ಬಾಲಿವುಡ್​ ಚಿತ್ರಕ್ಕಾಗಿ 72 KGಗೆ ತೂಕ ಹೆಚ್ಚಿಸಿಕೊಂಡು ಮತ್ತೆ 14 ಕೆಜಿ ಇಳಿಸಿದ ನಟಿ ನಿಮಿಷಾ..! ಹೇಗಿತ್ತು ತೂಕ ಇಳಿಕೆ ಜರ್ನಿ? Nimisha Sajayan 
ಮಾಲಿವುಡ್

ಬಾಲಿವುಡ್​ ಚಿತ್ರಕ್ಕಾಗಿ 72 KGಗೆ ತೂಕ ಹೆಚ್ಚಿಸಿಕೊಂಡು ಮತ್ತೆ 14 ಕೆಜಿ ಇಳಿಸಿದ ನಟಿ ನಿಮಿಷಾ..! ಹೇಗಿತ್ತು ತೂಕ ಇಳಿಕೆ ಜರ್ನಿ? Nimisha Sajayan

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಹಿಂದಿ ಚಿತ್ರದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ನಟಿ ನಿಮಿಷಾ ಸಾಜಯನ್
  • ಬರೋಬ್ಬರಿ 72 ಕೆಜಿಯಿಂದ 58 ಕೆಜಿಗೆ ಇಳಿದು ಅಚ್ಚರಿ ಮೂಡಿಸಿದ ಪ್ರತಿಭಾನ್ವಿತೆ
  • ತೂಕ ಇಳಿಕೆಯ ಕಠಿಣ ಹಾದಿಯ ಅನುಭವ ಹಂಚಿಕೊಂಡ ಡಿಎನ್​ಎ ಸಿನಿಮಾ ಖ್ಯಾತಿಯ ನಟಿ
  • ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಿರುವ ಬಬಿತಾ ಸಿಂಗ್ ರಿಪೋರ್ಟಿಂಗ್ ಸಿನಿಮಾ
Nimisha Sajayan : ಸಿನಿಮಾ ರಂಗದಲ್ಲಿ ನಟ-ನಟಿಯರು ತಮ್ಮ ಪಾತ್ರದ ಮೇಲಿನ ಸಮರ್ಪಣೆಗಾಗಿ ತಮ್ಮ ದೇಹದ ತೂಕವನ್ನು ಹೆಚ್ಚಿಕೊಳ್ಳುವುದು ಮತ್ತು ಇಳಿಸಿಕೊಳ್ಳುವುದು ಹೊಸದೇನಲ್ಲ. ಆದರೆ, ತೂಕ ಏರಿಳಿತದ ಹಾದಿ ಎಷ್ಟೊಂದು ಕಷ್ಟಕರವಾಗಿರುತ್ತದೆ ಎಂಬುದಕ್ಕೆ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ನಟಿ ನಿಮಿಷಾ ಸಾಜಯನ್ ಅವರೇ ತಾಜಾ ಉದಾಹರಣೆಯಾಗಿದ್ದಾರೆ.
