ನ್ಯೂಸ್

ದುಡ್ಡಿನ ಬದಲು 10 ಕೆ.ಜಿ. ಅಕ್ಕಿ; ಬಿಪಿಎಲ್ ಪಡಿತರದಾರರ ಮೂರು ತಿಂಗಳ ಬಾಕಿ ಹಣ ಶೀಘ್ರವೇ ವರ್ಗ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್​ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ. ಹೀಗಾಗಿ ಇನ್ನು ಮುಂದೆ ಹಣದ ಬದಲು ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ಕೇಂದ್ರದ ಪಾಲೂ ಸೇರಿದಂತೆ ಹತ್ತು ಕೆ.ಜಿ. ಅಕ್ಕಿ ಸಿಗಲಿದೆ. ತಿಂಗಳಾಂತ್ಯ ಅಥವಾ ಮಾ.10ರೊಳಗೆ ಹಣದ ಬದಲು ಅಕ್ಕಿ ವಿತರಣೆ ಜಾರಿಯಾಗಲಿದೆ.

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದ (ಎಫ್​ಸಿಐ) ಮೂಲಕ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್​ಎಸ್) ಕೆಜಿ ಅಕ್ಕಿಗೆ 22.50 ರೂ.ನಂತೆ ಪ್ರತಿ ತಿಂಗಳು 2 ಲಕ್ಷಕ್ಕಿಂತ ಅಧಿಕ ಮೆಟ್ರಿಕ್ ಟನ್ ಅಕ್ಕಿಯನ್ನು ನಮಗೆ ಮಾರಾಟ ಮಾಡಲಿದೆ ಎಂದರು.

ಸಿದ್ದರಾಮಯ್ಯ 2ನೇ ಅವಧಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅನ್ನಭಾಗ್ಯ ಸೇರಿ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಮತದಾರರಿಗೆ ಕೊಟ್ಟಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಅಕ್ಕಿ ನೀಡುವಂತೆ ಕೇಂದ್ರದ ಬಳಿ ಕೇಳಿದ್ದವು. ವಿವಿಧ ರಾಜ್ಯಗಳ ಸಿಎಂಗೆ ಮನವಿ ಸಲ್ಲಿಸಿದ್ದವು.ಆದರೂ, ನಮಗೆ ಅಕ್ಕಿ ಸಿಗಲಿಲ್ಲ. 2023ರ ಜು.10ರಿಂದ ಅನಿವಾರ್ಯವಾಗಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ತರಲಾಯಿತು. ಬಿಪಿಎಲ್ ಕಾರ್ಡ್​ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ., ಅಂತ್ಯೋದಯ ಕಾರ್ಡ್​ನ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ ಮತ್ತು 6 ಸದಸ್ಯರಿದ್ದರೆ 850 ರೂ. ಹಣ ಹಾಕಲಾಗುತ್ತಿತ್ತು ಎಂದು ಸಚಿವರು ಮಾಹಿತಿ ನೀಡಿದರು.

ಬಾಕಿ ನಗದು ಶೀಘ್ರ ಪಾವತಿ: 2023ರ ಜುಲೈನಿಂದ 2024ರ ಅಕ್ಟೋಬರ್​ವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖೇನ 10,452 ಕೋಟಿ ರೂ. ವರ್ಗಾಯಿಸಲಾಗಿದೆ. ಬಾಕಿ ಉಳಿದಿರುವ 3 ತಿಂಗಳಿನ ಹಣವನ್ನು ಡಿಬಿಟಿ ಮೂಲಕ ಕಾರ್ಡ್​ದಾರರ ಖಾತೆಗೆ ಶೀಘ್ರ ಜಮೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ರದ್ದಾದ ಲಕ್ಷಾಂತರ ಬಿಪಿಎಲ್ ಚೀಟಿಗಳನ್ನು ಮರು ಸ್ಥಾಪಿಸಲಾಗಿದ್ದು, ಅವುಗಳಿಗೂ ಹೆಚ್ಚುವರಿ ಅಕ್ಕಿ ದೊರೆಯಲಿದೆ. ಭತ್ತ ಬೆಳೆಯುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಕೆಜಿ 40 ರೂ.ನಂತೆ ಅಕ್ಕಿ ಖರೀದಿಸಿ ನಮಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಅಕ್ಕಿಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು 2 ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಅಕ್ಕಿ ಕೊಡುವುದಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮುನಿಯಪ್ಪ ಹೇಳಿದರು.

10 ಕೆಜಿ ಆಹಾರ ಪದಾರ್ಥ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ, ರಾಜ್ಯದ 1.02 ಕೋಟಿ ಬಿಪಿಎಲ್, 10.80 ಲಕ್ಷ ಅಂತ್ಯೋದಯ ಕಾರ್ಡ್​ಗಳಿಗೆ ಉಚಿತ ಆಹಾರ ಪದಾರ್ಥ ವಿತರಿಸುತ್ತಿದೆ. ಹಾಗಾಗಿ, ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಸೇರಿ ಒಟ್ಟು 5 ಕೆಜಿ ಹಾಗೂ ಪ್ರತಿ ಅಂತ್ಯೋದಯ ಕಾರ್ಡ್​ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ಆಹಾರ ಪದಾರ್ಥ ಉಚಿತವಾಗಿ ಸಿಗುತ್ತಿದೆ. ಇದೀಗ ರಾಜ್ಯವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಸದಸ್ಯನಿಗೆ 5 ಕೆಜಿ ಉಚಿತವಾಗಿ ಅಕ್ಕಿ ನೀಡ ಲಿದ್ದು, ಪ್ರತಿ ಸದಸ್ಯನಿಗೆ ಉಚಿತವಾಗಿ 10 ಕೆಜಿ ದೊರೆಯಲಿದೆ.

ಅಕ್ಕಿ ಖರೀದಿ ಹೇಗೆ?

  • ಪ್ರತಿ ತಿಂಗಳು ಎಫ್​ಸಿಐಗೆ ಹಣ ಪಾವತಿಸಿ ಅಕ್ಕಿ ಖರೀದಿ
  • ಎಫ್​ಸಿಐ ಗೋದಾಮುಗಳಿಂದ ಸಗಟು ಮಳಿಗೆಗೆ ಎತ್ತುವಳಿ
  • ಅನ್ನಭಾಗ್ಯ ಅನುಷ್ಠಾನಕ್ಕಾಗಿ ಖರೀದಿ ಏಜೆನ್ಸಿಗಳ ನೇಮಕ
  • ಕೇಂದ್ರ ,ರಾಜ್ಯದ ಪಾಲು ಸೇರಿ ಒಟ್ಟು 10 ಕೆಜಿ ಅಕ್ಕಿ ಲಭ್ಯ