ನ್ಯೂಸ್

ಸಲಾರ್ ರಿಲೀಸ್​ಗೆ ದಿನಗಣನೆ: ಈ ನಗರದಲ್ಲಿ ತಲೆ ಎತ್ತಿದ ಪ್ರಭಾಸ್ 120 ಅಡಿಯ ಬೃಹತ್ ಕಟೌಟ್!

ಮುಂಬೈ: ಟಾಲಿವುಡ್​ನ ರೆಬೆಲ್​ ಸ್ಟಾರ್ ಪ್ರಭಾಸ್ ಮತ್ತು ಸ್ಟಾರ್​ ನಿರ್ದೇಶಕ ಪ್ರಶಾಂತ್ ನೀಲ್​ ಕಾಂಬಿನೇಷನ್​​ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್'​ ಇದೀಗ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಪ್ರಭಾಸ್​ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

ಇತ್ತೀಚೆಗಷ್ಟೇ 'ಸಲಾರ್​ ಭಾಗ 1' ಸೀಸ್​ ಫೈರ್​ ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಎ-ರೇಟ್ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಇದೀಗ ಜಾಗತಿಕವಾಗಿ ಸಿನಿಪ್ರೇಕ್ಷಕರ ಮುಂದೆ ಅಬ್ಬರಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಪ್ರಭಾಸ್​ ಫ್ಯಾನ್ಸ್​ ಸೇರಿದಂತೆ ಚಿತ್ರರಸಿಕರಲ್ಲಿ ತೀವ್ರ ಕುತೂಹಲ ಮೂಡಿದ್ದು, ನಗರದ ಮುಖ್ಯ ಚಿತ್ರಮಂದಿರಗಳ ಮುಂದೆ ನಟನ ಬೃಹತ್ ಕಟೌಟ್​ಗಳು ತಲೆ ಎತ್ತುತ್ತಿವೆ.

ಈ ಪೈಕಿ ಪ್ರಭಾಸ್‌ ಅವರ 120 ಅಡಿಯಿರುವ ಬೃಹತ್ ಕಟೌಟ್ ಇದೀಗ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇದು ಯಾವ ರಾಜ್ಯದಲ್ಲಿ ಗೊತ್ತಾ? ತೆಲುಗು ರಾಜ್ಯದಲ್ಲಿ ಅಲ್ಲ! ಬದಲಿಗೆ ಬಾಲಿವುಡ್​ನ ಮಹಾನಗರಿ ಮುಂಬೈ ನಗರದಲ್ಲಿ. ಮುಂಬೈನ ಥಾಣೆಯ ಆರ್-ಮಾಲ್ ಮುಂಭಾಗದಲ್ಲಿ ಈ ಕಟೌಟ್ ಇರಿಸಲಾಗಿದ್ದು, ಅದರ ಮುನ್ನೋಟದ ವಿಡಿಯೋ ಸದ್ಯ ಪ್ರಭಾಸ್ ಫ್ಯಾನ್ಸ್​ಗಳ ಪ್ರೀತಿಗೆ ಪಾತ್ರವಾಗಿದೆ.

ಸಲಾರ್​ನಲ್ಲಿ ಪ್ರಭಾಸ್​, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ತಿನ್ನು ಆನಂದ್, ಶ್ರೀಯಾ ರೆಡ್ಡಿ ಮುಂತಾದವರ ತಾರಾಗಣವಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).