ಬೆಂಗಳೂರು: ಇನ್ನೆಂದು ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಕರೊನಾದ ವೇಗಗತಿಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಲಾಕ್‌ಡೌನ್ ಮೊರೆ ಹೋಗಲೇಬೇಕಾಗಿದೆ.
ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಸೋಂಕನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ನಾಡಿದ್ದು ಅಂದರೆ ಮಂಗಳವಾರ ರಾತ್ರಿ 8 ಗಂಟೆಯಿಂದ ಮುಂದಿನ ಏಳು ದಿನಗಳವರೆಗೆ ಲಾಕ್‌ಡೌನ್ ಮಾಡಲಾಗುವುದು ಎಂದು ನಿನ್ನೆ ಘೋಷಿಸಿದ್ದರು.
ಆದರೆ ಇದೀಗ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಮಾತ್ರವಲ್ಲದೇ ಇನ್ನೂ ಕನಿಷ್ಠ 10 ಜಿಲ್ಲೆಗಳು ಲಾಕ್‌ಡೌನ್ ಆಗುವ ಸಾಧ್ಯತೆ ಇದೆ ಎಂಬ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಸೂಚ್ಯವಾಗಿ ತಿಳಿಸಿದ್ದಾರೆ.
ಲಾಕ್‌ಡೌನ್ ಕುರಿತಂತೆ ನಡೆದಿರುವ ಸಭೆಯ ಬಳಿಕ ಮಾತನಾಡಿರುವ ಸಚಿವ ಅಶೋಕ್ ಸದ್ಯ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಒಂದು ವಾರ ಲಾಕ್‌ಡೌನ್ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತು ನಾಳೆ (ಸೋಮವಾರ) ಸರ್ಕಾರದಿಂದ ಮಾರ್ಗಸೂಚಿ ಹೊರಬೀಳಲಿದೆ. ಇದು ಸದ್ಯದ ಮಟ್ಟಿಗೆ ಏಳು ದಿನಗಳು ಎಂದು ಹೇಳಲಾಗುತ್ತಿದೆ. ಮುಂದಿನ ಪರಿಸ್ಥಿತಿ ನೋಡಿ ಭವಿಷ್ಯದ ನಿರ್ಧಾರ ತೆಗೆದಕೊಳ್ಳಲಾಗುವುದು ಎಂದಿದ್ದಾರೆ. ಈ ಮೂಲಕ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಇನ್ನೂ ಮುಂದುವರೆಯಲು ಸಾಧ್ಯತೆಗಳ ಬಗ್ಗೆ ಅವರು ಪರೋಕ್ಷವಾಗಿ ತಿಳಿಸಿದ್ದಾರೆ.
ಇದು ಒಂದೆಡೆಯಾದರೆ, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳು ಕರೊನಾ ಹಾಟ್‌ಸ್ಪಾಟ್ ಆಗಿರುವ ಹಿನ್ನೆಲೆಯಲ್ಲಿ, ಸೋಮವಾರ ಜಿಲ್ಲಾಧಿಕಾರಿಗಳು ಜತೆ ಸಭೆ ಮಾಡಿದ ನಂತರ ಉಳಿದ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಉಳಿದ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್ ಮಾಡುವ ಸುಳಿವನ್ನೂ ಸಚಿವರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಬಳ್ಳಾರಿ, ಕಲಬುರಗಿ, ಯಾದಗಿರಿ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ವಿಜಯಪುರ, ಧಾರವಾಡ, ಮಂಡ್ಯ ಜಿಲ್ಲೆಗಳನ್ನು ಕರೊನಾ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು, ಅಲ್ಲಿಯೂ ಲಾಕ್‌ಡೌನ್ ಜಾರಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಸೋಮವಾರ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಹೆಚ್ಚು ಸಮಸ್ಯೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾತನಾಡಲಾಗುವುದು. ಕಡಿಮೆ ಸೋಂಕು ಇರುವ ಜಿಲ್ಲೆಗಳನ್ನ ಮಧ್ಯಾಹ್ನದ ಬಳಿಕ ಸಭೆ ಕರೆದಿದ್ದೇವೆ. 12 ಜಿಲ್ಲೆಗಳಲ್ಲಿ ಹೆಚ್ಚು ಗಂಭೀರತೆ ಇದೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಎರಡು ಹಂತದಲ್ಲಿ ಲಾಕ್‍ಡೌನ್ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅಶೋಕ್ ಹೇಳಿದರು.
ಯಾರ‍್ಯಾರು ಹೋಗಬೇಕು ಅಂತ ಇದ್ದಾರೋ ಅವರು ನಾಳೆಯೇ ಹೊರಟು ಬಿಡಿ. ಈ ಬಾರಿ ಲಾಕ್‍ಡೌನ್‍ಗೆ ಪಾಸ್ ಬೇಡ. ಅಗತ್ಯ ವಸ್ತುಗಳ ಸೇವೆಗೆ ಐಡಿ ತೋರಿಸಿದರೆ ಸಾಕು ಎಂದರು.