ಲೈಫ್‌ಸ್ಟೈಲ್

ಕುಡಿತದ ಚಟಕ್ಕೆ ಶಾಶ್ವತವಾಗಿ ಗುಡ್​ಬೈ ಹೇಳ್ಬೇಕಾ? ಹಾಗಿದ್ರೆ, ಈ ಸಲಹೆ ಪಾಲಿಸಿ, ಮತ್ತೆ ಅತ್ತ ಸುಳಿಯಲ್ಲ! | Alcohol Addiction

Alcohol Addiction: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ! ಕುಡಿತದ ಚಟಕ್ಕೆ ದಾಸನಾದರೆ ಇಡೀ ಮನೆಯ ಸರ್ವನಾಶ, ಸಂಸಾರ ಬೀದಿಪಾಲು ಎಂಬ ಸಾರ್ವಕಾಲಿಕ ಮಾತುಗಳು ಇಂದಿಗೂ ನಮ್ಮಲ್ಲಿ ಆಗಾಗ್ಗೆ ಕೇಳಿಬರುತ್ತಿರುತ್ತವೆ. ಅದು ಸಮಯಕ್ಕೆ ಸಂದರ್ಭಕ್ಕೆ ಅನುಗುಣವಾಗಿ ಎಂಬುದು ಗಮನಾರ್ಹ. ಮದ್ಯಪಾನ ಮಾಡುವುದರಿಂದ ಒಂದೆರೆಡಲ್ಲ, ಹಲವಾರು ಭಯಾನಕ ಕಾಯಿಲೆಗಳು ಆವರಿಸಿಕೊಳ್ಳುತ್ತವೆ ಮತ್ತು ಜೀವವನ್ನೇ ಬಲಿ ಪಡೆಯುತ್ತವೆ ಎಂಬುದು ಗೊತ್ತಿದ್ದರೂ ಕುಡಿಯುವವರ ಸಂಖ್ಯೆಗೇನು ಬರವಿಲ್ಲ. ಅಷ್ಟಕ್ಕೂ ಈ ಕುಡಿತದ ಚಟಕ್ಕೆ ನೀವು ದಾಸರಾಗಿದ್ದರೆ, ಅದರಿಂದ ಹೊರಬರಲು ಮನಸ್ಸು ಮಾಡಿದ್ದರೆ ಅಥವಾ ಪ್ರಯತ್ನದಲ್ಲಿದ್ದರೆ ಈ ಸುದ್ದಿ ನಿಮಗಾಗಿ.

ಮದ್ಯಪಾನದಿಂದ ದೇಹದ ಯಕೃತ್ತು, ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಹಾಗೂ ವ್ಯಕ್ತಿರಿಕ್ತ ಪರಿಣಾಮ ಬೀರುತ್ತದೆ. ಆದಾಗ್ಯೂ, ಅನೇಕ ಜನರು ಮಾದಕತೆಗಾಗಿ ಇದಕ್ಕೆ ವ್ಯಸನಿಯಾಗುತ್ತಾರೆ. ಇದನ್ನು ಸರಿಯಾಗಿ ಅರಿತ ಕೆಲವೇ ಕೆಲವರು ಮಾತ್ರ ತಮ್ಮವರಿಗಾಗಿ ಈ ದುರಾಭ್ಯಾಸವನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರಿಂದ ಸಾಧ್ಯವಾಗಿರುವ ಇದು, ಹಲವರಿಂದ ಸಾಧ್ಯವಾಗ್ತಿಲ್ಲ ಏಕೆ? ಅದಕ್ಕೆ ಬೇಕಿರುವುದು ದೃಢ ಮನಸ್ಸು. ಒಮ್ಮೆ ಕುಡಿತ ರೂಢಿಯಾದರೆ, ಅದನ್ನು ನಿಲ್ಲಿಸುವುದು ಅಷ್ಟು ಸುಲಭವಲ್ಲ. ಆದರೆ, ನೀವು ಸರಿಯಾದ ರೀತಿಯಲ್ಲಿ ಪ್ರಯತ್ನಿಸಿದರೆ, ಅದು ಖಂಡಿತ ಸಾಧ್ಯ. ಮದ್ಯಪಾನ ಬಿಡಲು ನಾವು ತಿಳಿಸಿರುವ 5 ಬಹುಮುಖ್ಯ ಸಲಹೆಗಳು ಹೀಗಿವೆ ಗಮನಿಸಿ.

1. ಕುಡಿಯುವ ಕಾರಣಗಳನ್ನು ಗುರುತಿಸಿ

ಮೊದಲು, ನೀವು ಕುಡಿಯಲು ಬಯಸುವ ಸಂದರ್ಭಗಳನ್ನು ಗುರುತಿಸಬೇಕು. ಅದು ನೀವು ಒತ್ತಡದಲ್ಲಿರುವಾಗ, ಒಂಟಿಯಾಗಿರುವಾಗ ಅಥವಾ ಸ್ನೇಹಿತರ ಜತೆ ಪಾರ್ಟಿ ಮಾಡಲು ಕುಡಿಯುತ್ತಿದ್ದೀರಾ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕು. ಏಕೆಂದರೆ, ಇದನ್ನು ಗುರುತಿಸಲು ಮತ್ತು ಅವುಗಳನ್ನು ತಪ್ಪಿಸಲು ಸಾಧ್ಯವಾದರೆ, ಈ ಅಭ್ಯಾಸವನ್ನು ಕಂಟ್ರೋಲ್​ಗೆ ತರುವುದು ಇನ್ನಷ್ಟು ಸುಲಭ.

