ನ್ಯೂಸ್

ತುರ್ತು ಕೆಲಸಗಳಿಗಾಗಿ ಸಾರ್ವಜನಿಕರಿಗೆ 12 ಗಂಟೆಗಳ ಪಾಸ್: ಸ್ಥಳೀಯ ಠಾಣೆಗಳಲ್ಲಿ ವಿತರಣೆಗೆ ವ್ಯವಸ್ಥೆ

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸರಬರಾಜು ಹಾಗೂ ತುರ್ತು ಸೇವೆಗಳಿಗೆ ಮಾತ್ರ ಒದಗಿಸಲಾಗುತ್ತಿದ್ದ ‘ಪಾಸ್’ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಈಗ ಸಾರ್ವಜನಿಕರು ಸಹ ತುರ್ತು ಕೆಲಸಗಳಿಗಾಗಿ 12 ತಾಸುಗಳ ಪಾಸ್ ಪಡೆಯಬಹುದಾಗಿದೆ.

ಕರೊನಾ ವೈರಸ್ ಹರಡುವ ಭೀತಿಯಿಂದಾಗಿ ಮಾ.25ರಿಂದ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿದೆ. ಸಾರ್ವಜನಿಕರು ಅನವಶ್ಯಕವಾಗಿ ಹಾಗೂ ಗುಂಪು ಕಟ್ಟಿಕೊಂಡು ಓಡಾಡುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದಾಗ್ಯೂ ಕೆಲವರು ತುರ್ತು ಸೇವೆ ನೆಪದಲ್ಲಿ ಓಡಾಡುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಅಗತ್ಯ ವಸ್ತುಗಳ ಸರಬರಾಜು ಹಾಗೂ ತುರ್ತು ಸೇವೆಗಳಿಗೆ ಪಾಸ್ ಜಾರಿಗೊಳಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತುರ್ತು ಕೆಲಸದ ನಿಮಿತ್ತ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ 12 ತಾಸಿನ ಅವಧಿಗೆ ಪಾಸ್ ಕಲ್ಪಿಸಲಾಗಿದೆ. ಸಾರ್ವಜನಿಕರು ಆಯಾ ಠಾಣೆಗಳಲ್ಲಿ ಪಡೆಯಬಹುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ಆನ್​ಲೈನ್ ಪಾಸ್ ನೋಂದಣಿ ಹೀಗೆ: ಅಗತ್ಯ ವಸ್ತುಗಳ ಸರಬ ರಾಜು ಹಾಗೂ ತುರ್ತು ಸೇವೆಗಳಿಗೆ ಪಾಸ್ ಪಡೆಯಲು ಮೊಬೈಲ್ ಅಥವಾ ಕಂಪ್ಯೂಟರ್​ನಲ್ಲಿ ‘ಕೆಎಸ್​ಪಿ ಕ್ಲಿಯರ್ ಪಾಸ್​ವೆುೖಗೇಟ್’ ವೆಬ್​ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ವೆಬ್​ಲಿಂಕ್ ತೆರೆದ ಬಳಿಕ ಮೊದಲಿಗೆ ಹೆಸರು, ಫೋನ್ ನಂಬರ್, ಗುರುತಿನ ಚೀಟಿ, ಕಂಪನಿ ಹೆಸರನ್ನು ಒದಗಿಸಬೇಕು. ಖಾತ್ರಿಗಾಗಿ ಒಟಿಪಿ ನಮೂದಿಸಬೇಕು. ನಂತರ ಕಂಪನಿ ಹೆಸರು, ವಿಳಾಸ, ಸ್ಥಳೀಯ ಠಾಣೆಯ ಹೆಸರು, ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಹದ್ಯೋಗಿಯ ಮಾಹಿತಿ ನೀಡಬೇಕು. ಬಳಿಕ ಕಂಪನಿಗೆ ಸಂಬಂಧಿಸಿದ ಪ್ಯಾನ್ ಅಥವಾ ಜಿಎಸ್​ಟಿ ಪ್ರತಿ ಅಪ್​ಲೋಡ್ ಮಾಡಬೇಕು. ಈ ಮಾಹಿತಿ ಪಾಸ್ ವಿತರಣಾಧಿಕಾರಿಗಳ ಅನುಮೋದನೆಗೆ ಹೋಗುತ್ತದೆ. ಪರಿಶೀಲಿಸಿ ಪಾಸ್ ಮಂಜೂರು ಮಾಡುತ್ತಾರೆ. ಬಳಿಕ ಮೊಬೈಲ್ ನಂಬರ್​ಗೆ ಹಾಗೂ ಇ-ಮೇಲ್​ಗೆ ಮಾಹಿತಿ ಬರುತ್ತದೆ. ಆಗ ಮೈಗೇಟ್ ವೆಬ್​ಸೈಟ್​ನಲ್ಲಿ ಲಾಗಿನ್ ಆಗಿ ಪಾಸ್ ಪಡೆಯಬಹುದು.

ಒಂದು ಕಂಪನಿಗೆ ಏಕಕಾಲಕ್ಕೆ ನೂರು ಪಾಸ್ ಮಾತ್ರ ನೋಂದಣಿಯಾಗುತ್ತದೆ. ಹೆಚ್ಚಿನ ಪಾಸ್ ಬೇಕಾದರೆ ಮತ್ತೊಮ್ಮೆ ಕೋರಿಕೆ ಕಳುಹಿಸಿ ನೋಂದಣಿ ಮಾಡಿಕೊಳ್ಳಬೇಕು.

ಯಾವುದಕ್ಕೆ ಪಾಸ್ ಲಭ್ಯ?

ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು, ಸಂಬಂಧಿಕರ ಅನಾರೋಗ್ಯ ವಿಚಾರಿಸಲು, ಅಂತ್ಯಸಂಸ್ಕಾರಗಳಲ್ಲಿ ಭಾಗಿಯಾಗಲು ಮಾತ್ರ ಪಾಸ್ ಸಿಗಲಿದೆ. ಸ್ಥಳೀಯ ಠಾಣೆಗೆ ಭೇಟಿ ಕೊಟ್ಟು, ಪೂರಕವಾದ ದಾಖಲೆಗಳನ್ನು ಒದಗಿಸಬೇಕು. ಅಗತ್ಯತೆ ಇರುವುದು ಮನವರಿಕೆಯಾದರೆ ಪಾಸ್ ವಿತರಿಸುತ್ತಾರೆ. ಅಲ್ಲದೆ, ಗುರುತಿನಚೀಟಿ ಹಾಗೂ ಫೋನ್ ನಂಬರ್ ಸೇರಿ ಇನ್ನಿತರ ವಿವರಗಳನ್ನು ನೀಡಬೇಕು. ಬೆಳಗ್ಗೆ ಪಾಸ್ ಪಡೆದು ಸಂಜೆ ವೇಳೆಗೆ ವಾಪಸ್ ಠಾಣೆಗೆ ತಂದು ಕೊಡಬೇಕು. ಪ್ರತಿ ಠಾಣೆಗೆ 200 ಪಾಸ್ ಲಭ್ಯವಿರುತ್ತವೆ. ಈ ಸೌಲಭ್ಯ ಕೆಲ ಠಾಣೆಗಳಲ್ಲಿ ಗುರುವಾರ ಆರಂಭವಾಗಿದೆ.