ಭಾರತದ ಬೆಳವಣಿಗೆಯ ಪಥವನ್ನು ಈಗ ಇಡೀ ಜಗತ್ತು ಕುತೂಹಲ, ಅಚ್ಚರಿಯಿಂದ ಗಮನಿಸುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿ 12 ವರ್ಷ ಕಾರ್ಯನಿರ್ವಹಿಸಿದ್ದ ನರೇಂದ್ರ ದಾಮೋದರ್ ದಾಸ್ ಮೋದಿ ಪ್ರಧಾನಿಯಾಗಿ ಇಂದಿಗೆ 11 ವರ್ಷ ಪೂರ್ಣಗೊಳಿಸಿದ್ದಾರೆ (2014-2025). ಕಳೆದ 11 ವರ್ಷಗಳಲ್ಲಿ ಸವಾಲುಗಳನ್ನು ಮೀರಿ ಎಲ್ಲ ರಂಗಗಳಲ್ಲೂ ಸುಧಾರಣೆಯ ನವಪಥ ಸಾಕಾರಗೊಂಡಿದ್ದು, ಈ ಕುರಿತಾದ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ದಕ್ಷ ಆಡಳಿತಗಾರ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ಮೋದಿ ಮೂರನೇ ಅವಧಿಯ 1 ವರ್ಷ ಸೇರಿದಂತೆ ಪ್ರಧಾನಿಯಾಗಿ 11 ವರ್ಷ ಪೂರ್ಣಗೊಳಿಸಿದ್ದಾರೆ. ಟೀಕೆ, ವಿರೋಧ, ಸವಾಲುಗಳಿಗೆ ತಲೆ ಕೆಡಿಸಿಕೊಳ್ಳದೆ ಎಲ್ಲ ರಂಗಗಳ ಸುಧಾರಣೆಗೆ ಶ್ರಮಿಸಿದ್ದರಿಂದ ಭಾರತ ಅಭಿವೃದ್ಧಿಯಲ್ಲಿ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಮೋದಿ ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮೂಲಸೌಕರ್ಯ, ಕೈಗಾರಿಕಾ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ, ಹೆದ್ದಾರಿಗಳ ನಿರ್ವಣ, ರೈಲ್ವೆ ಜಾಲ ವಿಸ್ತರಣೆ, ವಂದೇ ಭಾರತ, ನಮೋ ಭಾರತ ರೈಲುಗಳ ಸೇವೆ ಆರಂಭ, ಕೃಷಿ ಉತ್ಪಾದನೆಗಳ ಪ್ರಮಾಣ ಹೆಚ್ಚಳ, ಬ್ಯಾಂಕಿಂಗ್ ರಂಗದಲ್ಲಿ ಸುಧಾರಣೆ, ವಿದೇಶಾಂಗ ನೀತಿಗೆ ಹೊಸತನದ ಸ್ಪರ್ಶ... ಹೀಗೆ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ 11 ವರ್ಷಗಳ ಪಯಣ ನಿಜಕ್ಕೂ ಚೇತೋಹಾರಿ.
ಹಿರಿಯರಿಗೆ ಆರೋಗ್ಯ ರಕ್ಷೆ: ಎಪ್ಪತ್ತು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ನ ವಿಸ್ತರಿತ ಯೋಜನೆ ಹಿರಿಯರಿಗೆ ಆರೋಗ್ಯ ರಕ್ಷೆಯನ್ನು ಒದಗಿಸಿದೆ. ಇದು ಆದಾಯ ಮಿತಿ ಇಲ್ಲದೆ 70 ವರ್ಷ ಮೇಲ್ಪಟ್ಟ ಪ್ರತಿ ಹಿರಿಯರಿಗೂ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಯೋಜನೆ ಆಗಿದೆ. ದೇಶದ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರು ಈ ಯೋಜನೆಯ ಲಾಭಾರ್ಥಿಗಳು.
