ಲೈಫ್‌ಸ್ಟೈಲ್

ಬಿಳಿ vs ಗುಲಾಬಿ: ಯಾವ ಬಣ್ಣದ ಡ್ರ್ಯಾಗನ್​ ಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dragon fruit

ಡ್ರ್ಯಾಗನ್​ ಫ್ರೂಟ್ಸ್ ( Dragon fruit ) ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲೇ ತನ್ನದೇಯಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದು ವಿದೇಶಿ ಮೂಲದ ಹಣ್ಣಾಗಿರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ದುಬಾರಿಯಾಗಿದೆ. ಆದರೆ, ಈಗೀಗ ಭಾರತದಲ್ಲೂ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಗ್ರಾಹಕರ ಕೈಗೆ ಸುಲಭವಾಗಿ ಎಟುಕುತ್ತಿದೆ.

ಅಂದಹಾಗೆ ಈ ಡ್ರ್ಯಾಗನ್​ ಫ್ರೂಟ್ಸ್ ( Dragon fruit )​​ ಇತರೆ ಹಣ್ಣುಗಳಿಗಿಂತ ವಿಶೇಷ ಗುರುತನ್ನು ಹೊಂದಿದ್ದು, ತುಂಬಾ ಆಕರ್ಷಕವಾಗಿ ಕಾಣುತ್ತದೆ. ಈ ಹಣ್ಣನ್ನು ಮಕ್ಕಳು ಮತ್ತು ದೊಡ್ಡವರೆನ್ನದೆ ಎಲ್ಲರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇದರಿಂದ ದೇಹಕ್ಕೆ ಹಲವಾರು ಲಾಭಗಳನ್ನು ಪಡೆಯಬಹುದು. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ.

ನಾವು ಮುಖ್ಯವಾಗಿ ಎರಡು ರೀತಿಯ ಡ್ರ್ಯಾಗನ್ ಫ್ರೂಟ್​ಗಳನ್ನು ಕಂಡಿದ್ದೇವೆ. ಎರಡೂ ಹಣ್ಣುಗಳ ಸಿಪ್ಪೆ ಮಾತ್ರ ಗಾಢ ಗುಲಾಬಿ ಬಣ್ಣದಲ್ಲಿ ಇರುತ್ತದೆ. ಆದರೆ, ಒಳಗಿನ ತಿರುಳು ಮಾತ್ರ ಬೇರೆ ಬೇರೆಯಾಗಿರುತ್ತದೆ. ಒಂದು ಹಣ್ಣಿನಲ್ಲಿ ಗುಲಾಬಿ ಮತ್ತು ಇನ್ನೊಂದು ಹಣ್ಣಿನಲ್ಲಿ ಬಿಳಿ ಬಣ್ಣದ ತಿರುಳು ಇರುತ್ತದೆ. ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ, ಈ ಎರಡರಲ್ಲಿ ಯಾವುದೂ ಆರೋಗ್ಯಕರ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇತರೆ ಹಣ್ಣುಗಳಿಗೆ ಹೋಲಿಸಿದರೆ, ಡ್ರ್ಯಾಗನ್ ಫ್ರೂಟ್​ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್​ ಅನ್ನು ಹೊಂದಿದೆ. ಇದು 48 ರಿಂದ 52ರವರೆಗೆ ಇರುತ್ತದೆ. ಅಲ್ಲದೆ ಬಹಳಷ್ಟು ಫೈಬರ್ ಅಂಶವನ್ನು ಹೊಂದಿದ್ದು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವವರಿಗೆ ಈ ಹಣ್ಣು ತುಂಬಾನೇ ಪ್ರಯೋಜನಕಾರಿ. ಬಿಳಿ ಮತ್ತು ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರೂಟ್​ಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ. ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರೂಟ್ಸ್​ ಬಿಳಿ ಹಣ್ಣುಗಳಿಗಿಂತ ಸಿಹಿಯಾಗಿರುತ್ತದೆ. ಏಕೆಂದರೆ, ಅವುಗಳು ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ. 100 ಗ್ರಾಂ ತೂಕದ ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರೂಟ್​ನಲ್ಲಿ 11.5 ಗ್ರಾಂ ಸಕ್ಕರೆಯನ್ನು ಹೊಂದಿದ್ದರೆ, ಬಿಳಿ ಬಣ್ಣದ ಡ್ರ್ಯಾಗನ್ ಫ್ರೂಟ್​ ಕೇವಲ 7.65 ಗ್ರಾಂಗಳನ್ನು ಹೊಂದಿರುತ್ತದೆ. ಆದ್ದರಿಂದ, ತೂಕ ನಷ್ಟ ಮಾಡಿಕೊಳ್ಳಲು ಇಚ್ಛಿಸುವವರು ಅಥವಾ ಮಧುಮೇಹ ಹೊಂದಿರುವ ಜನರಿಗೆ ಬಿಳಿ ಬಣ್ಣದ ಡ್ರ್ಯಾಗನ್ ಫ್ರೂಟ್​ ಆಯ್ಕೆ ಮಾಡಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ.

ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರೂಟ್‌ನಲ್ಲಿ ಆಂಥೋಸಯಾನಿನ್, ವಿಟಮಿನ್ ಸಿ ಮತ್ತು ಕ್ಯಾರೋಟಿನ್‌ನಂತಹ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇವುಗಳು ಮಾನವನ ದೇಹದಲ್ಲಿ ಸ್ವತಂತ್ರ ರಾಡಿಕಲ್​ಗಳನ್ನು ತಟಸ್ಥಗೊಳಿಸಲು ಮತ್ತು ಜೀವಕೋಶದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಡ್ರ್ಯಾಗನ್ ಫ್ರೂಟ್​ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮಧುಮೇಹ ಮತ್ತು ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ. ಬಿಳಿ ಡ್ರ್ಯಾಗನ್ ಪ್ರೂಟ್​ನಲ್ಲಿಯೂ ಉತ್ಕರ್ಷಣ ನಿರೋಧಕಗಳು ಇವೆ, ಆದರೆ ಗುಲಾಬಿ ಬಣ್ಣಕ್ಕೆ ಹೋಲಿಸಿದರೆ ಕಡಿಮೆ ಇರುತ್ತದೆ.

ಡ್ರ್ಯಾಗನ್​​ ಫ್ರೂಟ್​ಗಳನ್ನು ( Dragon fruit ) ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಆಗುವ ಲಾಭಗಳೇನು?

ಕೂದಲಿನ ಸಮಸ್ಯೆ

ಇಂದು ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಡ್ರ್ಯಾಗನ್​ ಫ್ರೂಟ್​ಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವುದರಿಂದ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಡ್ರ್ಯಾಗನ್ ಫ್ರೂಟ್ಸ್​​ ಅತ್ಯಧಿಕ ಆ್ಯಂಟಿಆಕ್ಸಿಡಂಟ್​ಗಳನ್ನು ಹೊಂದಿವೆ. ಹೀಗಾಗಿ ಮಳೆಗಾಲದಲ್ಲಿ ಪ್ರತಿದಿನ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಜ್ವರ ಮತ್ತು ಶೀತದಂತಹ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಇದು ದೇಹವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ

ಡ್ರ್ಯಾಗನ್ ಫ್ರೂಟ್‌ನಲ್ಲಿರುವ ಫೈಬರ್ ಪ್ರಮಾಣವು ಜೀರ್ಣಕಾರಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮಲಬದ್ಧತೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವವರು ಈ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು.

ಗರ್ಭಾವಸ್ಥೆಯಲ್ಲಿನ ಮಹಿಳೆಯರಿಗೆ ಉತ್ತಮ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ಇಂತಹ ಸಮಸ್ಯೆಗಳನ್ನು ತಪ್ಪಿಸಲು ನೀವು ಪ್ರತಿದಿನ ಡ್ರ್ಯಾಗನ್ ಫ್ರೂಟ್​ಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದ್ದು, ಆರೋಗ್ಯಕರ ಲಾಭವನ್ನು ಪಡೆಯಬಹುದು. ಇದಿಷ್ಟೇ ಅಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಡ್ರ್ಯಾಗನ್ ಫ್ರೂಟ್​ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದಲ್ಲದೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ನೀಡುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.