ಪೇಪರ್​ನಲ್ಲಿ ಕಟ್ಟಿದ ಬಿಸಿ ಬಿಸಿ ಬಜ್ಜಿ, ಬೋಂಡಾ ತಿಂತೀರಾ? ಇದಕ್ಕಿಂತ ಡೆಂಜರೇಸ್​ ಮತ್ತೊಂದಿಲ್ಲ ಅನ್ನೋದಕ್ಕೆ ಇವೇ ನೋಡಿ ಕಾರಣ 
ಲೈಫ್‌ಸ್ಟೈಲ್

ಪೇಪರ್​ನಲ್ಲಿ ಕಟ್ಟಿದ ಬಿಸಿ ಬಿಸಿ ಬಜ್ಜಿ, ಬೋಂಡಾ ತಿಂತೀರಾ? ಇದಕ್ಕಿಂತ ಡೇಂಜರೆಸ್​ ಮತ್ತೊಂದಿಲ್ಲ ಅನ್ನೋದಕ್ಕೆ ಇವೇ ನೋಡಿ ಕಾರಣ

ಬೆಳಗ್ಗಿನ ಚಿತ್ರಾನ್ನ, ಪುಳಿಯೋಗರೆ ಜತೆಗೆ ಒಂದು ಮಸಾಲೆ/ಉದ್ದಿನ ವಡೆ ತಿನ್ನೋ ಮಜಾನೇ ಬೇರೆ. ಇನ್ನು ಸಂಜೆಯಾದರೆ ಸಾಕು ಬಿಸಿ ಬಿಸಿ ಟೀ/ಕಾಫಿ ಜತೆ ಬೊಂಡಾ, ಬಜ್ಜಿ ತಿಂದರಂತು ಆಹಾ ಆ ರುಚಿಗೆ ಪಾರಾವೇ ಇಲ್ಲ ಅನಿಸುತ್ತೆ. ಒಂದೆರೆಡು ತಿನ್ನೋರು ಬಿಸಿ ಇದೇ ಅಂತ ಮೂರ್ನಾಲ್ಕು ಸವಿಯುವುದು ತೀರ ಸಾಮಾನ್ಯ. ಆದರೆ, ಇದನ್ನು ಪೇಪರ್​ನಲ್ಲಿ ತಿನ್ನುವುದು ಮತ್ತು ಮನೆಯವರಿಗೂ ಸ್ವಲ್ಪ ಕೊಡೋಣ ಎಂದು ಪೇಪರ್​ನಲ್ಲಿ ಪಾರ್ಸೆಲ್​ ಕಟ್ಟಿಸಿಕೊಳ್ಳುವ ಮಂದಿಗೆ ಈ ಆಘಾತಕಾರಿ ಸುದ್ದಿ ತಿಳಿದಿರಲೇಬೇಕು.

ಅಂಗಡಿಗಳಲ್ಲಿ ಇಂತಹ ಕರಿದ ತಿನಿಸುಗಳನ್ನು ಪಾರ್ಸೆಲ್ ಕೊಡುವಾಗ ಹಳೆಯ ನ್ಯೂಸ್​ ಪೇಪರ್​ಗಳಲ್ಲಿ ಕಟ್ಟಿಕೊಡುವುದು ಹೆಚ್ಚು. ಆದರೆ, ಇದೇ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತೆ, ಪೇಪರ್​ನಲ್ಲಿದ್ದ ಬೊಂಡಾ, ಬಜ್ಜಿ ತಿನ್ನೋದು ಎಷ್ಟು ಡೇಂಜರೆಸ್​ ಎಂಬುದರ ಬಗ್ಗೆ ಹೀಗಿದೆ ನೋಡಿ ಮಾಹಿತಿ. ಪೇಪರ್​ನಲ್ಲಿ ಪ್ರಿಂಟ್​ ಆಗಿರುವ ಶಾಯಿಯಲ್ಲಿ ರಾಸಾಯನಿಕ ಅಂಶಗಳಿರುತ್ತವೆ. ಇವು ನೀವು ತಿನ್ನುವ ಆಹಾರಗಳ ಜತೆಯಲ್ಲೇ ನಿಮ್ಮ ದೇಹವನ್ನು ಸೇರುತ್ತದೆ.

ನ್ಯೂಸ್​ಪೇಪರ್​ ಇಂಕ್​ ಎಷ್ಟು ಡೆಂಜರೆಸ್​?

