Operation Sindoor: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರ ಜೀವ ಬಲಿ ಪಡೆದ ಉಗ್ರರ ಹುಟ್ಟಡಗಿಸಲು 'ಆಪರೇಷನ್ ಸಿಂಧೂರ' ದಾಳಿ ನಡೆಸಿದ ಭಾರತ, ಇಲ್ಲಿಯವರೆಗೆ ಕನಿಷ್ಠ 100 ಪಾಕ್ ಉಗ್ರರ ನೆತ್ತರನ್ನು ಹರಿಸಿದೆ. ಬುಧವಾರ (ಮೇ.7) ಪ್ರತೀಕಾರವಾಗಿ ಪ್ರಾರಂಭಿಸಿದ 'ಆಪರೇಷನ್ ಸಿಂದೂರ'ವನ್ನು ಇಡೀ ದೇಶವೇ ಅಪ್ಪಿ ಸ್ವಾಗತಿಸಿದೆ. ಜನಸಾಮಾನ್ಯರು ಸಿಂಧೂರ ಹೆಸರನ್ನು ಸ್ಮರಣಿಯವಾಗಿ ಬಳಸಿಕೊಳ್ಳಲು ಮುಂದಾಗಿರುವುದು ಇದೀಗ ಅಚ್ಚರಿಯ ಬೆಳವಣಿಗೆ.
ಇದನ್ನೂ ಓದಿ: ಉಪಗ್ರಹ ಆಧಾರಿತ ಸೇವೆ ಸ್ಟಾರ್ ಲಿಂಕ್ಗೆ ಸಮ್ಮತಿ; ಗ್ರಾಮೀಣ ಪ್ರದೇಶಕ್ಕೂ ಸಿಗಲಿದೆ ಅಬಾಧಿತ ಇಂಟರ್ನೆಟ್ ಸಂಪರ್ಕ
ಆಪರೇಷನ್ ಸಿಂಧೂರ ಪಾಕ್ ವಿರುದ್ಧದ ಪ್ರತೀಕಾರದ ಸಂಕೇತವಾಗಿದ್ದು, ಇದು ಭಾರತೀಯರ ಗಮನ ಸೆಳೆದಿದೆ ಹಾಗೂ ಹೃದಯಕ್ಕೆ ಹತ್ತಿರವಾಗಿದೆ. ಈಗಾಗಲೇ ಇದೊಂದು ಹೆಸರಿನಡಿ 30 ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಗಳು ಶೀರ್ಷಿಕೆ ನೋಂದಣಿಗೆ ಅರ್ಜಿ ಸಲ್ಲಿಸಿವೆ. ತಮ್ಮ ಸಿನಿಮಾಗೆ ಈ ಟೈಟಲ್ ಬೇಕು ಎಂದು ಮುನ್ನುಗ್ಗಿರುವ ಚಿತ್ರ ನಿರ್ಮಾಪಕರು, ಉತ್ಸಾಹದಲ್ಲಿ ಭಾರೀ ಪೈಪೋಟಿಗಿಳಿದಿದ್ದಾರೆ. ಇನ್ನು ಉದ್ಯಮಿಗಳು ಸಹ ಆಪರೇಷನ್ ಸಿಂಧೂರ ಹೆಸರನ್ನು ತಮ್ಮ ಟ್ರೇಡ್‌ಮಾರ್ಕ್ ಮಾಡಿಕೊಳ್ಳಲು ಹಂಬಲ ವ್ಯಕ್ತಪಡಿಸಿದ್ದಾರೆ. ಈಗ ಈ ಸಾಲಿಗೆ ಪೋಷಕರು ಕೂಡ ಮುಂದಾಗಿರುವುದು ಮತ್ತೊಂದು ಹುಬ್ಬೇರಿಸುವ ಸಂಗತಿ.
ಪಾಕಿಸ್ತಾನದಲ್ಲಿ ತಂಗಿದ್ದ ಉಗ್ರರ ಶಿಬಿರಗಳ ಮೇಲೆ ಭಾರತ ಬುಧವಾರ ಆಪರೇಷನ್ ಸಿಂಧೂರ ಹೆಸರಿನಡಿ ದಾಳಿ ನಡೆಸಿತು. ಈ ದಿನದಂದು ಜನಿಸಿದ ತಮ್ಮ ಮಕ್ಕಳಿಗೆ ಪೋಷಕರು ಸಿಂಧೂರ್ ಎಂದೇ ಹೆಸರನ್ನಿಟ್ಟು, ನಾಮಕರಣ ಮಾಡಿದ್ದಾರೆ. ಹೆಣ್ಣು ಮಗು ಮತ್ತು ಗಂಡು ಮಗು ಇಬ್ಬರಿಗೂ ಸಿಂದೂರ್ ಎಂದೇ ಹೆಸರಿಸಲಾಗುತ್ತಿದೆ. ಬಿಹಾರದ ಕತಿಹಾರ್ ಜಿಲ್ಲೆಯ ಒಂದು ಸಣ್ಣ ಆಸ್ಪತ್ರೆಯಲ್ಲಿ ಕುಂದನ್ ಕುಮಾರ್ ಮಂಡಲ್ ಎಂಬುವವರು ತಮ್ಮ ಮಗಳಿಗೆ ಸಿಂದೂರ್ ಎಂದು ಹೆಸರಿಟ್ಟು, ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಪಗ್ರಹ ಆಧಾರಿತ ಸೇವೆ ಸ್ಟಾರ್ ಲಿಂಕ್ಗೆ ಸಮ್ಮತಿ; ಗ್ರಾಮೀಣ ಪ್ರದೇಶಕ್ಕೂ ಸಿಗಲಿದೆ ಅಬಾಧಿತ ಇಂಟರ್ನೆಟ್ ಸಂಪರ್ಕ
ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ ಕುಂದನ್, ತಮ್ಮ ಮಗಳಿಗೆ ಈ ಹೆಸರನ್ನು ಇಡಲು ಹೆಮ್ಮೆಪಡುತ್ತೇನೆ. ಮಗಳು ದೊಡ್ಡವಳಾಗಿ ಬೆಳೆದು ನಿಂತಾಗ ತನ್ನ ಹೆಸರಿನ ಹಿಂದಿನ ಮಹತ್ವ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳುತ್ತಾಳೆ ಎಂದು ಹೇಳಿದ್ದಾರೆ. ಇದು ಕೇವಲ ಕುಂದನ್ ಕಥೆ ಮಾತ್ರವಲ್ಲ! ಬಿಹಾರದ ಆಸ್ಪತ್ರೆಯಲ್ಲಿ ಜನಿಸಿದ ಒಟ್ಟು 12 ನವಜಾತ ಶಿಶುಗಳಿಗೂ ಇದೇ ಹೆಸರನ್ನು ಇಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).