ಒಬ್ಬ ರೈತ ದಂಪತಿಗೆ ಮೂವರು ಮಕ್ಕಳು. ಅವರಲ್ಲಿ ಮೊದಲಿಬ್ಬರು ಶ್ರಮಜೀವಿಗಳು. ಅವರು ನಿತ್ಯ ತಮ್ಮ ತಂದೆ-ತಾಯಿಗಳೊಂದಿಗೆ ದುಡಿಮೆಗೆ ಹೋಗುತ್ತಿದ್ದರು. ಆದರೆ ಕಿರಿಯ ಮಗ ಮಾತ್ರ ಸೋಮಾರಿ. ಆತ ಯಾವ ಕೆಲಸವನ್ನೂ ಮಾಡದವನಾಗಿದ್ದ. ಆದರೆ ಆತ ಅತಿ ಬುದ್ಧಿವಂತನಾಗಿದ್ದರೂ, ಆ ಬುದ್ಧಿ ಉಪಯೋಗಕ್ಕೆ ಬಾರದಾಗಿತ್ತು!
ಹೀಗಿರುವಾಗ ಒಮ್ಮೆ ಆ ಊರಿಗೆ ಸಂನ್ಯಾಸಿಯೊಬ್ಬ ಬಂದಿದ್ದ. ರೈತ ಆ ಸಂನ್ಯಾಸಿಯೊಂದಿಗೆ ತನ್ನ ಮಗನ ಬಗ್ಗೆ ತಿಳಿಸಿ, ಹೇಗಾದರೂ ಮಾಡಿ ಆತನನ್ನು ಸರಿದಾರಿಗೆ ತರುವಂತೆ ನಿವೇದಿಸಿದ. ಆ ಸಂನ್ಯಾಸಿ ರೈತನ ಮಗನನ್ನು ತನ್ನ ಬಳಿ ಕಳಿಸುವಂತೆ ಸೂಚಿಸಿದ. ಅದರಂತೆ ಮಾರನೇ ದಿನ ಆ ಯುವಕ ಸಂನ್ಯಾಸಿಯನ್ನು ಭೇಟಿಯಾದ. ಪರಸ್ಪರ ಭೇಟಿಯ ನಂತರ ಸಂನ್ಯಾಸಿಗೆ ಯುವಕನ ಅಪರಿಮಿತ ಬುದ್ಧಿವಂತಿಕೆ ಗ್ರಹಿಕೆಗೆ ಬಂತು. ಅವನೊಳಗಿನ ಶಕ್ತಿಯನ್ನು ಗುರುತಿಸಿ, ಉದ್ದೀಪಿಸಿ ಆತನನ್ನು ಪ್ರೇರೇಪಿಸಲು ಸಂನ್ಯಾಸಿ ಯೋಚಿಸಿದ. ಆ ಯುವಕನ ಅಂಗೈಯನ್ನು ನೋಡಿ, ಹಸ್ತರೇಖೆಯನ್ನು ಪರಿಶೀಲಿಸಿ-‘ಮಗು ನಿನ್ನೊಳಗೆ ಅನಂತ ಶಕ್ತಿಯಿದೆ. ಅದರೊಳಗೆ ರಾಜಯೋಗದ ಲಕ್ಷಣಗಳು ಗೋಚರವಾಗುತ್ತಿವೆ. ನೀನು ನಿನ್ನ ಸೋಮಾರಿತನದ ಜಾಡ್ಯವನ್ನು ಬಿಟ್ಟು ಒಂದಷ್ಟು ಬುದ್ಧಿ ಉಪಯೋಗಿಸಿ ಕೆಲಸ ಮಾಡಿದರೆ ನಿಶ್ಚಿತವಾಗಿ ರಾಜನಾಗುವೆ’ ಎಂದ. ಆ ಹುಡುಗನಿಗೆ ಸಂನ್ಯಾಸಿಯ ಈ ಒಂದು ಸ್ಪೂರ್ತಿಯ ಮಾತು ಸಾಕಾಯಿತು! ಅದು ಆತನಲ್ಲಿ ಹೊಸ ಆಸೆ, ಚೈತನ್ಯ, ಭರವಸೆ, ಉತ್ಸಾಹವನ್ನು ಚಿಗುರಿಸಿತು. ಸ್ವಲ್ಪ ಕಷ್ಟಪಟ್ಟರೆ ಜೀವನಪೂರ್ತಿ ಸುಖಪಡಬಹುದೆಂಬ ಆಲೋಚನೆ ಬರುತ್ತಲೇ ತನ್ನ ಬುದ್ಧಿಬಳಸಿ ಆ ರಾಜ್ಯದ ರಾಜನ ಸಲಹೆಗಾರನ ಹುದ್ದೆಯನ್ನು ಗಿಟ್ಟಿಸಿಕೊಂಡ. ಆ ಕೆಲಸವನ್ನು ಬುದ್ಧಿವಂತಿಕೆ ಹಾಗೂ ಶ್ರದ್ಧೆಯಿಂದ ಮಾಡುವ ಸಂಕಲ್ಪ ತೊಟ್ಟ. ಕೆಲವೇ ವರ್ಷಗಳಲ್ಲಿ ರಾಜನ ಅತ್ಯಂತ ಆಪ್ತನಾಗಿ ಮಂತ್ರಿಯೂ ಆದ. ಆ ಯುವಮಂತ್ರಿಯ ಕರ್ತವ್ಯ ಶ್ರದ್ಧೆಯನ್ನು ಕಂಡು ಮನಸೋತ ರಾಜ ತನ್ನ ಮಗಳನ್ನೇ ಮದುವೆ ಮಾಡಿಕೊಡುವ ಆಲೋಚನೆ ಮಾಡಿದ. ಮುಂದೆ ಈ ಸಾಮಾನ್ಯ ರೈತನ ಮಗ ಅದೇ ರಾಜ್ಯದ ರಾಜನೇ ಆದ. ಮಾತ್ರವಲ್ಲ, ಯಶಸ್ವಿ ರಾಜನಾಗಿ ಜನಮನ್ನಣೆ ಗಳಿಸಿದ.
ವ್ಯಕ್ತಿಯೋರ್ವ ತನ್ನೊಳಗಿರುವ ಸಾಮರ್ಥ್ಯನ್ನು ಬಳಸದೆ ಸೋಮಾರಿಯಾಗಿ ಬದುಕುವುದಕ್ಕಿಂತ ತನ್ನೊಳಗಿನ ಕರ್ತೃತ್ವ ಶಕ್ತಿಯನ್ನು ಬಳಸಿ ಮುಂದುವರಿದರೆ ಎಂತಹದ್ದೇ ಉನ್ನತ ಮಟ್ಟವನ್ನು ಏರಬಹುದು. ಮನುಷ್ಯ ಶ್ರಮಪಡದೆ ಉನ್ನತ ಸ್ಥಿತಿಯನ್ನು ತಲುಪಲಾರ. ಒಂದೊಮ್ಮೆ ಶ್ರಮವಿಲ್ಲದೆ ಕೇವಲ ಅದೃಷ್ಟದಿಂದ ಪಡೆದ ಉನ್ನತ ಸ್ಥಾನ ಆತನಿಗೆ ಕೀರ್ತಿ ತಂದುಕೊಡುವುದಿಲ್ಲ. ಯಾವುದೇ ಯಶಸ್ಸಿನ ಹಿಂದೆ ಪರಿಶ್ರಮ ಇದ್ದರೆ ಆ ಯಶಸ್ಸು ಬದುಕಿನ ಸಾರ್ಥಕತೆಯನ್ನು ತಂದುಕೊಡುತ್ತದೆ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)