ಲೈಫ್‌ಸ್ಟೈಲ್

ಹೃದಯದ ಆರೋಗ್ಯ ಕಾಪಾಡುವ ಯೋಗ

kumarvrl

ಸುಮಾರು ವರ್ಷಗಳಿಂದ ನನ್ನ ಮೂಗಿನ ಎಡ ಹೊಳ್ಳೆಯಲ್ಲಿ ಮಾತ್ರ ನೆಗಡಿ ಇದೆ. ನಿತ್ಯ ಯೋಗ ಮಾಡಿದರೂ ಇದರ

ಕಿರಿಕಿರಿ ತಪ್ಪಿಸಲು ಸಾಧ್ಯವಾಗಲಿಲ್ಲ. ಪರಿಹಾರ ತಿಳಿಸಿ.

| ಪಿ. ಪ್ರಕಾಶ್ ಮೈಸೂರು, 62 ವರ್ಷ

ಮೂಗಿನ ಹಾದಿಯಲ್ಲಿ ಅತಿಯಾದ ಲೋಳೆಯ ಪರಿಣಾಮವಾಗಿ ನೆಗಡಿ ಎಂದು ಭಾವಿಸಲಾಗುತ್ತದೆ. ಸಾಮಾನ್ಯ ವಾಗಿ ಶೀತ, ಜ್ವರ, ಅಲರ್ಜಿ ಯಾ ಸೈನಸ್ ಸೋಂಕಿನಿಂದ ಪ್ರಚೋದಿಸುತ್ತದೆ. ಕುಂಡಲಿನಿಯೋಗದ ಪ್ರಾಚೀನ ವಿಜ್ಞಾನದಲ್ಲಿ ಇಡಾ (ಮೂಗಿನ ಎಡ ಹೊಳ್ಳೆ) ಮತ್ತು ಪಿಂಗಳಾ (ಮೂಗಿನ ಬಲ ಹೊಳ್ಳೆ) ಎಂಬ ಎರಡು ಶಕ್ತಿಗಳಿವೆ. ಅದು ಬೆನ್ನು ಮೂಳೆಯ ಬದಿಗಳನ್ನು ಹೆಣೆದುಕೊಂಡಿದೆ. ಮೂಗಿನ ಮಧ್ಯ ಸುಷುಮ್ನಾ ನಾಡಿ ಎನ್ನಲಾಗಿದೆ. ಇಡಾ ಎಂದರೆ ಶಾಂತಗೊಳಿಸುವ, ತಂಪಾಗಿಸುವ ಚಂದ್ರನ ಶಕ್ತಿ. ಪಿಂಗಳಾ ನಾಡಿ ಸೂರ್ಯ ಶಕ್ತಿ, ಉಷ್ಣದ ಅನುಭವ ಮತ್ತು ಚಟುವಟಿಕೆ ಹೆಚ್ಚುತ್ತದೆ. ಈ ಶಕ್ತಿಗಳ ಸಮತೋಲನಕ್ಕೆ ನಾಡೀಶುದ್ಧಿ ಪ್ರಾಣಾಯಾಮ, ಸೂರ್ಯಾನುಲೋಮ, ಹಾಗೂ ಚಂದ್ರಾನುಲೋಮ ಪ್ರಾಣಾಯಾಮಗಳನ್ನು ಗುರುಮುಖೇನ ಕಲಿತು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಇದರೊಂದಿಗೆ ಸಾಧ್ಯವಾಗುವ ವ್ಯಾಯಾಮಗಳು, ಸೂರ್ಯನಮಸ್ಕಾರ, ಆಸನಗಳನ್ನು ಅಭ್ಯಾಸ ಮಾಡಿ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒಮ್ಮೆ ತಜ್ಞ ವೈದ್ಯರೊಂದಿಗೆ ಪರೀಕ್ಷಿಸಿ. ನಿತ್ಯ ಸಾಧ್ಯವಾಗುವ ಯೋಗಾಭ್ಯಾಸ ಮಾಡಿ. ಸೂಚಿತ ಆಸನಗಳು: ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಪರ್ವತಾಸನ, ಶಶಾಂಕಾಸನ, ಸರ್ವಾಂಗಾಸನ ಯಾ ಸೇತುಬಂಧ, ಹಲಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಶವಾಸನ.