ಕೇಂದ್ರದ ಬಹುತೇಕ ಸರ್ಕಾರಗಳು ಈಶಾನ್ಯದ ರಾಜ್ಯಗಳನ್ನು ನಿರ್ಲಕ್ಷಿಸಿದ್ದವು. ಎನ್ಡಿಎ ಸರ್ಕಾರ ಏಳು ರಾಜ್ಯಗಳ ಅಭಿವೃದ್ಧಿಗೆ ನೀಲಿನಕ್ಷೆ ರೂಪಿಸಿ, ಯೋಜನೆಗಳನ್ನು ಜಾರಿಗೆ ತಂದಿತು. ಬಜೆಟ್ ಹಂಚಿಕೆಯಲ್ಲಿ ಈಶಾನ್ಯ ರಾಜ್ಯಗಳ ಪಾಲು ಐದು ಪಟ್ಟು ಹೆಚ್ಚಿದೆ. ಮೂಲಸೌಕರ್ಯ, ಸಾರಿಗೆ ಕ್ಷೇತ್ರದಲ್ಲಂತೂ ಮಹತ್ವದ ಬದಲಾವಣೆ ಸಾಕಾರಗೊಂಡಿದೆ. ತಂಟೆಕೋರ ಚೀನಾದೊಂದಿಗೆ ಇರುವ ಗಡಿ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳನ್ನು ನಿರ್ವಿುಸುವ ಮೂಲಕ ಭದ್ರತಾ ಪಡೆಗಳಿಗೆ ಅಗತ್ಯವಿರುವ ಸರಕುಗಳನ್ನು ತ್ವರಿತವಾಗಿ ಸಾಗಿಸುವ ವ್ಯವಸ್ಥೆ ರೂಪಿಸಲಾಗಿದೆ. ಮುಖ್ಯವಾಗಿ, ಬೋಡೊ ಶಾಂತಿ ಒಪ್ಪಂದ ಏರ್ಪಟ್ಟಿದೆ. ಅಸ್ಸಾಂನಿಂದ ಬೇರ್ಪಟ್ಟು ಬೋಡೋ ರಾಜ್ಯ ರಚಿಸಬೇಕು ಎಂಬ ಆಗ್ರಹವನ್ನು ಬೋಡೋ ಬುಡಕಟ್ಟು ಸಮುದಾಯ ಕೈಬಿಟ್ಟಿದೆ. 2020ರ ಜನವರಿ 17ರಂದು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು.
2014ರಲ್ಲಿ ಆರಂಭವಾದ ಮೇಕ್ ಇನ್ ಇಂಡಿಯಾ ದಶಕದ ಸಂಭ್ರಮವನ್ನು ಕಂಡಿದೆ (2024). 2014ರಲ್ಲಿ ಇಡೀ ದೇಶದಲ್ಲಿ ಕೇವಲ ಮೊಬೈಲ್ ತಯಾರಿಕೆಯ ಎರಡು ಘಟಕಗಳಿದ್ದವು. ಪ್ರಸ್ತುತ ಈ ಸಂಖ್ಯೆ 200ಕ್ಕಿಂತ ಹೆಚ್ಚಾಗಿದೆ. ಭಾರತದ ಮೊಬೈಲ್ ಫೋನ್ ರಫ್ತು 1,556 ಕೋಟಿಯಿಂದ 1.2 ಲಕ್ಷ ಕೋಟಿ ರೂ.ಗೆ ಭಾರಿ ಏರಿಕೆ ಕಂಡಿದೆ, ಅಂದರೆ ಶೇಕಡ 7500ರಷ್ಟು ಬೆಳವಣಿಗೆ! ಭಾರತದಲ್ಲಿ ಪ್ರಸ್ತುತ ಬಳಸಲಾಗುವ ಶೇಕಡ 99ರಷ್ಟು ಮೊಬೈಲ್ ಫೋನ್ಗಳು ಮೇಡ್ ಇನ್ ಇಂಡಿಯಾ ಆಗಿವೆ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರ ಭಾರತವಾಗಿದೆ.
