ಪಾದಗಳಿಗೆ ಭೂಸ್ಪರ್ಶ ಆಗುವುದು ಗೊತ್ತಾಗುತ್ತಿಲ್ಲ. ಮರಗಟ್ಟುವಿಕೆಯ ಹಾಗೆ ಆಗುತ್ತದೆ. ಯೋಗ, ಮುದ್ರೆಗಳ ಪರಿಹಾರ ತಿಳಿಸಿ.
| ಪ್ರಭಾವತಿ 62 ವರ್ಷ, ಧಾರವಾಡ
ಯೋಗ ತರಗತಿಗಳಲ್ಲಿ ಬರುವ ಅನೇಕ ಪ್ರಶ್ನೆಗಳಲ್ಲಿ ಇದೂ ಒಂದಾಗಿದೆ. ಜುಮ್ಮೆನಿಸುವಿಕೆ, ಮರಗಟ್ಟುವಿಕೆ (ಪಾದಗಳಲ್ಲಿ) ಹಾಗೂ ಕಾಲಿನ ಸ್ನಾಯು ಸೆಳೆತ ಇತ್ಯಾದಿಗಳು. ಇದು ಮಧುಮೇಹ ಸಂಬಂಧಿತ ನರರೋಗದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಮರಗಟ್ಟುವಿಕೆ, ಕಳಪೆ ರಕ್ತ ಪರಿಚಲನೆ, ನರಗಳ ಒತ್ತಡದಿಂದ ಉಂಟಾಗಬಹುದು ಎಂದು ಸಂಶೋಧನೆಗಳಲ್ಲಿ ತಿಳಿಸಲಾಗಿದೆ. ಕಾಲಿಗೆ ಹೆಚ್ಚಿನ ಒತ್ತಡ ಉಂಟಾಗುವ ಯೋಗಾಸನಗಳ ಅಭ್ಯಾಸ ಬೇಡ. ಆರಂಭದಲ್ಲಿ ಗೋಡೆಗೆ ಒರಗಿ ಕುಳಿತುಕೊಂಡು ಕಾಲುಗಳನ್ನು ಅಲ್ಲಾಡಿಸುವ ವ್ಯಾಯಾಮ ಮಾಡಿ. ಆಮೇಲೆ ಮಲಗಿಕೊಂಡು ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮ ಸಾಧ್ಯವಾಗುವಷ್ಟು ಮಾಡಿ. ಮಲಗಿ ಒಂಬತ್ತು ಬಾರಿ ಉತ್ಥಿತ ಏಕಪಾದಾಸನ ಅಭ್ಯಾಸ ಮಾಡಿ. ಹೊಟ್ಟೆಯ ಆಧಾರದ ಮಕರಾಸನ, ಏಕಪಾದ ಶಲಭಾಸನ, ವಜ್ರಾಸನ, ಶವಾಸನ ಇಷ್ಟನ್ನು ಮೂರು ತಿಂಗಳು ಅಭ್ಯಾಸ ಮಾಡಿ. ತಲಾ ಹತ್ತು ನಿಮಿಷ ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಿ. ಒಮ್ಮೆ ವೈದ್ಯರನ್ನು ಭೇಟಿಮಾಡಿ ಕಾರಣವನ್ನು ಪತ್ತೆ ಹಚ್ಚಿ. ಅಗತ್ಯದ ಉಪಚಾರದೊಂದಿಗೆ ಈ ಮೇಲೆ ತಿಳಿಸಿದ ಯೋಗದ ಉಪಚಾರವನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡಿ. ನಿಮ್ಮ ಬಿಡುವಿನ ವೇಳೆಯಲ್ಲಿ ಪಂಚತತ್ತ್ವಗಳನ್ನು ಸಮತೋಲನಗೊಳಿಸುವ ಮುದ್ರೆಗಳನ್ನು ಅಭ್ಯಾಸ ಮಾಡಿ.
ಮುದ್ರೆಗಳು: ಇಪ್ಪತ್ತು ನಿಮಿಷ ಪ್ರಾಣಮುದ್ರೆ, 10 ನಿಮಿಷ ಚಿನ್ಮುದ್ರೆ, 10 ನಿಮಿಷ ಶೂನ್ಯಮುದ್ರೆ, 10ನಿಮಿಷ ಹಾಕಿನಿಮುದ್ರೆ ಅಭ್ಯಾಸ ಮಾಡಿ.
