ನ್ಯೂಸ್

ಕನ್ವರ್ ಯಾತ್ರೆ: ಟ್ರಕ್ ಪಲ್ಟಿಯಾಗಿ 10 ಭಕ್ತರಿಗೆ ಗಾಯ

ಮುಜಾಫರ್​ನಗರ(ಉತ್ತರ ಪ್ರದೇಶ): ವಾರ್ಷಿಕ ಕನ್ವರ್ ಯಾತ್ರೆ ವೇಳೆ ಅವಘಡ ಸಂಭವಿಸಿದೆ. ಶನಿವಾರ ಬೆಳಗ್ಗೆ ಉತ್ತರ ಪ್ರದೇಶದ ಮುಜಾಫರ್‌ನಗರ ಪಟ್ಟಣದ ಸಾತೇರಿ ಗ್ರಾಮದ ಬಳಿ ಟ್ರಕ್‌ ಪಲ್ಟಿಯಾಗಿ ಸುಮಾರು 10 ಯಾತ್ರಿಗಳು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗ್ರಾದಿಂದ ಹರಿದ್ವಾರಕ್ಕೆ ಗಂಗಾಜಲ ಸಂಗ್ರಹಿಸಲು ಹೊರಟಾಗ ವಾಹನದ ಟೈರ್‌ಗಳು ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ಮುಜಾಫರ್​ನಗರ ಅಪರಾಧ ವಿಭಾಗದ ಸರ್ಕಲ್ ಆಫೀಸರ್ ಆರ್.ಯಾದವ್ ತಿಳಿಸಿದ್ದಾರೆ.

ಇದೇ ತಿಂಗಳ 22ರಿಂದ ಕನ್ವರ್ ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಶಾಂತಿ ಮತ್ತು ಭದ್ರತೆಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಪಡೆಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.

ಪ್ರತಿ ಜಿಲ್ಲೆಯ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಯಾವುದೇ ತೊಂದರೆಯಾಗದಂತೆ ಪಾದಯಾತ್ರೆ ಮುಂದುವರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸು ಅಂಗಡಿಗಳ ಮಾಲೀಕರ ಹೆಸರನ್ನು ಹಾಕಲು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಈ ಮೂಲಕ ಸರ್ಕಾರದ ಆದೇಶವನ್ನು ಪಾಲಿಸುವಂತೆ ಹರಿದ್ವಾರ ಪೊಲೀಸರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.