ಲೈಫ್‌ಸ್ಟೈಲ್

ಭಗವಂತನನ್ನು ಎಬ್ಬಿಸಲೊಂದು ಹಬ್ಬ

ಮೈಥಿಲೀ ರಾಘವನ್
ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯೇ ಉತ್ಥಾನದ್ವಾದಶಿ. ಉತ್ಥಾನ ಎಂದರೆ ಎಬ್ಬಿಸುವುದು, ಎಚ್ಚರಗೊಳಿಸುವುದು. ಶಯನದ್ವಾದಶಿಯಿಂದ 4 ತಿಂಗಳ ಕಾಲ ಯೋಗನಿದ್ರೆಯಲ್ಲಿ ಪವಡಿಸಿರುವ ಕ್ಷೀರಾಬ್ಧಿನಾಥನನ್ನು ಎಚ್ಚರಗೊಳಿಸುವ ದಿನ, ಕ್ಷೀರಾಬ್ಧಿನಾಥವ್ರತ/ಪೂಜೆ. ಶ್ರೀಮನ್ನಾರಾಯಣನು ತನ್ನ ನಿದ್ರಾ-ಮುದ್ರೆಯನ್ನು ಬಿಟ್ಟು ಎಚ್ಚರ-ಮುದ್ರೆಯನ್ನು ಭಕ್ತರಿಗೆ ತೋರುವ ದಿನವಾದ್ದರಿಂದ ಉತ್ಥಾನದ್ವಾದಶಿ ಎನಿಸಿಕೊಳ್ಳುತ್ತದೆ. ಭಗವಂತನು ನಾಲ್ಕು ತಿಂಗಳುಗಳು ನಿದ್ರಿಸುವುದಾದರೆ ಜಗದ್ವಾ್ಯಪಾರ ನಡೆಯುವುದು ಹೇಗೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಭಗವಂತನ ನಿದ್ರೆಯು ಪ್ರಾಕೃತರ ನಿದ್ರೆಯಂತೆ ಜಾಡ್ಯನಿದ್ರೆಯಲ್ಲ, ಅದು ಯೋಗನಿದ್ರೆ. ತನ್ನ ಯೋಗನಿದ್ರೆಯ ಕಾಲದಲ್ಲಿ ಜಗದ್ವಾ್ಯಪಾರ ಕಾರ್ಯವನ್ನು ಪ್ರಕೃತಿಮಾತೆಗೆ ವಹಿಸುತ್ತಾನೆ. ಆತನು ಸದಾ ಯೋಗದಲ್ಲೇ ಇರುವವನಾದರೂ ಈ ನಾಲ್ಕು ತಿಂಗಳ ಕಾಲ ಯೋಗನಿದ್ರಾಮುದ್ರೆಯನ್ನು ಅನುಗ್ರಹಿಸು ತ್ತಾನೆ. ಆತನ ನಿದ್ರಾಮುದ್ರೆಯನ್ನು ನೋಡಲು ಅಪೇಕ್ಷಿಸುವ ಭಕ್ತರಿಗಾಗಿ ಈ ಭಂಗಿಯಲ್ಲಿ ಕಂಗೊಳಿಸುತ್ತಿದ್ದು ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಅರಳಿದ ಅರಳು ಕಂಗಳಿಂದ ಭಕ್ತರನ್ನು ಅನುಗ್ರಹಿಸುತ್ತಾನೆ.

ಕಾಲದ ಔಚಿತ್ಯ: ಚಾತುರ್ವಸ್ಯದ ನಾಲ್ಕು ತಿಂಗಳುಗಳು ಎಡೆಬಿಡದೆ ಮಳೆಯನ್ನು ಸುರಿಸುವ ಕಾಲ. ಹಂಸಗಳು ನಿರಂತರ ವರ್ಷವನ್ನು ತಡೆಯಲಾರದೆ ಮಾನಸ ಸರೋವರವನ್ನು ಸೇರುತ್ತವೆ ಎನ್ನುತ್ತಾರೆ. ಅಂತೆಯೇ ಪರಮಹಂಸರೂ ತಮ್ಮ ಹೃದಯಮಾನಸ ಸರೋವರವನ್ನು ಸೇರಿ ನಿದ್ರಾಮುದ್ರಾಭಿರಾಮನಾದ ಭಗವಂತನಲ್ಲಿ ರಮಿಸುತ್ತಾರೆ. ಪಾಮರರಿಗೂ ಮಳೆಯ ಕಾರಣದಿಂದಾಗಿ ಹೊರವ್ಯಾಪಾರಗಳನ್ನು ಕಡಿಮೆ ಮಾಡಿ ಭಗವಂತನಲ್ಲಿ ವಿಶ್ರಾಂತಿಯನ್ನು ಪಡೆಯಲು ಪುಷ್ಟಿ ನೀಡುವ ಕಾಲ ಇದಾಗಿದೆ. ದ್ವಾದಶಿಯಂದು ಭಗವಂತನಿಗೆ ಸುಪ್ರಭಾತವನ್ನು ಹಾಡಿ ನಿದ್ರಾಮುದ್ರೆಯಿಂದ ಎಚ್ಚರಗೊಳಿಸಿ, ವಿಶೇಷ ಪೂಜೆಗಳರ್ನ°ಸಿ, ಅನುಗ್ರಹಿತ ರಾಗಿ ಮುಂದಿನ ವ್ಯಾಪಾರಗಳನ್ನು ಆತನ ಸ್ಮರಣೆಯಲ್ಲಿ ಮಾಡಲು ಉದ್ಯುಕ್ತರಾಗ ಬೇಕೆನ್ನುವುದು ಇಲ್ಲಿಯ ಆಶಯ.

