ಲೈಫ್‌ಸ್ಟೈಲ್

ನೀವು ಶೌಚಾಲಯದಲ್ಲಿ ಫೋನ್​ ಬಳಸುತ್ತೀರಾ? ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರಬಹುದು, ಎಚ್ಚರ!

ನವದೆಹಲಿ: ಕರೊನ ಜನರು ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ಸ್ಯಾನಿಟೈಸರ್‌ಗಳನ್ನು ಬಳಸಿ ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತಾರೆ.

ಆದರೆ ನೈರ್ಮಲ್ಯದ ಅಭ್ಯಾಸಗಳನ್ನು ರೂಢಿಸಿದರೂ, ಇಡೀ ದಿನ ಲಕ್ಷಾಂತರ ಬ್ಯಾಕ್ಟಿರಿಯಾಗಳನ್ನು ಜನರು ತಮ್ಮೊಂದಿಗೆ ಸಾಗಿಸುತ್ತಿರುತ್ತಾರೆ. ಹೇಗಪ್ಪಾ ಎಂದು ನೀವು ಆಲೋಚಿಸಬಹುದು. ನೀವು, ಈ ಬ್ಯಾಕ್ಟಿರಿಯಾಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಒಯ್ಯುತ್ತಲೇ ಇರುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್ ನೀವು ಸಾಗಿಸುವ ಅತ್ಯಂತ ಕೊಳಕು ವಸ್ತುಗಳಲ್ಲಿ ಒಂದಾಗಿರಬಹುದು.

ಬಹಳಷ್ಟು ಜನ ಶೌಚಾಲಯದಲ್ಲಿ ಫೋನ್​ ಬಳಸುವವರೇ!

NordVPN ನ ಅಧ್ಯಯನದ ಪ್ರಕಾರ, 10ರಲ್ಲಿ ಆರು ಜನರು, ವಿಶೇಷವಾಗಿ ಯುವ ಜನರು ನಿತ್ಯಕರ್ಮ ಮಾಡುವಾಗ ತಮ್ಮ ಫೋನ್‌ಗಳನ್ನು ವಾಶ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ, ಶೇಕಡಾ 61.6 ರಷ್ಟು ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಟಾಯ್ಲೆಟ್ ಸೀಟ್‌ನಲ್ಲಿ ಕುಳಿತು ಪರಿಶೀಲಿಸುವುದನ್ನು ಒಪ್ಪಿಕೊಂಡಿದ್ದಾರೆ. ಟಾಯ್ಲೆಟ್​ ಮೇಲೆ ಫೋನ್​ ಬಳಸುವವರಲ್ಲಿ, ಮೂರನೆಯ ಒಂದರಷ್ಟು ಜನ (33.9%) ಪ್ರಸ್ತುತ ವ್ಯವಹಾರಗಳೊಂದಿಗೆ ಸಂಪರ್ಕದಲ್ಲಿರಲು ಫೋನ್​ ಬಳಸುತ್ತಾರೆ. ಇನ್ನು ಕಾಲು ಭಾಗದಷ್ಟು (24.5%) ತಮ್ಮ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸುವ ಮೂಲಕ ಅಥವಾ ಕರೆ ಮಾಡುವ ಮೂಲಕ ಟಾಯ್ಲೆಟ್​ನ ಸಮಯವನ್ನು ಬಳಸುತ್ತಾರೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್ ವ್ಯಸನವನ್ನು ಕೆಟ್ಟ ಅಭ್ಯಾಸವಾಗಿ ನೋಡಬಹುದಾದರೂ, ಈ ಅಭ್ಯಾಸವು ಸ್ಮಾರ್ಟ್‌ಫೋನ್‌ಗಳನ್ನು ಮಾರಣಾಂತಿಕ ಬ್ಯಾಕ್ಟಿರಿಯಾ ಮತ್ತು ರೋಗಕಾರಕಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿ ಪರಿವರ್ತಿಸುತ್ತದೆ. ಜನರು ಟಾಯ್ಲೆಟ್ ಸೀಟ್‌ಗಳಲ್ಲಿ ಫೋನ್​ ಒಳಗೆ ಮುಳುಗಿರುವ ಸಮಯದಲ್ಲಿ, ಬ್ಯಾಕ್ಟಿರಿಯಾ ಮತ್ತು ಸೂಕ್ಷ್ಮಜೀವಿಗಳು ಅವರ ಕೈಗಳ ಮೂಲಕ ಸ್ಮಾರ್ಟ್‌ಫೋನ್‌ನ ಮೇಲ್ಮಗೆ ತಲುಪುತ್ತವೆ. ಅದಲ್ಲದೇ, ದಿನವಿಡೀ ನಿರಂತರವಾಗಿ ಸ್ಮಾರ್ಟ್‌ಫೋನ್ ಬಳಸುವುದರಿಂದ ಈ ಬ್ಯಾಕ್ಟಿರಿಯಾಗಳು ನಮ್ಮ ಬಾಯಿ, ಕಣ್ಣು ಮತ್ತು ಮೂಗಿನ ಮೂಲಕ ನಮ್ಮ ದೇಹದ ಒಳಕ್ಕೆ ಸೇರಬಹುದು.

ಫೋನು, ಡಿಜಿಟಲ್ ಯುಗದ ಸೊಳ್ಳೆ!

ವರದಿಯು ಸೂಚಿಸುವಂತೆ, ಸೂಕ್ಷ್ಮಾಣುಗಳು 28 ದಿನಗಳವರೆಗೆ ಮೊಬೈಲ್ ಫೋನ್ ಪರದೆಗಳಲ್ಲಿ ವಾಸಿಸುತ್ತವೆ. ವರದಿಯೊಂದರಲ್ಲಿ, ಸೋಂಕು ನಿಯಂತ್ರಣ ತಜ್ಞ ಡಾ ನ್ಯೂ ಹೇಡನ್ ತಿಳಿಸಿದ್ದಾರೆ. "ಸ್ಮಾರ್ಟ್‌ಫೋನ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸಾಗಿಸಬಲ್ಲವು ಎಂಬುದು ಸ್ಥಾಪಿತ ಸತ್ಯ. ನೈರ್ಮಲ್ಯದ ದೃಷ್ಟಿಕೋನದಿಂದ, ಟಚ್‌ಸ್ಟೀನ್‌ಗಳನ್ನು 'ಡಿಜಿಟಲ್ ಯುಗದ ಸೊಳ್ಳೆ' ಎಂದು ಸಾಂಕ್ರಾಮಿಕ ರೋಗದ ವಾಹಕಗಳಾಗಿ ವಿವರಿಸಲಾಗಿದೆ" ಎಂದಿದ್ದಾರೆ.

ಮಲಕ್ಕೆ ಸಂಬಂಧಪಟ್ಟಿರುವ ಬ್ಯಾಕ್ಟೀರಿಯಾ ಶರೀರವನ್ನು ಸೇರುವ ಬದಲು ಹೊರಗೆ ಬಂದು ಫೋನ್​ ಬಳಸುವುದೇ ಉತ್ತಮ. ಅದಕ್ಕೇ ಹೇಳಿದ್ದು ಶೌಚಾಲಯದಲ್ಲಿ ಫೋನ್​ ಬಳಸಿದರೆ ಆಸ್ಪತ್ರೆ ತಲುಪಬೇಕಾಗಬಹುದು ಎಂದು! (ಏಜೆನ್ಸೀಸ್)