ನನ್ನ ಹೃದಯಕ್ಕೆ ಫೇಸ್ ಮೇಕರ್ ಹಾಕಲಾಗಿದೆ. ನಾನು ಯಾವ ಸರಳ ಯೋಗ ಮತ್ತು ಮುದ್ರೆಗಳನ್ನು ಮಾಡಬಹುದು?

| ಗೋವರ್ಧನ್ ಮೂಡುಬಿದಿರೆ, 73 ವರ್ಷ

ನಮ್ಮ ಹೃದಯವು ನಿದ್ರಿಸಿದಾಗಲೂ ನಿರಂತರವಾಗಿ ಕಾರ್ಯ ನಿರ್ವಹಿಸುವ ಒಂದು ಅಂಗವಾಗಿದೆ. ದೇಹದಾದ್ಯಂತ ರಕ್ತವನ್ನು ಪಂಪ್ ಮಾಡಲು ಇದು ಅತ್ಯಂತ ಪ್ರಮುಖ ಅಂಗ. ಇದನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಜಡ ಜೀವನಶೈಲಿ, ಆಹಾರಪದ್ಧತಿ ಮತ್ತು ಒತ್ತಡವು ನಮ್ಮ ಹೃದಯದ ಸಾಮಾನ್ಯ ಕಾರ್ಯಚಟುವಟಿಕೆಗೆ ತೊಂದರೆ ಕೊಡುತ್ತದೆ ಮತ್ತು ಹೃದಯಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್ ಕೂಡ ಇತ್ತೀಚೆಗೆ ಹೃದ್ರೋಗದಿಂದ ಬಳಲುತ್ತಿ ರುವವರಿಗೆ ಯೋಗಾಭ್ಯಾಸ ಮಾಡಲು ಶಿಫಾರಸು ಮಾಡಿದೆ. ಒತ್ತಡ, ಆತಂಕ, ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ. ನಿಮಗೆ ಸರಳ ಯೋಗ ಸಾಕು.

ಸೂಚಿತ ಆಸನಗಳು: ತಾಡಾಸನ, ಅರ್ಧಕಟಿ ಚಕ್ರಾಸನ, ವಜ್ರಾಸನ, ಬದ್ಧಕೋಣಾಸನ, ಪರ್ವತಾಸನ, ಮಾರ್ಜಾಲಾಸನ, ವಕ್ರಾಸನ, ಉತ್ಥಿತ ಏಕಪಾದಾಸನ, ಶವಾಸನ ಅಭ್ಯಾಸ ಮಾಡಿ.

ಪ್ರಾಣಾಯಾಮ: ನಾಡಿಶುದ್ಧಿ, ಸುಖಪ್ರಾಣಾಯಾಮ.

ಮುದ್ರೆಗಳು: ಹೃದಯಮುದ್ರೆ 10-20 ನಿಮಿಷ, (ಓಂ ನಮಃ ಶಿವಾಯ ಮಂತ್ರ 108 ಬಾರಿ ಪಠಿಸಿ) ಆಕಾಶಮುದ್ರೆ 10 ನಿಮಿಷ, ಪ್ರಾಣಮುದ್ರೆ 10 ನಿಮಿಷ. ಬೆಳಗ್ಗೆ ಮತ್ತು ಸಂಜೆ ತಲಾ 10 ನಿಮಿಷ ಸಾಮಾನ್ಯ ಉಸಿರನ್ನು ಗಮನಿಸುವ ಧ್ಯಾನ ಮಾಡಿ. ನಿಯತವಾಗಿ ವೈದ್ಯರೊಂದಿಗೆ ಸಮಾಲೋಚಿಸಿ.