ಬೆಂಗಳೂರು: ಬುಧವಾರ ರಾತ್ರಿ ಬೆಂಗಳೂರಿಗರು ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ನಿಂದ ಪರದಾಡಿದ್ದಾರೆ. ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತವು. ನಗರದ ಹೊರವರ್ತುಲ ರಸ್ತೆ(ಒಆರ್ಆರ್)ಯಲ್ಲಿ ಟ್ರಾಫಿಕ್ ಜಾಮ್ನ ಅತಿ ಕೆಟ್ಟ ಪರಿಣಾಮ ಬೀರಿತು. ಕೆಲವರು ಸುಮಾರು 5 ಗಂಟೆಗಳವರೆಗೆ ವಾಹನಗಳ ಮಧ್ಯೆ ಸಿಲುಕಿ ಪರದಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಂದು ಈದ್ ಮಿಲಾದ್, ನಾಳೆ ಕರ್ನಾಟಕ ಬಂದ್, ಶನಿವಾರ ಮತ್ತು ಭಾನುವಾರ ವೀಕೆಂಡ್ ಮತ್ತು ಸೋಮವಾರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಎಲ್ಲರು ಒಮ್ಮಲೆ ಊರಿಗೆ ತೆರಳಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ನಾಳೆ ವಾಹನಗಳು ಸಂಚಾರ ವಿರಳವಾಗಿರುತ್ತದೆ. ಇದರಿಂದ ನಿನ್ನೆಯೇ ಜನರು ಊರುಗಳಿಗೆ ತೆರಳಿದ್ದಾರೆ.
ಟ್ವಿಟ್ಟರ್ನಿಂದ ಎಕ್ಸ್ ಆಗಿ ಬದಲಾಗಿರುವ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಅನೇಕ ನೆಟ್ಟಿಗರು ಟ್ರಾಫಿಕ್ ಜಾಮ್ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಚೇರಿಗಳಿಗೆ ಅಥವಾ ಮನೆಗೆ ಹಿಂದಿರುಗುವ ಮಾರ್ಗದಲ್ಲಿ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಕೆಲವರು ರಾತ್ರಿ 9 ಗಂಟೆಗೂ ಮೊದಲು ಕಚೇರಿಯಿಂದ ಹೊರಹೋಗದಂತೆ ಅಥವಾ ಓಆರ್‌ಆರ್, ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸಿಲ್ಕ್‌ಬೋರ್ಡ್ ಮಾರ್ಗಗಳನ್ನು ಬಳಸದಂತೆ ಸಲಹೆ ನೀಡಿದರು.
ಕಳೆದ ಮೂರು ಗಂಟೆಯಲ್ಲಿ 1.5 ಕಿ.ಮೀ ಇದು ನಿಜಕ್ಕೂ ಭಯಾನಕ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಕೇವಲ ಒಂದು ಕಿ.ಮೀ ತಲುಪಲು 2 ಗಂಟೆಗಳನ್ನು ತೆಗೆದುಕೊಂಡಿತು ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ಸ್ಕೂಲ್ ಬಸ್ ಒಂದು ಶಾಲಾ ಮಕ್ಕಳನ್ನು ರಾತ್ರಿ 8 ಗಂಟೆಗೆ ಮನೆಗೆ ಡ್ರಾಪ್ ಮಾಡಿತು ಎಂದು ಇನ್ನೊರ್ವ ನೆಟ್ಟಿಗ ತಿಳಿಸಿದ್ದಾರೆ.
