ನ್ಯೂಸ್

ಕರ್ನಾಟಕದ ಬೆನ್ನಲ್ಲೇ ಛತ್ತೀಸ್​ಗಢದಲ್ಲೂ Naxal​ ಕಾರ್ಯಾಚರಣೆ; 10 ಮಂದಿ ಹತ

ರಾಯ್​ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 10 ನಕ್ಸಲರು (Naxal) ಹತರಾಗಿದ್ದು, ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಶುಕ್ರವಾರ (ನವೆಂಬರ್​ 22) ಮುಂಜಾನೆ ಭಂಡಾರ್‌ಪದರ್‌ನ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ನಡೆಸುತ್ತಿರುವಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ನಕ್ಸಲರನ್ನು ಎನ್​ಕೌಂಟರ್​ ಮಾಡಲಾಗಿದೆ. 

ಬಸ್ತರ್ ವಲಯದ ಪೊಲೀಸ್ ಅಧಿಕಾರಿ ಸುಂದರರಾಜ್ ಮಾತನಾಡಿ, ಭದ್ರತಾ ಪಡೆಗಳ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಭೇಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಕೊರಜ್‌ಗುಡ, ದಾಂತೇಸ್‌ಪುರಂ, ನಗರಂ, ಭಂಡರ್‌ಪುರ ಪ್ರದೇಶಗಳ ಗುಡ್ಡಗಾಡಿನಲ್ಲಿ ಕೊಂಟಾ, ಕಿಸ್ತಾರಂ ನಕ್ಸಲ್ ಸಮಿತಿಗೆ ಸೇರಿದ ಮಾವೋವಾದಿಗಳು ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಯನ್ನು ನಡೆಸಲಾಯಿತು.

ಎನ್​ಕೌಂಟರ್​ನಲ್ಲಿ 10 ನಕ್ಸಲರು ಮೃತಪಟ್ಟಿದ್ದು,  ಇನ್ಸಾಸ್ ರೈಫಲ್, ಎಕೆ-47 ರೈಫಲ್, ಎಸ್‌ಎಲ್‌ಆರ್ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಸುಕ್ಮಾ ಜಿಲ್ಲೆ ಒಳಗೊಂಡಂತೆ ಬಸ್ತರ್ ಪ್ರದೇಶದ ಏಳು ಜಿಲ್ಲೆಗಳಲ್ಲಿ ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ 207 ನಕ್ಸಲರನ್ನು ಎನ್​ಕೌಂಟರ್​ ಮಾಡಲಾಗಿದೆ ಎಂದು ಬಸ್ತರ್ ವಲಯದ ಪೊಲೀಸ್ ಅಧಿಕಾರಿ ಸುಂದರರಾಜ್ ಮಾಹಿತಿ ನೀಡಿದ್ಧಾರೆ.