ಲೈಫ್‌ಸ್ಟೈಲ್

ಮೊಡವೆಗಳಿಂದ ಮುಕ್ತರಾಗಿ ಆರೋಗ್ಯಕರ ತ್ವಚೆ ಪಡೆಯಲು ಇಲ್ಲಿದೆ ಒಳ್ಳೆಯ ಉಪಾಯ

ಬೆಂಗಳೂರು: ಹದಿ ಹರೆಯದಲ್ಲಿ ಎಲ್ಲರಿಗೂ ಮೊಡವೆಯ ಸಮಸ್ಯೆ ಕಾಡುತ್ತದೆ. ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಆ ಪೈಕಿ ಜೀವನಶೈಲಿಯಲ್ಲಿ ಆದ ಬದಲಾವಣೆ, ಊಟದಲ್ಲಿ ವ್ಯತ್ಯಾಸ, ಮಾಲಿನ್ಯ ಮುಂತಾದವು ಪ್ರಮುಖ ಕಾರಣಗಳು. ಚರ್ಮ ಸಂಬಂಧಿತ ತೊಂದರೆಗಳಿಗೆ ಮಾರುಕಟ್ಟೆಯಲ್ಲಿ ಹತ್ತು ಹಲವಾರು ರೀತಿಯ ದುಬಾರಿ ಉತ್ಪನ್ನಗಳು ದೊರೆಯುತ್ತವೆ. ಆ ಉತ್ಪನ್ನಗಳಲ್ಲಿ ಅತಿಯಾದ ರಾಸಾಯನಿಕ ಪದಾರ್ಥಗಳಿರುವ ಕಾರಣ ಅದರಿಂದ ಚರ್ಮದ ತೊಂದರೆ ಉಲ್ಬಣಗೊಳ್ಳುತ್ತದೆ.

ಅಂತಹ ಉತ್ಪನ್ನಗಳನ್ನು ಪಕ್ಕಕ್ಕೆ ಸರಿಸಿ ಪ್ರತಿನಿತ್ಯ ಒಳ್ಳೆಯ ಆಹಾರ ಸೇವಿಸುವುದರಿಂದ ಮೊಡವೆಗಳು ದೂರಾಗುತ್ತವೆ. ಪೌಷ್ಟಿಕ ಆಹಾರ ನಮ್ಮನ್ನು ಆರೋಗ್ಯವಾಗಿ ಇರಿಸುವುದರ ಜತೆಗೆ ಚರ್ಮವನ್ನು ಕೂಡ ಆರೋಗ್ಯವಾಗಿ ಇರಿಸುತ್ತದೆ. ಮೊಡವೆಗಳನ್ನು ದೂರಗೊಳಿಸುವ ಆಹಾರ ಪದಾರ್ಥಗಳ ಪಟ್ಟಿ ಕೆಳಗಿದೆ.

ವಿಟಮಿನ್-ಸಿ ಇರುವ ಆಹಾರ

ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್-ಸಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್-ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು. ಇದಕ್ಕಾಗಿ ಕಿತ್ತಳೆ, ಆಮ್ಲಾ ಇತ್ಯಾದಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು.

ಫೈಬರ್ ಸಮೃದ್ಧವಾಗಿರುವ ಆಹಾರ

ಜೀರ್ಣ ಶಕ್ತಿ ದುರ್ಬಲವಾಗಿದ್ದಾಗ ಮೊಡವೆಗಳ ಸಮಸ್ಯೆ ಬರಬಹುದು. ಪಚನಕ್ರಿಯೆಯ ಸಮಸ್ಯೆಯನ್ನು ನಿವಾರಿಸಲು ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅದರೊಂದಿಗೆ ತ್ವಚೆಯ ಹೊಳಪು ಸಹ ಹೆಚ್ಚಾಗುತ್ತದೆ.

ವಿಟಮಿನ್-ಎ ಸಮೃದ್ಧವಾಗಿರುವ ಆಹಾರ

ತಜ್ಞರ ಪ್ರಕಾರ ವಿಟಮಿನ್-ಎ ಚರ್ಮವನ್ನು ಆರೋಗ್ಯವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ. ನಿಯಮಿತವಾಗಿ ಆಹಾರದಲ್ಲಿ ಕ್ಯಾರೆಟ್, ಪಪ್ಪಾಯಿ, ಪಾಲಕ್ ಮತ್ತು ಹಸಿರು ತರಕಾರಿ ಸೇವಿಸಬೇಕು.

ಡೇರಿ ಉತ್ಪನ್ನಗಳು

ಡೇರಿ ಉತ್ಪನ್ನಗಳು, ಅಂದರೆ, ಹಾಲು, ಮೊಸರು, ಚೀಸ್ ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ತುಂಬ ಪ್ರಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.(ಏಜೆನ್ಸೀಸ್​)