ಲೈಫ್‌ಸ್ಟೈಲ್

ಬಿಳಿ ಕಲೆಗಳಿಗೆ ಕಾರಣವೇನು? ಇದು ಯಾವ ರೋಗಗಳ ಮುನ್ಸೂಚನೆ? ಇಲ್ಲಿದೆ ಉಪಯುಕ್ತ ಮಾಹಿತಿ | White Spots

ಮೋಹನ್​ ಶೆಟ್ಟಿ

White Spots: ಚರ್ಮದ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಅನೇಕ ಜನರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯದ ಇಳಿಕೆ ಅಥವಾ ಕಳೆದುಕೊಳ್ಳುವಿಕೆಯಿಂದ ಇಂತಹ ಸಮಸ್ಯೆಗಳು ಆವರಿಸಿಕೊಳ್ಳುತ್ತವೆ. ಆದಾಗ್ಯೂ, ಬಿಳಿ ಪ್ಯಾಚ್​ಗಳು ಕಾಣಿಸಿಕೊಂಡಾಗ ಅನೇಕ ಜನರು ಭಯಭೀತಿಗೆ ಒಳಗಾಗುತ್ತಾರೆ. ಇದೇನಾದರೂ ಅಪಾಯಕಾರಿ ರೋಗಕ್ಕೆ ತಿರುಗುತ್ತದೆಯೇ? ಅಥವಾ ಅನಾರೋಗ್ಯದ ಸೂಚನೆಯೇ? ಎಂಬ ಅನುಮಾನಗಳು ಕಾಡತೊಡಗುತ್ತವೆ.

ಏನೆಲ್ಲ ಸಮಸ್ಯೆ ಇರಬಹುದು?

1. ವಿಟಿಲಿಗೋ: ಚರ್ಮದ ಮೇಲಿನ ಬಿಳಿ ಚುಕ್ಕೆಗಳು ಸ್ವಯಂ ನಿರೋಧಕ ಕಾಯಿಲೆ ಎನ್ನಲಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೆಲನೋಸೈಟ್‌ಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಇವು ಚರ್ಮದ ಮೇಲೆ ಬಿಳಿ ತೊನ್ನುಗಳನ್ನು ಉಂಟುಮಾಡುತ್ತವೆ. ಮುಖ, ಕೈಗಳು, ತುಟಿ, ಕಾಲುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ವೇಗವಾಗಿ ದೇಹವೆಲ್ಲ ಹರಡಬಹುದು.

2. ಪೌಷ್ಟಿಕಾಂಶದ ಕೊರತೆ

ವಿಟಮಿನ್ ಬಿ 12, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಫೋಲಿಕ್ ಆಮ್ಲದ ಕೊರತೆಯಿಂದ ಈ ಸಮಸ್ಯೆ ಉಂಟಾಗಬಹುದು. ಚರ್ಮವು ತನ್ನ ಬಣ್ಣವನ್ನು ಕಳೆದುಕೊಂಡು ಮಸುಕಾದ ಬಿಳಿ ಚುಕ್ಕೆಗಳಂತೆ ಕಾಣಿಸಿಕೊಳ್ಳಬಹುದು. ಇದು ದೊಡ್ಡ ಸಮಸ್ಯೆಯೇನಲ್ಲ. ನಿಮ್ಮ ಆಹಾರದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ಆರಂಭಿಕ ಹಂತದಲ್ಲೇ ನಿವಾರಿಸಿಕೊಳ್ಳಬಹುದು.

3. ಕುಷ್ಠರೋಗ

ಕುಷ್ಠರೋಗವು ಒಂದು ಸಾಂಕ್ರಾಮಿಕ ಕಾಯಿಲೆ. ಇದು ಚರ್ಮವು ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಬಿಳಿ ಚುಕ್ಕೆಗಳಿಗೆ ಕಾರಣವಾಗುತ್ತದೆ. ಕೈಯಿಂದ ಮುಟ್ಟಿದಾಗಲೂ ನೋವು ಅನಿಸುವುದಿಲ್ಲ. ಮೊದಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ, ಆರಂಭಿಕ ಹಂತದಲ್ಲೇ ಸಂಪೂರ್ಣವಾಗಿ ಗುಣಮುಖರಾಗಬಹುದು.

ನಿಯಂತ್ರಣಕ್ಕೆ ಮಾರ್ಗಗಳೇನು?

ಸೂಕ್ತ ಹಾಗೂ ಸರಿಯಾದ ಆಹಾರ: ವಿಟಮಿನ್ ಬಿ12, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಆದಷ್ಟು ಡೈರಿ ಉತ್ಪನ್ನಗಳು, ಹಸಿರು ತರಕಾರಿಗಳು, ಮೊಟ್ಟೆ, ಬಾದಾಮಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ: ಬಿಳಿ ಚುಕ್ಕೆಗಳು ಹರಡುತ್ತಲೇ ಇದ್ದರೆ, ಹೆಚ್ಚು ಚಿಂತಿಸದೆ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ. ಕೆಲವು ಸಂದರ್ಭಗಳಲ್ಲಿ, ಚರ್ಮದ ಬಯಾಪ್ಸಿ ಅಥವಾ ರಕ್ತ ಪರೀಕ್ಷೆಗಳು ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಏನು ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.