ನ್ಯೂಸ್

ಹೆಚ್ಚಿದ ಒಮಿಕ್ರಾನ್​ ಆತಂಕ: ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಜನ ನಾಪತ್ತೆ!

ಬೆಂಗಳೂರು: ಭಾರತದ ಮೊದಲ ಒಮಿಕ್ರಾನ್​ ಪ್ರಕರಣಗಳು ಕರ್ನಾಟಕದಲ್ಲೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದಾಗಲೇ ರಾಜ್ಯದ ಜನರಲ್ಲಿ ಆತಂಕ ಮನೆಮಾಡಿದೆ. ಇದೀಗ ರಾಜಧಾನಿ ಬೆಂಗಳೂರಿನ ಜನತೆಗೆ ಮತ್ತಷ್ಟು ಕಳವಳ ಮೂಡಿಸುವ ವಿಷಯ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿಳಿದಿರುವ ಕನಿಷ್ಠ 10 ಜನ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಟ್ರೇಸ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿ ಮೂಲಗಳ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್​ ರೂಪಾಂತರಿ ಪತ್ತೆಯಾದ ಬಳಿಕ ವಿಮಾನಗಳ ಮೂಲಕ 57 ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ. ಇವರಲ್ಲಿ 10 ಜನರು ನೀಡಿರುವ ವಿಳಾಸದಲ್ಲಿ ಲಭ್ಯವಾಗುತ್ತಿಲ್ಲ. ಅವರ ಮೊಬೈಲ್​ ಫೋನುಗಳೂ ಸ್ವಿಚ್ಡ್​ ಆಫ್​ ಬರುತ್ತಿದೆ ಎನ್ನಲಾಗಿದೆ.

ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಅವರನ್ನು ಟ್ರ್ಯಾಕ್​ ಮತ್ತು ಟ್ರೇಸ್​ ಮಾಡುವ ಪ್ರಯತ್ನದಲ್ಲಿದ್ದಾರೆ. ಫೋನಿಗೆ ಉತ್ತರ ನೀಡದಿರುವವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಪ್ರೊಟೋಕಾಲನ್ನು ಅನುಸರಿಸುತ್ತಿದ್ದೇವೆ. ಜನರು ಎಚ್ಚರವಾಗಿದ್ದು, ಕರೊನಾ ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕು ಎಂದು ಬಿಬಿಎಂಪಿ ಕಮಿಷನರ್​ ಗೌರವ್ ಗುಪ್ತ ಹೇಳಿದ್ದಾರೆ. (ಏಜೆನ್ಸೀಸ್​)