ಬಾಲಿವುಡ್​ ಚಿತ್ರವೊಂದರ ವಿಭಿನ್ನ ಪಾತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಬರೋಬ್ಬರಿ 72 ಕೆ.ಜಿ.ಗೆ ಹೆಚ್ಚಿಸಿಕೊಂಡಿದ್ದ ನಟಿ ನಿಮಿಷಾ ಸಾಜಯನ್, ಸದ್ಯ ತಮ್ಮ ಅದ್ಭುತವಾದ ದೈಹಿಕ ಬದಲಾವಣೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಅವರು ಅನುಭವಿಸಿದ ತೂಕ ಇಳಿಕೆಯ ಕಠಿಣ ಹಾದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ನಿಮಿಷಾ, "ಈ ನಿರ್ದಿಷ್ಟ ಪಾತ್ರಕ್ಕಾಗಿ ನಾನು ಸುಮಾರು 14 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದೆ. (58 ಕೆ.ಜಿ.ಯಿಂದ 72 ಕೆ.ಜಿ.ಗೆ ತಲುಪಿದ್ದೆ). ಆದರೆ, ಆ ಬಳಿಕ ತೂಕವನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲು ನಾನು ನಡೆಸಿದ ಪ್ರಯತ್ನ ಸಂಪೂರ್ಣ ಭಿನ್ನವಾಗಿತ್ತು" ಎಂದು ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ತೂಕ ಇಳಿಕೆಯ ಆರಂಭಿಕ ದಿನಗಳು ಎಷ್ಟು ಕಷ್ಟಕರವಾಗಿದ್ದವು ಎಂಬುದನ್ನು ವಿವರಿಸುತ್ತಾ, "ಮೊದಲ ಹತ್ತು ದಿನಗಳು ಅತ್ಯಂತ ಕಠಿಣವಾಗಿದ್ದವು. ಸರಿಯಾದ ನಿದ್ರೆ ಇಲ್ಲದೆ, ಮೂಡ್ ಸ್ವಿಂಗ್ಸ್, ವಿಪರೀತ ಆಯಾಸ ಹಾಗೂ ಹತಾಶೆಯಿಂದ ಕೂಡಿದ್ದ ಆ ದಿನಗಳಲ್ಲಿ, ನನಗೆ ನಾನೇ 'ಇದು ನನ್ನಿಂದ ಆಗುವುದಿಲ್ಲ' ಎಂದುಕೊಳ್ಳುತ್ತಿದ್ದೆ. ಟ್ರೈನರ್ ಎದುರು ಅತ್ತುಬಿಟ್ಟ ಸಂದರ್ಭಗಳೂ ಇದ್ದವು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಕಠಿಣ ಹಾದಿಯಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ಟ್ರೈನರ್ ಅಲಿ ಶಿಫಾಸ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ನಟಿ, "ನಿಮ್ಮ ಬೆಂಬಲವಿಲ್ಲದಿದ್ದರೆ ನಾನು ಈ ಪ್ರಯತ್ನವನ್ನು ಮಧ್ಯದಲ್ಲೇ ಬಿಟ್ಟುಬಿಡುತ್ತಿದ್ದೆ. ನಾನು ಒತ್ತಡದಲ್ಲಿದ್ದಾಗ ಮುನ್ನಡೆಸಿ, ಬಿಟ್ಟುಬಿಡೋಣ ಎಂದಾಗಲೆಲ್ಲಾ ಧೈರ್ಯ ತುಂಬಿ, ತಾಳ್ಮೆಯಿಂದ ಇರುವಂತೆ ನೆನಪಿಸುತ್ತಿದ್ದ ಮಹಾನ್ ವ್ಯಕ್ತಿ ನೀವು" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಒಟ್ಟಾರೆ ಜರ್ನಿಯು ಕೇವಲ ದೇಹದ ತೂಕ ಇಳಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿರುವ ನಿಮಿಷಾ, ತಾಳ್ಮೆ, ದೃಢವಾದ ನಂಬಿಕೆ ಮತ್ತು ಸರಿಯಾದ ಮಾರ್ಗದರ್ಶನ ನೀಡುವ ವ್ಯಕ್ತಿ ಪಕ್ಕದಲ್ಲಿರುವುದು ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ಮೂಲಕ ತಾವೂ ಕಲಿತುಕೊಂಡಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೆ, ನಿಮಿಷಾ ಸಾಜಯನ್ ಅವರು ಬಾಲಿವುಡ್‌ನ ಬಹು ನಿರೀಕ್ಷಿತ 'ಬಬಿತಾ ಸಿಂಗ್ ರಿಪೋರ್ಟಿಂಗ್' (Babita Singh Reporting) ಎಂಬ ತನಿಖಾ ಅಪರಾಧ ಸಿನಿಮಾಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಅಂಬಿಕಾ ಪಂಡಿತ್ ನಿರ್ದೇಶನದ ಈ ರೋಚಕ ಸಿನಿಮಾ ಸದ್ಯ ಜನಪ್ರಿಯ ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ, (ಏಜೆನ್ಸೀಸ್​).