ದಿನಪತ್ರಿಕೆಗಳನ್ನು ಮುದ್ರಿಸಲು ಬಳಸುವ ಶಾಯಿಯಲ್ಲಿ ವಿವಿಧ ಬಣ್ಣದ್ರವ್ಯಗಳು, ರಾಸಾಯನಿಕಗಳು ಹಾಗೂ ಸೀಸದಂತಹ ಲೋಹದ ಅಂಶಗಳು ಇರುತ್ತವೆ. ಬಿಸಿಬಿಸಿ ಕರಿದ ತಿಂಡಿಗಳನ್ನು ನ್ಯೂಸ್​ ಪೇಪರ್​ಗಳಲ್ಲಿ ಕಟ್ಟಿಕೊಡುವುದರಿಂದ ಅಥವಾ ಅದರಲ್ಲಿ ಸುತ್ತಿದಾಗ, ಶಾಯಿಯಲ್ಲಿರುವ ಕೆಲವು ಅಂಶಗಳು ಆಹಾರಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಇಂತಹ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಇದರ ಜತೆಗೆ ಟೀ ಅಂಗಡಿಗಳಲ್ಲಿ ಬಳಸುವ ಹಳೆಯ ಪತ್ರಿಕೆಗಳ ಮೇಲೆ ಧೂಳು, ಕೊಳಕುಗಳು ಇರಬಹುದು. ಇವು ಆಹಾರದ ಸ್ವಚ್ಛತೆ ಮತ್ತು ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು.

ಜೀರ್ಣಕ್ರಿಯೆ, ಕಿಡ್ನಿ ಸಮಸ್ಯೆ

ನ್ಯೂಸ್​ ಪೇಪರ್​ನಲ್ಲಿರುವ ಶಾಯಿಯಲ್ಲಿರುವ ಕೆಲವು ರಾಸಾಯನಿಕ ಅಂಶಗಳು ದೇಹಕ್ಕೆ ಸೇರಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಮೂತ್ರಪಿಂಡಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ದೀರ್ಘಕಾಲ ಇಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವೂ ಇರಬಹುದು.

ಹಾಗಿದ್ದರೆ ನ್ಯೂಸ್​ಪೇಪರ್​ ಬದಲು ಏನು?

ಬಜ್ಜಿ, ವಡೆ, ಬೋಂಡಾ ಸೇರಿ ತಿಂಡಿಗಳನ್ನು ಪ್ಯಾಕ್ ಮಾಡಲು ದಿನಪತ್ರಿಕೆಗಳನ್ನು ಬಳಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು. ಬದಲಿಗೆ ಬಾಳೆ ಎಲೆ, ಆಹಾರ ದರ್ಜೆಯ ಬಟರ್ ಪೇಪರ್ ಬಳಸುವುದು ಉತ್ತಮ. ಇಲ್ಲಿ ಅಂಗಡಿಯವರು ಮಾತ್ರವಲ್ಲದೆ, ಅದನ್ನು ತಿನ್ನುವ ಗ್ರಾಹಕರೂ ಸಹ ತಮ್ಮ ಆರೋಗ್ಯ ಮೇಲಿನ ಕಾಳಜಿಯಿಂದ, ಸ್ಟೀಲ್​ ಬಾಕ್ಸ್​ ಅಥವಾ ಇನ್ನಿತರ ವಸ್ತುವಿನಲ್ಲಿ ಕೊಂಡೊಯ್ಯುವುದು ಒಳಿತು.

ರುಚಿಯಿಂದ ನಾಲಿಗೆ ಖುಷಿ ಅಥವಾ ತೃಪ್ತಿಪಟ್ಟರೂ ದೇಹದ ಒಳಗಿನ ಅಂಗಗಳು ಇದರಿಂದ ನರಳುವುದಂತು ಖಚಿತ. ರುಚಿ-ಶುಚಿ ಜತೆ ಜತೆಗೆ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ. ಹೀಗಾಗಿ, ಇನ್ನು ಮುಂದೆ ಟೀ ಅಂಗಡಿಗಳಲ್ಲಿ ಬಜ್ಜಿ, ವಡೆ ಪಾರ್ಸೆಲ್ ಮಾಡಿಸಿಕೊಳ್ಳುವ ಮುನ್ನ ನಾವಿಲ್ಲಿ ತಿಳಿಸಿರುವ ಪ್ರಮುಖ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಪೇಪರ್​ನಲ್ಲಿ ಕಟ್ಟಿಸಿಕೊಳ್ಳುವ ಬದಲಿಗೆ ಪರ್ಯಾಯ ಆಯ್ಕೆಯನ್ನು ರೂಢಿಸಿಕೊಳ್ಳಿ,(ಏಜೆನ್ಸೀಸ್).