧರಿಸಿದ್ದ. ಈ ಪೋಸ್ಟ್ ಎಕ್ಸ್ನಲ್ಲಿ ವೈರಲ್ ಆಗಿ, 1,800ಕ್ಕೂ ಹೆಚ್ಚು ಲೈಕ್‌ಗಳು, 84,000ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತು. ನಂತರ ಇದು ಸುದ್ದಿಯಾಗಿ ಹರಡಿ, ಹಿಂದುಸ್ತಾನ್ ಟೈಮ್ಸ್, NDTV, ಮಿಂಟ್ ಮುಂತಾದ ಮಾಧ್ಯಮಗಳು ವರದಿ ಕೂಡ ಮಾಡಿದವು. (ಏಜೆನ್ಸೀಸ್)