ತ್ರಿವಳಿ ತಲಾಕ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರು ಭಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ಫೋನ್ ಕರೆ, ವಾಟ್ಸ್ಆಪ್ ಸಂದೇಶದ ಮೂಲಕವೂ 3 ಬಾರಿ ತಲಾಕ್ ಹೇಳಿ, ವೈವಾಹಿಕ ಸಂಬಂಧವನ್ನು ಕಡಿದುಕೊಳ್ಳುವ ಘಟನೆಗಳಿಂದ ಮಹಿಳೆಯರು ರೋಸಿ ಹೋಗಿದ್ದರು ಮತ್ತು ಈ ಪದ್ಧತಿ ನಿಷೇಧಿಸುವಂತೆ ಪ್ರತಿಭಟನೆಯನ್ನೂ ನಡೆಸಿದ್ದರು. 2017ರ ಆಗಸ್ಟ್ 22ರಂದು ನೀಡಿದ ಬಹುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್ ಆಚರಣೆಯು ಸಂವಿಧಾನಬಾಹಿರ ಎಂದು ಹೇಳಿತ್ತು. ಆದರೆ, ಸೂಕ್ತ ಕಾನೂನು ಇಲ್ಲದ್ದರಿಂದ ಪದ್ಧತಿ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಜಾರಿಗೊಳಿಸುವ ಮೂಲಕ ತ್ರಿವಳಿ ತಲಾಖ್ ಅಥವಾ ತಲಾಖ್-ಎ-ಬಿದ್ದತ್ಗೆ ನಿಷೇಧ ಹೇರಿತು. ಈ ಕುರಿತ ಮಸೂದೆಯನ್ನು 2019ರ ಜುಲೈನಲ್ಲಿ ಸಂಸತ್ತು ಅಂಗೀಕರಿಸಿತು.
ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳಲ್ಲಿ ಅಗ್ಗದ ಬೆಲೆಗೆ ಔಷಧಗಳು ದೊರೆಯುತ್ತಿದ್ದು, ದೇಶಾದ್ಯಂತ 4 ಸಾವಿರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೃದಯಸಂಬಂಧಿ ಸ್ಟಂಟ್ಗಳ ಬೆಲೆಯನ್ನು ಶೇಕಡ 50-70ರಷ್ಟು ಇಳಿಸಲಾಗಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆಯಡಿ ಬಡವರಿಗೆ ಸಂಪೂರ್ಣ ಉಚಿತವಾಗಿ ಮತ್ತು ಇತರ ಎಲ್ಲ ರೋಗಿಗಳಿಗೆ ಸಬ್ಸಿಡಿ ದರದಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈವರೆಗೆ 50 ಲಕ್ಷಕ್ಕೂ ಅಧಿಕ ರೋಗಿಗಳು ಈ ಯೋಜನೆ ಲಾಭ ಪಡೆದಿದ್ದಾರೆ. ಅಲ್ಲದೆ, 10 ಸಾವಿರ ಅಗತ್ಯ ಔಷಧಗಳನ್ನು ಬೆಲೆ ನಿಯಂತ್ರಣ ವ್ಯವಸ್ಥೆಯಡಿ ತರಲಾಯಿತು. ಇದರಿಂದ ರೋಗಿಗಳ 10 ಸಾವಿರ ಕೋಟಿ ರೂ.ಗಳ ಉಳಿತಾಯವಾಯಿತು. 15 ವರ್ಷಗಳ ಬಳಿಕ 2017ರಲ್ಲಿ ನೂತನ ‘ರಾಷ್ಟ್ರೀಯ ಆರೋಗ್ಯ ನೀತಿ’ ರೂಪಿಸಲಾಯಿತು.
ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ವಣವಾಗಬೇಕು ಎಂಬ ಹಲವು ಶತಮಾನಗಳ ಕನಸು ಕೊನೆಗೂ ಸಾಕಾರಗೊಂಡಿದ್ದು 2024ರ ಜನವರಿ 22ರಂದು. 2020ರಲ್ಲಿ ಬಾಲರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮೋದಿ, ಮಂದಿರವನ್ನು ಉದ್ಘಾಟಿಸುವ ಮೂಲಕ ಸಾರ್ಥಕ ಭಾವ ಅನುಭವಿಸಿದರು. 2025ರ ಜೂನ್ನಲ್ಲಿ ಎರಡನೇ ಹಂತದ ಪ್ರಾಣಪ್ರತಿಷ್ಠೆ ಕಾರ್ಯಕ್ರಮವೂ ಪೂರ್ಣಗೊಂಡಿದ್ದು, ಈ ವರ್ಷ ನಡೆದ ಕುಂಭಮೇಳದ ಅವಧಿಯಲ್ಲಿ ಅಯೋಧ್ಯೆಗೆ ದಾಖಲೆ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡಿದರು. ಮಾತ್ರವಲ್ಲ, ಪ್ರಸ್ತುತ ಭಾರತದ ಪ್ರವಾಸೋದ್ಯಮದ ನಕ್ಷೆಯಲ್ಲೇ ಅಯೊಧ್ಯೆ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜವನ್ನು ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಮತ್ತು ಅದರ ಮೂಲಕ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ಹಿಂಪಡೆಯಲಾಯಿತು. ಆ ಮೂಲಕ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸ್ಪಷ್ಟ ಸಂದೇಶ ಸಾರಿ, ಅಲ್ಲಿ ಅಭಿವೃದ್ಧಿಯ ಹೊಸ ಪಯಣಕ್ಕೆ ನಾಂದಿ ಹಾಡಲಾಗಿದೆ. ಅಲ್ಲದೆ, ರಾಜ್ಯದ ಸ್ಥಾನಮಾನವನ್ನು ತೆಗೆದುಹಾಕಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಯಿತು. ಈ ಮೂಲಕ ಈ ಪ್ರದೇಶವು ಕೇಂದ್ರ ಸರ್ಕಾರದ ನಿಯಂತ್ರಣ ವ್ಯಾಪ್ತಿಗೆ ಬಂದಿತು.
ಜಮ್ಮು-ಕಾಶ್ಮೀರದಲ್ಲಿನ ಅಭಿವೃದ್ಧಿ ಪಾಕಿಸ್ತಾನದ ನಿದ್ದೆಗೆಡಿಸಿದೆ. ಹಾಗಾಗಿ, ಭಯೋತ್ಪಾದನೆಯ ರಫ್ತನ್ನು ಮುಂದುವರಿಸಿದ್ದು, ಉಗ್ರದಾಳಿಗಳನ್ನು ಪ್ರಾಯೋಜಿಸುತ್ತಿದೆ. ಆದರೆ, 2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪ್ರವಾಸಿಗರ ಮೇಲೆ ನಡೆದ ಬರ್ಬರ ಭಯೋತ್ಪಾದಕ ದಾಳಿಯನ್ನು ಕೇಂದ್ರ ಸರ್ಕಾರ ಭಾರತದ ಆತ್ಮದ ಮೇಲಾದ ಹಲ್ಲೆ ಎಂದು ಪರಿಗಣಿಸಿತಲ್ಲದೆ, ಪಾಕಿಸ್ತಾನಕ್ಕೆ ಸೂಕ್ತ ತಿರುಗೇಟನ್ನು ಕೊಡಲು ಸಂಕಲ್ಪಿಸಿತು. ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಪಿಒಕೆ ಪ್ರದೇಶದಲ್ಲಿನ 9 ಉಗ್ರತಾಣಗಳನ್ನು ನಾಶಗೊಳಿಸಿತು.
2014: 14.52 ಕೋಟಿ
2025: 32.94 ಕೋಟಿ
ಬೆಳವಣಿಗೆ: 126%
2014: 8.5 ಲಕ್ಷ ಕೋಟಿ ರೂ.
2024: 27.25 ಲಕ್ಷ ಕೋಟಿ ರೂ.
ಬೆಳವಣಿಗೆ: 220%
2015: 2.1 ಟ್ರಿಲಿಯನ್ ಡಾಲರ್
2025: 4.2 ಟ್ರಿಲಿಯನ್ ಡಾಲರ್
ಬೆಳವಣಿಗೆ: 105%
2010: 55 ಲಕ್ಷ
2024: 1.43 ಕೋಟಿ
ಬೆಳವಣಿಗೆ: 160%
2014: 18,300 ಕಿ.ಮೀ.
2024: 45,900 ಕಿ.ಮೀ.
ಬೆಳವಣಿಗೆ: 315%