ಪಲ್ಟಿ ಹೊಡೆಯುವ ಹಾವುಗಳು WEB
ಲೈಫ್‌ಸ್ಟೈಲ್

ಕಾಲುಗಳೇ ಇಲ್ಲ ಆದರೂ ಗಂಟೆಗೆ 13 ಕಿ.ಮೀ ವೇಗದಲ್ಲಿ ಪಲ್ಟಿ ಹೊಡೆಯುವ ಹಾವುಗಳು: ವಿಜ್ಞಾನಿಗಳೇ ಬೆರಗು! Tinny Snakes

ಸಾಮಾನ್ಯವಾಗಿ ಹಾವುಗಳು ನೆಲದ ಮೇಲೆ ಹರಿದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಕೆಲವು ಪುಟ್ಟ ಹಾವುಗಳು ಅಪಾಯ ಎದುರಾದಾಗ ಹರಿಯುವುದನ್ನೇ ಬಿಟ್ಟು ಪಲ್ಟಿ ಹೊಡೆಯುತ್ತಾ ಓಡುತ್ತವೆ ಎಂದರೆ ನಂಬುತ್ತೀರಾ? ಅದೂ ಗಂಟೆಗೆ ಬರೋಬ್ಬರಿ 13 ಕಿಲೋಮೀಟರ್ ವೇಗದಲ್ಲಿ ಆಗ್ನೇಯ ಏಷ್ಯಾದಲ್ಲಿ ಕಂಡುಬಂದಿರುವ ಈ ಪುಟ್ಟ ಹಾವುಗಳ ವಿಚಿತ್ರ ಚಲನೆ ಇದೀಗ ವಿಜ್ಞಾನಿಗಳ ಗಮನ ಸೆಳೆದಿದೆ.Tinny Snakes

tinny snakes : ಸಾಮಾನ್ಯವಾಗಿ ಹಾವುಗಳು ನೆಲದ ಮೇಲೆ ಹರಿದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಕೆಲವು ಪುಟ್ಟ ಹಾವುಗಳು ಅಪಾಯ ಎದುರಾದಾಗ ಹರಿಯುವುದನ್ನೇ ಬಿಟ್ಟು ಪಲ್ಟಿ ಹೊಡೆಯುತ್ತಾ ಓಡುತ್ತವೆ ಎಂದರೆ ನಂಬುತ್ತೀರಾ? ಅದೂ ಗಂಟೆಗೆ ಬರೋಬ್ಬರಿ 13 ಕಿಲೋಮೀಟರ್ ವೇಗದಲ್ಲಿ ಆಗ್ನೇಯ ಏಷ್ಯಾದಲ್ಲಿ ಕಂಡುಬಂದಿರುವ ಈ ಪುಟ್ಟ ಹಾವುಗಳ ವಿಚಿತ್ರ ಚಲನೆ ಇದೀಗ ವಿಜ್ಞಾನಿಗಳ ಗಮನ ಸೆಳೆದಿದೆ.

ಹಾವಿನ ಪಲ್ಟಿ ಹೊಡೆಯುವ ತಂತ್ರ ಹೇಗಿರುತ್ತದೆ?

ಈ ಹಾವುಗಳು ಅಪಾಯವನ್ನು ಗ್ರಹಿಸಿದ ತಕ್ಷಣ ತಮ್ಮ ದೇಹವನ್ನು ಇಂಗ್ಲಿಷ್‌ನ C ಅಕ್ಷರದ ಆಕಾರದಲ್ಲಿ ಬಾಗಿಸುತ್ತವೆ. ಬಳಿಕ ತಲೆಯನ್ನು ಮೇಲಕ್ಕೆತ್ತಿ ತಾವು ಚಲಿಸಬೇಕಾದ ದಿಕ್ಕಿನತ್ತ ತಿರುಗಿಸುತ್ತವೆ. ನಂತರ ಬಾಲವನ್ನು ಹಿಂದಕ್ಕೆ ಬಲವಾಗಿ ಬೀಸಿ ದೇಹದ ಒಂದು ಭಾಗವನ್ನು ನೆಲದಿಂದ ಮೇಲಕ್ಕೆತ್ತುತ್ತವೆ. ತಕ್ಷಣವೇ ಬಾಲವನ್ನು ತಲೆಯ ಮೇಲಿನಿಂದ ಮುಂದಕ್ಕೆ ತಂದು ನೆಲಕ್ಕೆ ತಾಗಿಸುತ್ತವೆ. ಹೀಗೆ ಒಂದು ಪಲ್ಟಿ ಪೂರ್ಣಗೊಂಡ ಬಳಿಕ ಮತ್ತೊಂದು ಪಲ್ಟಿಗೆ ಸಿದ್ಧವಾಗುತ್ತವೆ. ಈ ಚಲನೆಯನ್ನು ನಿರಂತರವಾಗಿ ಪುನರಾವರ್ತಿಸುವ ಮೂಲಕ ವೇಗವಾಗಿ ಮುಂದೆ ಸಾಗುತ್ತವೆ.