ನನಗೆ ಚಿನ್ಮುದ್ರೆಯ ಬಗ್ಗೆ ಮಾಹಿತಿ ತಿಳಿಸಿ.
| ಮಾಲತಿ 20 ವರ್ಷ, ಧಾರವಾಡ
ಚಿತ್ ಎಂದರೆ ಸಂಸ್ಕೃತದಲ್ಲಿ ಪ್ರಜ್ಞೆ ಎಂಬ ಅರ್ಥ. ಮುದ್ರೆ ಎಂದರೆ ಮೊಹರು ಎಂದರ್ಥ. ಈ ಗಲ್ಲದ ಮುದ್ರೆಯು ಜ್ಞಾನದ ಸೂಚಕವಾಗಿದೆ ಎಂದು ಯೋಗಗಳಲ್ಲಿ ಹೇಳುತ್ತಾರೆ. ಹೆಬ್ಬೆರಳಿನಲ್ಲಿ ಅಗ್ನಿತತ್ತ್ವವಿದೆ. ತೋರುಬೆರಳಲ್ಲಿ ವಾಯುತತ್ತ್ವವಿದೆ. ಇವೆರಡು ಜೊತೆಯಾದಾಗ ಮನಸ್ಸು ಸ್ಥಿರಗೊಂಡು ಶಾಂತತೆ, ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚುತ್ತದೆ.
ವಿಧಾನ: ಯಾವುದಾದರೊಂದು ಒಂದು ಭಂಗಿಯಲ್ಲಿ (ಪದ್ಮಾಸನ, ವಜ್ರಾಸನ, ವೀರಾಸನ, ಸುಖಾಸನ ಇತ್ಯಾದಿ ಆಸನಗಳಲ್ಲಿ) ಕುಳಿತುಕೊಂಡು ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಯನ್ನು ಲಘುವಾಗಿ ಹಿಡಿದುಕೊಳ್ಳಿ. ಉಳಿದ ಮೂರು ಬೆರಳುಗಳನ್ನು ನೇರವಾಗಿಸಿ, ಕೈಗಳನ್ನು ಮಂಡಿಯ ಮೇಲಿಟ್ಟು ಅಭ್ಯಾಸ ಮಾಡಿ. ಎಷ್ಟು ಹೊತ್ತು ಬೇಕಾದರೂ ಅಭ್ಯಾಸ ಮಾಡಬಹುದು.
ಪ್ರಯೋಜನ: ಈ ಮುದ್ರೆ ಮನಸ್ಸನ್ನು ಹಿಂಡುವ ಹಳೆ ನೋವನ್ನು (ಮಾನಸಿಕ ಒತ್ತಡ) ನಿವಾರಿಸುತ್ತದೆ. ಧ್ಯಾನದ ಸಮಯದಲ್ಲಂತೂ ಏಕಾಗ್ರತೆಯ ಸುಧಾರಣೆ, ದೇಹ-ಮನಸ್ಸಿನ ಒತ್ತಡ ನಿಯಂತ್ರಣವಾಗುವುದು. ಪದೇಪದೆ ಮಾನಸಿಕ ಒತ್ತಡ, ಗಡಿಬಿಡಿ, ಪದೇಪದೆ ಕೋಪಕ್ಕೆ ಒಳಗಾಗುವವರಿಗೆ ಜ್ಞಾನಮುದ್ರೆ ಸಹಕಾರಿಯಾಗುತ್ತದೆ. ಈ ಮುದ್ರೆ ನಮ್ಮನ್ನು ನಿಧಾನ ಶಕ್ತಿಯಿಂದ ಮೇಲಕ್ಕೆತ್ತಲು ಸಹಾಯ ಮಾಡುತ್ತದೆ, ಹೆಚ್ಚು ಗ್ರಹಿಸುವ ಸ್ಥಿತಿಯನ್ನು ಸೃಷ್ಟಿಸುತ್ತದೆ.