ನ್ಯೂಸ್

1,000 ರೂಪಾಯಿ ಬಾಡಿಗೆಗೆ ಬಡವರಿಗೆ ಮನೆ - ಮೋದಿ ಸರ್ಕಾರದ ಯೋಜನೆ

ನವದೆಹಲಿ: ನಗರ ಪ್ರದೇಶಗಳಲ್ಲಿ ಮನೆ ಬಾಡಿಗೆಯೇ ದುಬಾರಿ. ಈ ಸಂಕಷ್ಟದ ಸನ್ನಿವೇಶದಲ್ಲಿ ಕಡಿಮೆ ಬಾಡಿಗೆಗೆ ಮನೆ ಒದಗಿಸುವ ಮಹತ್ವದ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂಬ ಸುದ್ದಿಯೊಂದು ಬಹಿರಂಗವಾಗಿದೆ.

ವಿಶೇಷವಾಗಿ ಕಟ್ಟಡ ಕಾರ್ಮಿಕರು, ಶ್ರಮಿಕ ವರ್ಗ ಮತ್ತು ಅಸಂಘಟಿತ ವಲಯದ ಇತರೆ ವಲಸೆ ಕಾರ್ಮಿಕರಿಗೆ ನಗರ ಪ್ರದೇಶದಲ್ಲಿ 1,000 ರೂಪಾಯಿಯಿಂದ 3,000 ರೂಪಾಯಿ ದರದ ಬಾಡಿಗೆಯಲ್ಲಿ ಮನೆಗಳನ್ನು ಒದಗಿಸುವ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

ಬಾಡಿಗೆ ಮನೆ ಯೋಜನೆ ಜಾರಿಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಆರಂಭಿಕವಾಗಿ 700 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಜೆಟ್​ನಲ್ಲಿ ಮೀಸಲಿಡಬೇಕಾಗುತ್ತದೆ. ಜವಾಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನೀವಲ್ ಮಿಷನ್​ (ಜೆಎನ್​ನರ್ಮ್​) ಮತ್ತು ರಾಜೀವ್ ಆವಾಸ್ ಯೋಜನೆ(ಆರ್​ಎವೈ) ಅಧೀನ ನಿರ್ಮಿಸಿದ ಒಂದು ಲಕ್ಷ ಮನೆಗಳು ಉಪಯೋಗವಾಗದೇ ಇವೆ. ಈ ಮನೆಗಳನ್ನು ಅಫೋರ್ಡೆಬಲ್ ರೆಂಟಲ್ ಹೌಸಿಂಗ್ ಸ್ಕೀಮ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಕಡಿಮೆ ಬಾಡಿಗೆಗೆ ಒದಗಿಸುವುದಕ್ಕೆ ಕೇಂದ್ರ ಸರ್ಕಾರ ಆರಂಭಿಕವಾಗಿ ವ್ಯಯಿಸುವ 700 ಕೋಟಿ ರೂಪಾಯಿಗೂ ಅಧಿಕ ಮೊತ್ತ ಅನುಕೂಲವಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 14ರಂದು ವಲಸೆ ಕಾರ್ಮಿಕರಿಗಾಗಿ ಈ ಯೋಜನೆ ಘೋಷಿಸಿದ್ದರು.

ಜೆಎನ್​ನರ್ಮ್​ ಮತ್ತು ಆರ್​ಎವೈಗಳು ಯುಪಿಎ ಆಡಳಿತಾವಧಿಯದ್ದಾಗಿದ್ದು, ಒಂದು ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಜೆಎನ್​ನರ್ಮ್ ಯೋಜನೆ 2005ರಲ್ಲಿ ಚಾಲ್ತಿಗೆ ಬಂದಿದ್ದು, ಏಳು ವರ್ಷಗಳ ಅವಧಿಯಲ್ಲಿ ಮನೆ ಒದಗಿಸುವ ಉದ್ದೇಶ ಹೊಂದಿತ್ತು. ಈ ಯೋಜನೆ 2014ರ ಮಾರ್ಚ್​ ನಂತರ 2017ರ ಮಾರ್ಚ್​ ತನಕ ವಿಸ್ತರಣೆಯಾಗಿತ್ತು. ಆರ್​ಎವೈ ಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯೊಂದಿಗೆ ವಿಲೀನಗೊಳಿಸಿದ್ದು, ಇದನ್ನು 2015ರ ಜೂನ್​ನಲ್ಲಿ ಜಾರಿಗೊಳಿಸಲಾಗಿದೆ.

ಬಾಡಿಗೆ ಮನೆ ಯೋಜನೆಗೆ ಸಂಬಂಧಿಸಿದ ನೀತಿಗಳನ್ನು ಕೇಂದ್ರ ನಗರ ವ್ಯವಹಾರ ಮತ್ತು ವಸತಿ ಸಚಿವಾಲಯ ಅಂತಿಮಗೊಳಿಸುತ್ತಿದ್ದು, ಶೀಘ್ರವೇ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಲಿದೆ. ಇದು ಅಂತಿಮಗೊಂಡ ಬಳಿಕ ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಮತ್ತು ಅಸಂಘಟಿತ ವಲಯದ ಶ್ರಮಿಕ ವರ್ಗಕ್ಕೆ ಈ ಮನೆಗಳು ಅವುಗಳ ಸ್ತರಗಳಿಗೆ ಅನುಗುಣವಾಗಿ 1,000 ರೂಪಾಯಿಯಿಂದ 3,000 ರೂಪಾಯಿ ದರದಲ್ಲಿ ಲಭ್ಯವಾಗಲಿವೆ. (ಏಜೆನ್ಸೀಸ್)