2. ಪರ್ಯಾಯ ಅಭ್ಯಾಸಗಳು

ನೀವು ಮದ್ಯಪಾನ ಮಾಡಬೇಕೆಂದು ಬಯಸಿದರೆ, ಅದನ್ನು ಬದಲಾಯಿಸಬಹುದಾದ ಒಂದಷ್ಟು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ, ನೈಸರ್ಗಿಕ ತಂಪು ಪಾನೀಯಗಳನ್ನು (ಎಳನೀರು, ನಿಂಬೆ ರಸ, ಫ್ರೂಟ್​ ಜ್ಯೂಸ್​) ಕುಡಿಯಬೇಕು, ಪುಸ್ತಕಗಳನ್ನು ಓದಬೇಕು, ಸಂಗೀತವನ್ನು ಕೇಳಬೇಕು ಮತ್ತು ಕಲೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಕುಡಿತದಿಂದ ನಿಧಾನವಾಗಿ ಹೊರಬರಲು ಸಾಧ್ಯವಾಗುತ್ತದೆ.

3. ಮದ್ಯಪಾನ ಮಾಡುವ ವಾತಾವರಣದಿಂದ ಹೊರಬನ್ನಿ

ಮನೆಯಲ್ಲಿ ಮದ್ಯಪಾನ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕುಡಿಯುವ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯದಂತೆ ನೋಡಿಕೊಳ್ಳಿ. ಸಂದರ್ಭಗಳು ಬದಲಾಗದೆ ಹೋದರೆ, ಅಭ್ಯಾಸಗಳು ಬದಲಾಗುವುದಿಲ್ಲ. ವಾತಾವರಣ ನಿಮ್ಮ ಮೊದಲ ಬದಲಾವಣೆ ಎಂದು ಗುರುತಿಸಿ.

4. ಸಣ್ಣ ಗುರಿಗಳು, ಸ್ಥಿರ ಪ್ರಗತಿ

ಒಮ್ಮೆಲೇ ಕುಡಿಯುವುದನ್ನು ಬಿಡಲು ಪ್ರಯತ್ನಿಸಬೇಡಿ. ಸ್ಥಿರ ಗುರಿಗಳನ್ನು ಇಟ್ಟುಕೊಳ್ಳಿ. ನಿಧಾನವಾಗಿ ಪ್ರಾರಂಭಿಸಿ. ಮೊದಲು, ನೀವು ದಿನಕ್ಕೆ ಕುಡಿಯುವ ಪ್ರಮಾಣವನ್ನು ಕಡಿತಗೊಳಿಸಿ. ಈ ದಿನ ಇಷ್ಟು ಪ್ರಮಾಣ ಕಡಿಮೆ ಮಾಡುವೆ. ಮರುದಿನ ಇನ್ನಷ್ಟೂ ಕಮ್ಮಿ ಎನ್ನುತ ಬಂದರೆ, ಮುಂದಿನ ದಿನಗಳಲ್ಲಿ ಅದರಿಂದ ಸಂಪೂರ್ಣವಾಗಿ ಹೊರಬರಬಹುದು.

5. ಮಾನಸಿಕ ಮತ್ತು ವೈದ್ಯಕೀಯ ಬಲ

ಮದ್ಯಪಾನವನ್ನು ತ್ಯಜಿಸುವುದು ವೈಯಕ್ತಿಕ ಪ್ರಯಾಣ ನಿಜ. ಆದಾಗ್ಯೂ, ಮತ್ತೊಬ್ಬರ ಸಲಹೆ, ಸಹಾಯ ಪಡೆಯುವುದು ಒಳ್ಳೆಯದೇ. ಇದರಲ್ಲಿ ನಾಚಿಕೆಪಡುವ ವಿಚಾರವೇನಿಲ್ಲ. ಮುಕ್ತ ಸಮಾಲೋಚನೆ ಅಥವಾ ವೈದ್ಯಕೀಯ ಸಲಹೆಗಳು, ಚಿಕಿತ್ಸೆ ಪಡೆಯುವ ಮೂಲಕ ಭಾವನಾತ್ಮಕ ಬೆಂಬಲವನ್ನು ಕಾಣಬಹುದು.

ಮದ್ಯಪಾನ ತ್ಯಜಿಸಿದ ಬಳಿಕ ಆರೋಗ್ಯ ಪ್ರಯೋಜನಗಳೇನು?

1. ಯಕೃತ್ತಿನ ಆರೋಗ್ಯ

2. ಮಿದುಳಿನ ಶಕ್ತಿ ಸ್ಥಿರ

3. ನಿದ್ರೆ ಮತ್ತು ಮನಸ್ಥಿತಿ ಸುಧಾರಣೆ

4. ಆರ್ಥಿಕ ಬಲ

5. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಬಲ

6. ದೈಹಿಕ ಶಕ್ತಿ ಸುಧಾರಣೆ

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.