Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.
ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.
ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ತೂಕ ಇಳಿಕೆ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ಅದೇ ವರ್ಗಕ್ಕೆ ಸೇರಿದ್ದಾಳೆ. ಆಕೆಯ ತೂಕ ಇಳಿಸುವ ಪ್ರಯಾಣವನ್ನು ನೋಡಿದರೆ, ಖಂಡಿತವಾಗಿಯೂ ನೀವು ಮೂಕವಿಸ್ಮಿತರಾಗುತ್ತೀರಿ. ಅದು ಹೇಗೆ ಅಷ್ಟೊಂದು ತೂಕ ಇಳಿಸಿಕೊಂಡರು ಎಂದು ನೀವು ಆಶ್ಚರ್ಯ ಪಡುತ್ತೀರಿ. ಜಿಮ್‌ಗೆ ಹೋಗದೆ ಮತ್ತು ಹಸಿವಿನಿಂದ ಬಳಲದೆ ತುಂಬಾ ಸುಲಭವಾಗಿ 18 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. ಇಷ್ಟೊಂದು ತೂಕವನ್ನ ಹೇಗೆ ಇಳಿಸಿಕೊಂಡರು ಎಂಬುದನ್ನು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಯುವತಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.
ಆರ್ಯ ಅರೋರಾ ಹೆಸರಿನ ಯುವತಿ, ಜಿಮ್‌ಗೆ ಹೋಗದೆ ಅಥವಾ ಹಸಿವಿನಿಂದ ಬಳಲದೇ ಹದಿನೆಂಟು ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಈ ಯುವತಿ ಏಳು ಕೆಲಸಗಳನ್ನು ಮಾಡುವ ಮೂಲಕ ತೂಕ ಇಳಿಸಿಕೊಂಡಿದ್ದಾಳಂತೆ. ಮೊದಲು, ಆಕೆ ChatGPT ಸಹಾಯದಿಂದ ತನ್ನ ಮೂಲ ಚಯಾಪಚಯ ದರ (BMR-Basal Metabolic Rate) ಅನ್ನು ಕಂಡುಕೊಂಡಳು. ನಿಮ್ಮ ತೂಕ, ಎತ್ತರ, ವಯಸ್ಸು ಮತ್ತು ನೀವು ಪುರುಷ ಅಥವಾ ಮಹಿಳೆಯೇ ಎಂಬುದನ್ನು ಟೈಪ್ ಮಾಡಿದರೆ, ನಿಮ್ಮ BMR ಅನ್ನು ನೀವು ಕಂಡುಹಿಡಿಯಬಹುದು ಎಂದು ಆ ಯುವತಿ ವಿವರಿಸಿದ್ದಾಳೆ.
ಮುಂದೆ ನಾನು ಮಾಡಿದ ಕೆಲಸವೆಂದರೆ ನನ್ನ ಆಹಾರದ ಮೇಲೆ ಗಮನ ಹರಿಸುವುದು. ನಾನು ಹಸಿವಿನಿಂದ ಬಳಲುತ್ತಿರಲಿಲ್ಲ. ಬದಲಾಗಿ, ನಾನು ತಿನ್ನುವುದರಲ್ಲಿ 40% ಪ್ರೋಟೀನ್, 30% ಫೈಬರ್, 20% ಕಾರ್ಬೋಹೈಡ್ರೇಟ್‌ಗಳು ಮತ್ತು 10% ಕೊಬ್ಬು ಇರುವಂತೆ ನೋಡಿಕೊಂಡೆ. ಊಟ ಬಿಡುವ ಬದಲು, ನಾನು ಅದನ್ನು ಸಮತೋಲನಗೊಳಿಸಿದೆ ಎಂದಿದ್ದಾಳೆ.
ಮೂರನೇ ವಿಷಯವೆಂದರೆ ನಾನು ಚೆನ್ನಾಗಿ ವ್ಯಾಯಾಮ ಮಾಡಿದೆ. ನನ್ನ ವ್ಯಾಯಾಮದಲ್ಲಿ ಶಕ್ತಿ ತರಬೇತಿ, ಕಾರ್ಡಿಯೋ ಮತ್ತು ನಡಿಗೆಯನ್ನು ಸೇರಿಸಿಕೊಂಡೆ. ನಾನು ಮಾಡಿದ ಮುಂದಿನ ಕೆಲಸವೆಂದರೆ ಕ್ಯಾಲೊರಿಗಳ ಬಗ್ಗೆ ಅರಿವು ಮೂಡಿಸುವುದು. ಪ್ರತಿ ಊಟದೊಂದಿಗೆ ನಾನು ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಿದ್ದೇನೆಂದು ನಾನು ಅರಿತುಕೊಂಡೆ ಎಂದು ಹೇಳಿದ್ದಾಳೆ.
ಮುಂದಿನ ಕೆಲಸವೆಂದರೆ ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು. ಸಂಸ್ಕರಿಸಿದ ಆಹಾರದ ಜೊತೆಗೆ, ಸಂಸ್ಕರಿಸಿದ ಸಕ್ಕರೆ, ಎಣ್ಣೆ ಮತ್ತು ಹುರಿದ ಆಹಾರಗಳನ್ನು ತ್ಯಜಿಸಿದೆ. ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯುತ್ತಿದ್ದೇನೆ. ಅಲ್ಲದೆ, ಎಂಟು ಗಂಟೆಗಳ ನಿದ್ರೆಯನ್ನೂ ಮಾಡುತ್ತಿದ್ದೇನೆ. ತೂಕ ಇಳಿಸಲು ಮಾನಸಿಕ ಆರೋಗ್ಯವೂ ಒಂದು ಅಂಶವಾಗಿದೆ. ಆದ್ದರಿಂದ, ಧ್ಯಾನ ಮತ್ತು ಇತರ ವಿಧಾನಗಳ ಮೂಲಕ ತಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಂಡಿದ್ದೇನೆ ಎನ್ನುವ ಮೂಲಕ ಯುವತಿ ತನ್ನ ತೂಕ ಇಳಿಕೆ ರಹಸ್ಯವನ್ನು ಬಹಿರಂಗಪಡಿಸಿದ್ದಾಳೆ. (ಏಜೆನ್ಸೀಸ್)