ಇದನ್ನೂ ಓದಿ: ನಿಜವಾಗಿಯೂ ಮನುಷ್ಯನನ್ನು ನುಂಗಬಲ್ಲವೇ ದೈತ್ಯ ಹಾವುಗಳು? ಇಲ್ಲಿದೆ ಅಚ್ಚರಿಯ ವೈಜ್ಞಾನಿಕ ಸತ್ಯ! Snakes

ಸಣ್ಣ ದೇಹ, ಅಚ್ಚರಿಯ ವೇಗ

ಈ ಹಾವುಗಳ ವಿಶೇಷ ಚಲನೆಯನ್ನು ಅಧ್ಯಯನ ಮಾಡಲು ಜಪಾನ್‌ನ ತೋಹೊ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಯೋಸುಕೆ ಕೊಜಿಮಾ ನೇತೃತ್ವದ ಸಂಶೋಧನಾ ತಂಡ ಮುಂದಾಗಿದೆ. ಮಲೇಷ್ಯಾದ ಸರವಾಕ್‌ನ ಕುಬಾ ರಾಷ್ಟ್ರೀಯ ಉದ್ಯಾನವನದಿಂದ ಈ ಹಾವುಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲಾಗಿದೆ. ಇವುಗಳ ಉದ್ದ ಕೇವಲ 11ರಿಂದ 28 ಸೆಂಟಿಮೀಟರ್‌ಗಳಷ್ಟಿದೆ.ಸಂಶೋಧಕರು ಪ್ರಯೋಗಾಲಯದಲ್ಲಿ 2.2 ಮೀಟರ್ ಉದ್ದದ ವಿಶೇಷ ಹಾದಿಯನ್ನು ನಿರ್ಮಿಸಿ ಹಾವುಗಳ ಚಲನೆಯನ್ನು ವಿವಿಧ ಕೋನಗಳಿಂದ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ಕೆಲವು ಹಾವುಗಳು ಸೆಕೆಂಡಿಗೆ 3.7 ಮೀಟರ್ ವೇಗದಲ್ಲಿ ಚಲಿಸಿರುವುದು ಕಂಡುಬಂದಿದೆ. ಅಂದರೆ ಗಂಟೆಗೆ ಸುಮಾರು 13 ಕಿಲೋಮೀಟರ್ ವೇಗ.

ಪಲ್ಟಿ ಹೊಡೆಯುವಾಗಲೂ ತಲೆ ಸ್ಥಿರ

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ದೇಹದ ಹಿಂಭಾಗ ವೇಗವಾಗಿ ತಿರುಗುತ್ತಿದ್ದರೂ ಹಾವುಗಳು ತಮ್ಮ ತಲೆಯನ್ನು ಬಹುತೇಕ ಸ್ಥಿರವಾಗಿಟ್ಟುಕೊಂಡು ಚಲಿಸುತ್ತವೆ. ಇದರಿಂದ ಅವುಗಳಿಗೆ ಚಲಿಸುವ ದಿಕ್ಕಿನ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಅಧ್ಯಯನದಲ್ಲಿ ಮೂರು ಪ್ರಭೇದಗಳ ಸ್ಯೂಡೊರಾಬ್ಡಿಯನ್ ಹಾವುಗಳನ್ನು ಪರಿಶೀಲಿಸಲಾಗಿದ್ದು, ಹೋಲಿಕೆಗಾಗಿ ಮತ್ತೊಂದು ಗುಂಪಿನ ಹಾವುಗಳನ್ನೂ ಅಧ್ಯಯನ ಮಾಡಲಾಗಿದೆ. ಆದರೆ ಅವುಗಳಲ್ಲಿ ಈ ರೀತಿಯ ಪಲ್ಟಿ ಚಲನೆ ಕಂಡುಬಂದಿಲ್ಲ.ಈ ಅಪರೂಪದ ಚಲನೆಯ ಹಿಂದಿರುವ ದೈಹಿಕ ರಚನೆ ಮತ್ತು ನರಮಂಡಲದ ಸಮನ್ವಯದ ಬಗ್ಗೆ ವಿಜ್ಞಾನಿಗಳು ಇನ್ನಷ್ಟು ಅಧ್ಯಯನ ನಡೆಸಬೇಕಿದೆ. ಅಕ್ಟೋಬರ್ 19, 2026ರಂದು ಕರೆಂಟ್ ಬಯಾಲಜಿ ಸಂಶೋಧನಾ ನಿಯತಕಾಲಿಕದಲ್ಲಿ ಈ ಅಧ್ಯಯನ ಪ್ರಕಟವಾಗಿದೆ.

ಸಾಮಾನ್ಯವಾಗಿ ಹಾವುಗಳ ಚಲನೆ ಎಂದರೆ ಹರಿದಾಡುವುದು ಎಂಬ ಕಲ್ಪನೆಗೆ ಈ ಪುಟ್ಟ ಜೀವಿಗಳು ಹೊಸ ಅಚ್ಚರಿ ಮೂಡಿಸಿವೆ. ಕಾಲುಗಳಿಲ್ಲದಿದ್ದರೂ ಪಲ್ಟಿ ಹೊಡೆದು ಇಷ್ಟು ವೇಗವಾಗಿ ಚಲಿಸಬಲ್ಲವು ಎಂಬುದೇ ಪ್ರಕೃತಿಯ ವಿಸ್ಮಯಕ್ಕೆ ಮತ್ತೊಂದು ಸಾಕ್ಷಿ.