ಸಮ್ಮೇಳನದ ಸಮಾರೋಪದಲ್ಲಿ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು. ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಇತರರಿದ್ದರು. 
ನ್ಯೂಸ್

ಸಮ್ಮೇಳನ ನಿರ್ಣಯ, ಸಿಎಂ ಸ್ಪಂದನೆ: ಗಡಿ ಅಭಿವೃದ್ಧಿಗೆ 100 ಕೋಟಿ ರೂಪಾಯಿ, ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್

Webdesk - Ravikanth

| ಮರಿದೇವ ಹೂಗಾರ ಹಾವೇರಿ

ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ವಿಜೃಂಭಣೆಯಿಂದ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ನಿರ್ಣಯಗಳ ಆಗ್ರಹಕ್ಕೆ ಸಮಾರೋಪ ಸಮಾರಂಭದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸುವುದರೊಂದಿಗೆ ನುಡಿಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯುವುದು, ಗಡಿ ಅಭಿವೃದ್ಧಿಗೆ 100 ಕೋಟಿ ರೂ. ನೀಡುವುದು, ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನ ಮಾರ್ಗದರ್ಶನಕ್ಕೆ ಹಿರಿಯ ಸಾಹಿತಿಗಳ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಇದಕ್ಕೂ ಮುನ್ನ ಸಮ್ಮೇಳನದ ವೇದಿಕೆಯಲ್ಲಿ ಈ ವಿಷಯವಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ತಕ್ಷಣವೇ ಸ್ಪಂದಿಸಿದ ಸಿಎಂ, ಸರ್ಕಾರದ ಮುಂದಿನ ನಡೆಯನ್ನು ವೇದಿಕೆಯಲ್ಲೇ ಘೋಷಿಸಿ, ಕನ್ನಡ ಮನಸುಗಳನ್ನು ಸಂತೈಸಿದರು. ಅಷ್ಟೇ ಅಲ್ಲದೇ ಕನ್ನಡ ಅಸ್ಮಿತೆ ಉಳಿಸಲು ಸರ್ಕಾರವು ಸದಾ ಬದ್ಧ ಎಂಬ ಸಂದೇಶವನ್ನು ರವಾನಿಸಿದರು. ಗಡಿನಾಡು ಮತ್ತು ಗಡಿಯಾಚೆ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಅಲ್ಲಿನ ಶಾಲೆ, ಕನ್ನಡ ಕೇಂದ್ರಗಳ ಅಭಿವೃದ್ಧಿಗೆ 25 ಕೋಟಿ ರೂ. ಕೊಟ್ಟಿದ್ದೇವೆ. ಆ ಭಾಗದ ಜನರ ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಈ ವರ್ಷ 100 ಕೋಟಿ ರೂ. ಕೊಡಲಾಗುವುದು ಎಂದು ಸಿಎಂ ಪ್ರಕಟಿಸಿದರು. ವಲಸಿಗರು ಕನ್ನಡ ಕಲಿಯಲು ಕನ್ನಡ ಕಲಿಸುವ ಅಭಿಯಾನ ಶುರು ಮಾಡುತ್ತೇವೆ. ಕನ್ನಡ ಹೋರಾಟಗಾರರ ಮೇಲಿರುವ ಕಾಗ್ನಿಜೆನ್ಸ್ ಪ್ರಕರಣ ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದರು.

ಮಂಡ್ಯದಲ್ಲಿ ಮುಂದಿನ ಸಮ್ಮೇಳನ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಕ್ಕರೆ ನಾಡು ಮಂಡ್ಯಕ್ಕೆ ದೊರೆತಿದೆ. ಹಾವೇರಿ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎರಡು ತಾಸಿನ ಚರ್ಚೆಯ ಬಳಿಕ, ಗೌಪ್ಯ ಮತದಾನದ ಮೂಲಕ ಮಂಡ್ಯ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಘೋಷಿಸಿದರು. ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ಉತ್ತರಕನ್ನಡ, ರಾಮನಗರ, ಬಳ್ಳಾರಿ, ಬೆಳಗಾವಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಗಳು ಮುಂದಿನ ಆತಿಥ್ಯಕ್ಕೆ ಕೋರಿಕೆ ಸಲ್ಲಿಸಿದ್ದವು.

ನಿರ್ಣಯಗಳೇನು?

ಸಮಾರೋಪಕ್ಕೆ ಮುನ್ನ ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಪಡಿಸುವುದು, ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಹಿಂದಿ ಭಾಷೆ ಹೇರಿಕೆಯನ್ನು ಖಂಡಿಸುವುದು, ವಿಶ್ವಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸುವುದು ಸೇರಿ ಆರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಸಾಪ ಗೌರವ ಅಧ್ಯಕ್ಷ ಬಿ.ಎಂ. ಪಟೇಲಪಾಂಡು ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳನ್ನು ಮಂಡಿಸಿದರು, ಬಹಿರಂಗ ಅಧಿವೇಶನ ಅನುಮೋದಿಸಿತು.

  • ಸಂವಿಧಾನದ ಎಂಟನೇ ಪರಿಚ್ಛೇದದ ಅನ್ವಯ ಎಲ್ಲ ಪ್ರಾಂತೀಯ ಭಾಷೆಗಳನ್ನು ಸಮಾನ ಎಂದು ಗುರುತಿಸಿದ್ದು, ಈ ಪಟ್ಟಿಯಲ್ಲಿರುವ 22 ಭಾಷೆಗಳಲ್ಲಿರುವ ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆಯಾಗಿದೆ. ಇದರ ಮೇಲಿನ ಹಿಂದಿ ಅಥವಾ ಇನ್ಯಾವುದೇ ಭಾಷೆಯ ಆಕ್ರಮಣವನ್ನು, ಹೇರಿಕೆಯನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ.
  • ಕನ್ನಡ ಸಮಗ್ರ ಭಾಷಾ ಅಭಿವೖದ್ಧಿ ವಿಧೇಯಕ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದು ಬಲವಾದ ಆಗ್ರಹ.
  • ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಕುರಿತ ಮಹಾಜನ ವರದಿಯು ನ್ಯಾಯಾಲಯದಲ್ಲಿ ಪ್ರಶ್ನಿತವಾಗಿ ಪ್ರಕರಣ ವಿಚಾರಣೆಯ ಹಂತದಲ್ಲಿ ಇರುವುದರಿಂದ, ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ಸೂಕ್ತ ಕ್ರಮವನ್ನು ವಿಳಂಬವಿಲ್ಲದೇ ಕೈಗೊಳ್ಳಬೇಕು.
  • ವಿಶ್ವ ಕನ್ನಡ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜರುಗಿಸಬೇಕು. ನಿಯೋಜಿತ ಸಮ್ಮೇಳನದ ಸಂಬಂಧವಾಗಿ ಸರ್ಕಾರ ಜರುಗಿಸುವ ಸಭೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.