ಕಿತ್ತಳೆ ಬಣ್ಣದ ಉಡುಗೆ ಬಗ್ಗೆ ಯೂಟ್ಯೂಬರ್ ಕೇಳಿದ ಪ್ರಶ್ನೆಗೆ ಗರಂ ಆದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್! Priya Prakash Varrier
- ಬ್ರ್ಯಾಂಡ್ ಪ್ರಚಾರದ ಕಾರ್ಯಕ್ರಮಕ್ಕೆ ಕಿತ್ತಳೆ ಬಣ್ಣದ ಉಡುಪಿನಲ್ಲಿ ಆಗಮಿಸಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್
- ಕೇರಳದಲ್ಲಿ ಆರೆಂಜ್ ಅಲರ್ಟ್ ಘೋಷಿಸಿರುವ ಕಾರಣಕ್ಕೆ ಈ ಬಣ್ಣದ ಉಡುಪು ಧರಿಸಿದ್ದೀರಾ ಎಂದು ಯೂಟ್ಯೂಬರ್ ಪ್ರಶ್ನೆ
- ಯೂಟ್ಯೂಬರ್ ವಿಚಿತ್ರ ಪ್ರಶ್ನೆಗೆ ಕಿರಿಕಿರಿಗೊಂಡು ಬ್ರ್ಯಾಂಡ್‌ಗೆ ಒಪ್ಪುವ ಬಣ್ಣ ಧರಿಸಿರುವುದಾಗಿ ಪ್ರಿಯಾ ವಾರಿಯರ್ ಖಡಕ್ ಉತ್ತರ
- ಪ್ರಿಯಾ ವಾರಿಯರ್ ಜೊತೆ ಅಸಭ್ಯವಾಗಿ ವರ್ತಿಸಿದ ಯೂಟ್ಯೂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
Priya Prakash Varrier : ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿರುವ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ತಮ್ಮ ವಿಭಿನ್ನ ಫೋಟೋಗಳು ಹಾಗೂ ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಭಾಗವಹಿಸಿದ್ದ ಬ್ರ್ಯಾಂಡ್ ಪ್ರಚಾರದ ಕಾರ್ಯಕ್ರಮವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಜನಪ್ರಿಯ ಬ್ರ್ಯಾಂಡ್ ಒಂದರ ಪ್ರಚಾರ ಕಾರ್ಯಕ್ರಮಕ್ಕೆ ಪ್ರಿಯಾ ವಾರಿಯರ್ ಅವರು ಕಿತ್ತಳೆ ಅಥವಾ ಕೇಸರಿ ಬಣ್ಣದ ಉಡುಪಿನಲ್ಲಿ ಆಗಮಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಯೂಟ್ಯೂಬರ್ ಓರ್ವ, ನೀವು ಧರಿಸಿರುವ ಉಡುಪಿನ ಬಣ್ಣಕ್ಕೂ ಹಾಗೂ ಕೇರಳದಲ್ಲಿ ಘೋಷಿಸಲಾಗಿರುವ ಆರೆಂಜ್ ಅಲರ್ಟ್‌ಗೂ ಏನಾದರೂ ಸಂಬಂಧವಿದೆಯೇ ಎಂದು ವಿಚಿತ್ರವಾಗಿ ಪ್ರಶ್ನಿಸಿದ್ದಾನೆ. ಅಲ್ಲದೆ, ಬ್ರ್ಯಾಂಡ್ನ ಬಾಟಲ್ ಬಣ್ಣವನ್ನೂ ಯಾಕೆ ಆರಿಸಿಕೊಂಡಿರಿ ಎಂದು ಅಸಂಬದ್ಧವಾಗಿ ಪ್ರಶ್ನೆ ಮಾಡಿದ್ದಾನೆ.
ಯೂಟ್ಯೂಬರ್‌ನ ಈ ತರಲೆ ಪ್ರಶ್ನೆಯಿಂದ ಕಿರಿಕಿರಿಗೊಂಡ ನಟಿ ಪ್ರಿಯಾ ವಾರಿಯರ್, ತಾವು ಬ್ರ್ಯಾಂಡ್‌ಗೆ ಒಪ್ಪುವ ಬಣ್ಣದ ಉಡುಪನ್ನು ಧರಿಸಿರುವುದಾಗಿ ಮತ್ತು ಆ ಬಣ್ಣವನ್ನು ಹಲವು ವರ್ಷಗಳಿಂದಲೂ ಬಳಸುತ್ತಿರುವುದಾಗಿ ಖಡಕ್ ಉತ್ತರ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊರಬೀಳುತ್ತಿದ್ದಂತೆ ಯೂಟ್ಯೂಬರ್‌ನ ಅಸಭ್ಯ ವರ್ತನೆಯ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿವೆ.
ವ್ಯಕ್ತಿಗಳಿಗೆ ಇಷ್ಟವಾದ ಬಣ್ಣದ ಉಡುಪು ಧರಿಸುವ ಸ್ವಾತಂತ್ರ್ಯವೂ ಇಲ್ಲವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈ ರೀತಿಯ ಅರ್ಥವಿಲ್ಲದ ಪ್ರಶ್ನೆಗಳನ್ನು ಕೇಳುವ ಬದಲು ಸಾರ್ವಜನಿಕರಿಗೆ ಏನಾದರೂ ಉಪಯೋಗವಾಗುವ ಪ್ರಶ್ನೆಗಳನ್ನು ಕೇಳಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ ಯೂಟ್ಯೂಬರ್‌ನ ಮಿತಿ ಮೀರಿದ ವರ್ತನೆ ಚರ್ಚೆಗೀಡಾಗಿದೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಪ್ರಿಯಾ ವಾರಿಯರ್ ಕೊನೆಯದಾಗಿ ಸರ್ವಂ ಮಾಯಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಥ್ರೀ ಮಂಕಿ ಹಾಗೂ ಲವ್ ಹ್ಯಾಕರ್ಸ್ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ, (ಏಜೆನ್ಸೀಸ್).