ಯೋಗ ಎಂದರೆ ಕೂಡಿಸು ಎಂದರ್ಥ. ಯೋಗದ ಪ್ರಾಚೀನತೆಯ ಆಧಾರವನ್ನು ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತದಲ್ಲೂ ಕಾಣಬಹುದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ‘ಕೌಶಲ್ಯಪೂರ್ಣ ಕೆಲಸವೇ ಯೋಗ’ (ಯೋಗಃ ಕರ್ಮಸುಕೌಶಲಂ) ಹಾಗೂ ‘ಜೀವನ ಸಮನ್ವಯ ಸಾಮರಸ್ಯವೇ ಯೋಗ’ (ಸಮತ್ವಂ ಯೋಗ ಉಚ್ಯತೇ) ಎಂದಿರುವರು. ‘ಯೋಗವಾಸಿಷ್ಠ’ದಲ್ಲಿ ವಸಿಷ್ಠಮಹರ್ಷಿಗಳು, ‘ಮನಸ್ಸಿನ ವಿಕಾರ-ಪ್ರತಾಪಗಳ ಉಪಶಮನವೇ ಯೋಗ’ ಎಂದಿರುವರು. ಪತಂಜಲಿ ಮಹರ್ಷಿಗಳು ‘ಚಿತ್ತದ ವೃತ್ತಿಗಳ ನಿರೋಧವೇ ಯೋಗ’ ಎಂದರು. ಮನಸ್ಸಿನ ಕಲ್ಮಶ ಹಾಗೂ ಅದರ ನಿವಾರಣೆಗೆ ಯೋಗ ಪೂರಕವಾಗಿದೆ.
ಮನಸ್ಸಿನ ಗೊಂದಲ ಒತ್ತಡ, ಉದ್ವೇಗ, ಖಿನ್ನತೆ, ಭಾವನೆಗಳ ಅಸಮತೋಲನಗಳೇ ಆಧುನಿಕ ಜೀವನಶೈಲಿಯ ವ್ಯಾಧಿಗಳಿಗೆ ಮೂಲಕಾರಣಗಳಾಗಿವೆ. ಯೋಗವು ಮನಸ್ಸಿನ ವಿಕಾರ-ಕ್ಲೇಶಗಳನ್ನು ನಿವಾರಿಸಿ ಭಾವಸಂಸ್ಕಾರ, ಪ್ರಾಣ ಸಂತುಲನೆ, ಶಾರೀರಿಕ ಸ್ವಾಸ್ಥ್ಯನ್ನು ನೀಡುವುದು. ಸಾಂಪ್ರದಾಯಿಕ ಯೋಗಶಾಸ್ತ್ರಗಳಲ್ಲಿ ಹಠಯೋಗ, ರಾಜಯೋಗ, ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮುಖ್ಯವಾದವು. ಇವು ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತವೆ. ಇದನ್ನೂ ಓದಿ: ಐಪಿಎಲ್ಗೆ ಮುನ್ನ ನವೀಕರಣಗೊಂಡ ಶಾರ್ಜಾ ಕ್ರೀಡಾಂಗಣಕ್ಕೆ ಮನಸೋತ ಸೌರವ್ ಗಂಗೂಲಿ
ಪತಂಜಲಿ ಮಹರ್ಷಿಯ ರಾಜಯೋಗವನ್ನು ಅಷ್ಟಾಂಗಯೋಗ ಎಂದಿರುವರು. ಇದನ್ನೇ ಭಾರತೀಯ ವೈದಿಕದರ್ಶನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪಾತಂಜಲ ಯೋಗಸೂತ್ರಗಳು 196. ಇವನ್ನು ಸಮಾಧಿ, ಸಾಧನ, ವಿಭೂತಿ ಹಾಗೂ ಕೈವಲ್ಯ ಪಾದಗಳಾಗಿ ವಿಂಗಡಿಸಲಾಗಿದೆ. ಇವುಗಳ ನಿರಂತರ ಹಾಗೂ ದೀರ್ಘಕಾಲಿಕ ಅಭ್ಯಾಸದಿಂದ ವ್ಯಕ್ತಿಯು ಮನೋನಿಗ್ರಹ ಪಡೆಯುವ ಮೂಲಕ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವನ್ನು ಹೊಂದಬಹುದು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ - ಇವು ಅಷ್ಟಾಂಗಗಳು. ಇವುಗಳಲ್ಲಿ ಮೊದಲ ನಾಲ್ಕು ಅಂಗಗಳು ಬಹಿರಂಗ ಸಾಧನೆಗಳಾದರೆ, ನಂತರದ ನಾಲ್ಕು ಅಂಗಗಳು ಅಂತರಂಗ ಸಾಧನೆಯ ವಿಕಾಸವಾಗಿದೆ. ಪತಂಜಲಿ ಮಹರ್ಷಿಗಳು ಯೋಗಸೂತ್ರದಲ್ಲಿ, ವಿಶ್ವದ ಯಾವುದೇ ಸಣ್ಣ ಹಾಗೂ ದೊಡ್ಡ ಸಮಸ್ಯೆಗಳ ಮೂಲಕಾರಣವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವುಗಳಲ್ಲಿ ಕೆಲವು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು: ತನ್ನತನದ ಅರಿವಿಲ್ಲದ ಅವಿದ್ಯೆ, ಅಹಂಕಾರ, ವ್ಯಾಮೋಹ, ದ್ವೇಷ, ಶರೀರದ ಕುರಿತ ಅತಿ ಮೋಹ, ಜೊತೆಗೆ ವ್ಯಾಧಿ, ಆಲಸ್ಯ, ಜ್ಞಾನೇಂದ್ರಿಯಗಳ ಅನಿಯಂತ್ರಣ, ಸಂಶಯ-ಪ್ರಮಾದ, ಭ್ರಾಂತಿದರ್ಶನ ಇತ್ಯಾದಿ. ಇದನ್ನೂ ಓದಿ: ಮೂಲವ್ಯಾಧಿ ನಿಯಂತ್ರಣಕ್ಕೆ ಯೋಗಾಭ್ಯಾಸ
ಕ್ಲೇಶ, ಮಾನಸಿಕ ದುಃಖ, ದೌರ್ಮನಸ್ಸು, ಶರೀರದ ನಿರ್ಬಲತೆ, ಉಸಿರಾಟದ ಏರುಪೇರು ಇವುಗಳನ್ನು ಅಷ್ಟಾಂಗಯೋಗದ ಬಹಿರಂಗ ಸಾಧನೆಗಳಿಂದ ದೂರಗೊಳಿಸಬಹುದು. ಇಂದಿನ ಯಾಂತ್ರಿಕ ಜೀವನಶೈಲಿಯ, ಒತ್ತಡದ ಬದುಕಿನ ಪರಿಣಾಮದಿಂದ ಸಹಜ ಸಾಮಾನ್ಯವಾಗಿರುವ ಮಧುಮೇಹ, ಸಂಧಿವಾತ, ಅಸಿಡಿಟಿ, ಗ್ಯಾಸ್ಟ್ರಿಕ್, ರಕ್ತದೊತ್ತಡ, ಮೈಗ್ರೇನ್, ಅಸ್ತಮಾ, ಬೊಜ್ಜು, ಬೆನ್ನುನೋವು, ಖಿನ್ನತೆಗಳ ನಿವಾರಣೆಗೆ ಸರಳವಾದ ಯೋಗಾಸನ, ಪ್ರಾಣಾಯಾಮ, ಮುದ್ರೆ, ಬಂಧ, ಕ್ರಿಯೆ ಹಾಗೂ ಧ್ಯಾನ, ಸಾತ್ವಿಕ ಆಹಾರ-ವಿಹಾರಗಳು ಸಹಕಾರಿಯಾಗಿವೆ. ಶಾರೀರಿಕ ವ್ಯಾಧಿನಿವಾರಣೆಗೆ ಸೂರ್ಯನಮಸ್ಕಾರ, ವಜ್ರಾಸನ, ಉಷ್ಟ್ರಾಸನ, ತ್ರಿಕೋಣಾಸನ, ವೃಕ್ಷಾಸನ, ಧನುರಾಸನ, ಶವಾಸನ ಪೂರಕ. ಮಾನಸಿಕ ಸಮಸ್ಯೆಯ ನಿಯಂತ್ರಣಕ್ಕೆ ಪ್ರಾಣಾಯಾಮ, ಓಂಕಾರಪಠಣ, ಸಹಕಾರಿ. ಬೌದ್ಧಿಕ ಹಾಗೂ ಭಾವನಾತ್ಮಕ ವ್ಯಾಧಿ ನಿವಾರಣೆಗೆ ಸತ್ಸಂಗ, ಕರ್ಮಯೋಗ, ಸೇವೆ, ಜಪ-ತಪ, ಮಂತ್ರಪಠಣಗಳು ಅನುಕೂಲಕರ. ಆಧ್ಯಾತ್ಮಿಕ ಗೊಂದಲ ನಿವಾರಣೆಗೆ ಭಕ್ತಿಯೋಗ, ಧ್ಯಾನ, ಸ್ವಾಧ್ಯಾಯ ಸರಳ ಉಪಾಯಗಳು. ಯೋಗ ಮಾಡಿ ಸುಯೋಗ್ಯರಾಗೋಣ. ಯೋಗದಿಂದ ಭಾಗ್ಯವಂತರಾಗಿ ಬೆಳಗೋಣ.