ಟ್ರಾಫಿಕ್ನಿಂದ ಅಸಮಾಧಾನಗೊಂಡ ಅನೇಕರು ಸರ್ಕಾರದ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇಂದು ಸಂಪೂರ್ಣವಾಗಿ ಭಯಾನಕ ಟ್ರಾಫಿಕ್, ಆಫೀಸ್‌ಗೆ ಹೋಗಲು ಮತ್ತು ಬರಲು 5 ಗಂಟೆಗಳನ್ನು ತೆಗೆದುಕೊಂಡಿತು. ಬೆಂಗಳೂರಿನ ಟ್ರಾಫಿಕ್ ಮಿತಿ ಮೀರಿದೆ. ಬೆಳ್ಳಂದೂರಿನಲ್ಲಿ ಸಂಚಾರ ದಟ್ಟಣೆಯಿಂದ ಪಾದಚಾರಿಗಳಿಗೂ ಸ್ಥಳವಿಲ್ಲ. ಫುಟ್‌ಪಾತ್‌ನಲ್ಲಿ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನ ಸವಾರರು ಇದ್ದರು. ಈ ಬೈಕರ್‌ಗಳಿಗೆ ದಂಡ ವಿಧಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ? ಎಂದು ಪ್ರಶ್ನಿಸುವ ಮೂಲಕ ದ್ವಿಚಕ್ರ ವಾಹನಗಳು ಫುಟ್‌ಪಾತ್‌ನಲ್ಲಿ ಚಲಿಸುವ ವಿಡಿಯೋವನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಅಸಾಮಾನ್ಯ ಟ್ರಾಫಿಕ್ ಉಂಟಾಗಲು ಹಲವಾರು ಕಾರಣಗಳಿವೆ. ಕರ್ನಾಟಕ ಬಂದ್ ಮತ್ತು ಸಾಲು ಸಾಲು ರಜೆಗಳು ಒಂದೆಡೆಯಾದರೆ, ಭಾರತ ಪ್ರವಾಸದಲ್ಲಿರುವ ಹಾಸ್ಯನಟ ಟ್ರೆವರ್ ನೋಹ್ ಅವರು ಬೆಂಗಳೂರಿನಲ್ಲಿ ತಮ್ಮ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಈ ಕಾರ್ಯಕ್ರಮ ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ನಡೆಯಬೇಕಾಗಿತ್ತು. ಟ್ರೆವರ್ ನೋಹ್ ಅವರು ತಮ್ಮ ಗುರಿಯನ್ನು ತಲುಪಲು 30 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು ಎಂದು ವರದಿಯಾಗಿದೆ. ಅವರ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದ್ದ ಹಲವಾರು ಬೆಂಗಳೂರು ನಿವಾಸಿಗಳು ಹಾಜರಾಗಲು ತಮ್ಮ ಕಚೇರಿಯಿಂದ ಬೇಗ ಹೊರಟಿದ್ದರು. ಇದು ಅವರ ಪ್ರದರ್ಶನಕ್ಕೆ ಹೋಗುವ ORR ನಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿತು. ಸ್ಥಳವನ್ನು ತಲುಪಲು ಪ್ರಯಾಣಿಕರು 2-3 ಗಂಟೆಗಳ ಕಾಲ ಸಿಲುಕಿಕೊಂಡರು.
1.5 ರಿಂದ 2 ಲಕ್ಷದವರೆಗೆ ಇರಬೇಕಿದ್ದ ವಾಹನಗಳ ದಟ್ಟಣೆ ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚಿತ್ತು. ಆದಾಗ್ಯೂ, ಐಬಿಐ ಸಂಚಾರ ವರದಿಯ ಪ್ರಕಾರ ನಿನ್ನೆ ಸಂಜೆ 7:30 ರ ವೇಳೆಗೆ ಸುಮಾರು 3.59 ಲಕ್ಷ ವಾಹನಗಳು ಸಂಚರಿಸಿದವು. ಇದಿಷ್ಟೇ ಅಲ್ಲದೆ, ಮಳೆಯು ಕೂಡ ಟ್ರಾಫಿಕ್ ಜಾಮ್ಗೆ ಕಾರಣವಾಯಿತು. ಹಲವಾರು ಒಳರಸ್ತೆಗಳಲ್ಲಿ ಜಲಾವೃತಗೊಂಡ ಕಾರಣ ಮಧ್ಯಾಹ್ನ 3:30 ರಿಂದ 5 ಗಂಟೆಯ ನಡುವೆ ಹಲವಾರು ವಾಹನಗಳು ಸ್ಥಗಿತಗೊಂಡವು. (ಏಜೆನ್ಸೀಸ್)