ಧಾತ್ರಿಯ ವೈಶಿಷ್ಟ್ಯ: ‘ಧಾತ್ರೀ’-ಧರಿಸಿ, ಪೋಷಿಸುವವಳು. ಶ್ರೀಫಲಾ, ಆಮಲಕೀ, ಅಮೃತಾ, ರೋಚಿನಿ ಇತ್ಯಾದಿ ಇತರ ಹೆಸರುಗಳು ಅಮೃತತ್ತ ್ವ, ರುಚಿಕರ, ವೀರ್ಯವೃದ್ಧಿ ಮುಂತಾದ ಇದರ ಗುಣಾತಿಶಯಗಳನ್ನು ತಿಳಿಸುತ್ತವೆ. ‘ಧಾತ್ರಿಯು ತಾಯಿಯಂತೆ ಮನುಷ್ಯರಲ್ಲಿ ವಾತ್ಸಲ್ಯವನ್ನು ತೋರುತ್ತಾಳೆ. ಇದು ದಾರಿದ್ರ್ಯವನ್ನು ನಾಶಪಡಿಸಿ ಮೋಕ್ಷವನ್ನೇ ಕೊಡುತ್ತದೆ. ತುಲಸೀ-ಬಿಲ್ವಗಳಲ್ಲಿನ ಶ್ರೇಷ್ಠಗುಣಗಳೆಲ್ಲವೂ ಧಾತ್ರಿಯಲ್ಲಿಯೂ ಉಂಟು’ ಎಂಬುದಾಗಿ ಶಾಸ್ತ್ರಗಳು ಕೊಂಡಾಡುತ್ತವೆ. ಧಾತ್ರಿಯ ಅಧಿಷ್ಟಾತೃದೇವತೆಯು ಲಕ್ಷ್ಮೀ-ಪಾರ್ವತಿಯರ ವಿಭೂತಿಯಾಗಿ, ಜಗನ್ಮಾತೆಯ ಅಂಶಭೂತಳಾಗಿ, ಆನಂದಪ್ರದಳಾಗಿದ್ದಾಳೆ ಎಂಬ ಸತ್ಯಾರ್ಥವನ್ನು ಪುರಾಣಗಳು ಕಥಾರೂಪದಲ್ಲಿ ಹೀಗೆ ವರ್ಣಿಸುತ್ತವೆ- ಒಮ್ಮೆ ಲಕ್ಷ್ಮೀ-ಪಾರ್ವತಿಯರು ತಮ್ಮಿಂದಲೇ ಸೃಷ್ಟಿಯಾದ ಪದಾರ್ಥಗಳಿಂದ ಶಿವನನ್ನೂ, ವಿಷ್ಣುವನ್ನೂ ಪೂಜಿಸಲು ಇಚ್ಛಿಸಿದಾಗ ಅವರಿಬ್ಬರ ಕಂಗಳ ಆನಂದ ಭಾಷ್ಪವು ಭೂಮಿಯಲ್ಲಿಳಿದು ಅದರಿಂದ ನೆಲ್ಲಿಗಿಡವು ಹುಟ್ಟಿತು. ಶುದ್ದವಾದ (ಅಮಲವಾದ) ಜಲ(ಕ)ದಿಂದ ಹುಟ್ಟಿದ್ದರಿಂದ ‘ಆಮಲಕವೆಂದೂ, ಆಗ ದೇವತೆಗಳ ಜಯಕಾರದಿಂದಾದ ಆನಂದವನ್ನು ಧರಿಸಿದ್ದರಿಂದ ‘ಧಾತ್ರೀ’ಯೆಂದೂ ಹೆಸರಾಯಿತು.

ಇಂದು ತುಳಸಿ ವಿವಾಹ

ಉತ್ಥಾನದ್ವಾದಶಿಗೆ ಭಗವಂತನಿಗೆ ಷೋಡಶೋಪಚಾರಗಳೊಂದಿಗೆ ವಿಶೇಷ ಪೂಜೆಯನ್ನು ಅರ್ಪಿಸುವುದರ ಜತೆಗೆ ತುಳಸಿ ವಿವಾಹವನ್ನೂ ಆಚರಿಸುವ ರೂಢಿಯಿದೆ. ತುಳಸಿ- ಧಾತ್ರಿಯರ (ನೆಲ್ಲಿಯ) ಪೂಜೆ, ತುಳಸಿ ವಿವಾಹ ಮುಂತಾದುದನ್ನು ಸಂಧ್ಯಾಕಾಲದಲ್ಲಿ ಮಾಡುವ ರೂಢಿಯಿದೆ. ಅಂದು ಹೊಸ ನೆಲ್ಲಿಯ ಕಾಯಿಯಿಂದ ಕೂಡಿದ ನೆಲ್ಲಿಯ ಕೊಂಬೆಯನ್ನು ತುಳಸಿ ಗಿಡದೊಡನೆ ಸೇರಿಸಿ ಮಧ್ಯದಲ್ಲಿ ಕೃಷ್ಣನನ್ನಿಟ್ಟು ಪೂಜಿಸುವುದು ರೂಢಿಯಲ್ಲಿದೆ. ನೆಲ್ಲಿಯ ಕಾಯನ್ನು ಬಟ್ಟಲಿನಂತೆ ಮಾಡಿ ಅದರಲ್ಲಿ ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯನ್ನು ತುಂಬಿ ದೀಪವನ್ನು ಬೆಳಗಿಸುವ ಪದ್ಧತಿಯೂ ಉಂಟು.

(ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)