ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಶೇಕಡ 10ರಷ್ಟು ಹೆಚ್ಚಳವಾಗಿದ್ದು, ಆಗಸ್ಟ್ನಲ್ಲಿ 1.75 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು 2024-25ನೇ ಆರ್ಥಿಕ ವರ್ಷದ ಎರಡನೇ ದೊಡ್ಡ ಸಂಗ್ರಹವಾಗಿದೆ ಎಂದು ಭಾನುವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ. 2023ರ ಆಗಸ್ಟ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯ 1.59 ಲಕ್ಷ ಕೋಟಿ ರೂ.ಗಳಾಗಿತ್ತು.
2024ರ ಆಗಸ್ಟ್ನಲ್ಲಿ, ದೇಶೀಯ ಆದಾಯವು ಶೇ.9.2ರಷ್ಟು ಏರಿಕೆ ಯಾಗಿ ಸುಮಾರು 1.25 ಲಕ್ಷ ಕೋಟಿ ರೂ.ಗೆ ತಲುಪಿದೆ. ಸರಕುಗಳ ಆಮದುಗಳಿಂದ ಒಟ್ಟು ಜಿಎಸ್ಟಿ ಆದಾಯವು 12.1% ರಷ್ಟು ಏರಿಕೆಯಾಗಿದ್ದು, 49,976 ಕೋಟಿ ರೂ.ಗೆ ಏರಿಕೆಯಾಗಿದೆ. ಆಗಸ್ಟ್ನಲ್ಲಿ 24,460 ಕೋಟಿ ರೂ. ಮರುಪಾವತಿ ನೀಡಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ಹೆಚ್ಚಳವಾಗಿದೆ. ಮರುಪಾವತಿಯ ನಂತರ ಜಿಎಸ್ಟಿ ನಿವ್ವಳ ಆದಾಯವು 1,50,501 ಕೋಟಿ ರೂ. ಆಗಿದೆ.
ಎನ್ಬಿಸಿಸಿ 1:2 ಬೋನಸ್ ಷೇರು
ಕೇಂದ್ರ ಸರ್ಕಾರಿ ಸ್ವಾಮ್ಯದ ನವರತ್ನ ಕಂಪನಿಯಾದ ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಂಪನಿ (ಎನ್ಬಿಸಿಸಿ) ತನ್ನ ಷೇರುದಾರರಿಗೆ 1:2 ಅನುಪಾತದಲ್ಲಿ ಬೋನ್ ಷೇರು ನೀಡುವುದಾಗಿ ವಾಗ್ದಾನ ಮಾಡಿದ್ದು, ಇದಕ್ಕಾಗಿ 90 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆ. ಕಂಪನಿಯ ಈಕ್ವಿಟಿ ಬಂಡವಾಳದಲ್ಲಿರುವ ಉಚಿತ ಮೀಸಲನ್ನು (ಫ್ರೀ ರಿಸರ್ವ್) ಇದಕ್ಕಾಗಿ ಬಳಸಲಾಗುವುದು. ಈ ನಿರ್ಧಾರಕ್ಕೆ ಮುಂಬರುವ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಷೇರುದಾರರು ಒಪ್ಪಿಗೆ ನೀಡುವುದು ಬಾಕಿ ಇದೆ ಎಂದು ಎನ್ಬಿಸಿಸಿ ತಿಳಿಸಿದೆ. ಬೋನಸ್ ಷೇರಿಗೆ ಅರ್ಹತಾ ದಿನಾಂಕವನ್ನು 2024ರ ಅ. 7ಕ್ಕೆ ಕಂಪನಿ ನಿಗದಿಪಡಿಸಿದೆ. ‘‘ಎನ್ಬಿಸಿಸಿ ಉತ್ತಮ ಆರ್ಥಿಕ ಸ್ಥಿತಿ ಹೊಂದಿದೆ ಎನ್ನುವುದಕ್ಕೆ ಬೋನಸ್ ಷೇರು ನೀಡುತ್ತಿರುವುದೇ ನಿದರ್ಶನವಾಗಿದೆ’ ಎಂದು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮಹಾದೇವಸ್ವಾಮಿ ಹೇಳಿದ್ದಾರೆ. 2017ರಲ್ಲಿ ಕೂಡ ಎನ್ಬಿಸಿಸಿ 1:2 ಅನುಪಾತದಲ್ಲಿ ಬೋನಸ್ ಷೇರು ಘೋಷಿಸಿತ್ತು.