Sugar Level: ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಲ್ಲಿ ಅಂದರೆ ಬೆಳಗ್ಗೆ ತಿಂಡಿಯಿಂದ ರಾತ್ರಿ ಮಲಗುವವರೆಗೆ ವಿವಿಧ ಆಹಾರಗಳಿವೆ. ಅವುಗಳಲ್ಲಿ ಕೆಲವು ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಅಂತಹ ಆಹಾರಗಳನ್ನು ಹಿಡನ್ ಶುಗರ್ ಫುಡ್ಸ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ನಿಧಾನವಾಗಿ ಸಕ್ಕರೆ ಸೇರುತ್ತದೆ.
ಇಂತಹ ಸಕ್ಕರೆ ಆಹಾರಗಳು ಕ್ರಮೇಣ ನಮ್ಮ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸುತ್ತವೆ ಎಂದು ಸಂಶೋಧನೆಗಳು ತೋರಿಸಿವೆ. ನಾವು ದಿನನಿತ್ಯ ಸೇವಿಸುವ ಆಹಾರಗಳ ಪೈಕಿ ಯಾವುದರಲ್ಲಿ ಸಕ್ಕರೆ ಅಂಶವಿದೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.
ಬೆಳಗ್ಗಿನ ತಿಂಡಿ ಬಹಳ ಆರೋಗ್ಯಕರ ಎಂದು ನಮ್ಮಲ್ಲಿ ಪರಿಗಣಿಸಲಾಗಿದೆ. ಅನೇಕ ಜನರು ಧಾನ್ಯಗಳನ್ನು ಇಷ್ಟಪಡುತ್ತಾರೆ. ಅಸಲಿಗೆ ಕೆಲವು ಧಾನ್ಯಗಳಲ್ಲಿ ಕನಿಷ್ಠ 3ರಿಂದ 4 ಟೀ ಚಮಚ ಸಕ್ಕರೆ ಅಂಶವಿರುತ್ತವೆ. ರುಚಿಯನ್ನು ಸುಧಾರಿಸಲು, ಗರಿಗರಿಯಾಗಿಸಲು ಮತ್ತು ಸಂರಕ್ಷಕವಾಗಿ ಕಾರ್ಯನಿರ್ವಹಿಸಲು ತಯಾರಕರು ಈ ಸಕ್ಕರೆಯನ್ನು ಆ ಧಾನ್ಯ ಉತ್ಪನ್ನಕ್ಕೆ ಸೇರಿಸುತ್ತಾರೆ. ಹೀಗಾಗಿ, ಕಡಿಮೆ ಸಕ್ಕರೆ ಅಂಶವಿರುವ ಆಯ್ಕೆಗಳನ್ನು ಕಂಡುಹಿಡಿಯಲು ಪ್ಯಾಕೆಟ್ ಹಿಂದಿರುವ ಲೇಬಲ್ ಅನ್ನು ಪರಿಶೀಲಿಸುವುದು ಒಳಿತು.
ಮೊಸರು ದೇಹಕ್ಕೆ ಪ್ರಯೋಜನಕಾರಿಯೇ. ಅದು ಶುದ್ಧ ಅಂದರೆ ಮನೆಯಲ್ಲೇ ಮಾಡಿದ ಮೊಸರಾದರೆ ಸರಿ. ಅದೇ ಅಂಗಡಿಯಲ್ಲಿ ಖರೀದಿಸುವ ಮೊಸರು ವಿಭಿನ್ನವಾಗಿರುತ್ತದೆ. ಅಂತಹ ಮೊಸರಿನ ರುಚಿ ವಾಸ್ತವವಾಗಿ ಸಕ್ಕರೆಯಿಂದ ತುಂಬಿರುತ್ತದೆ. ಹೀಗಾಗಿ, ಅಂಗಡಿಯಲ್ಲಿ ಖರೀದಿಸುವ ಮೊಸರನ್ನು ಹೆಚ್ಚಾಗಿ ಸೇವಿಸಬೇಡಿ.
ಕುರುಕಲು ತಿಂಡಿ ಪ್ರಿಯರು ನಮ್ಮಲ್ಲಿ ಹೆಚ್ಚು. ಅದರ ಬಗ್ಗೆ ಅನುಮಾನ ಬೇಡ. ಬೀದಿ ಬದಿ ಸಿಗುವ ಸಮೋಸಾ, ಗೋಬಿ ಮತ್ತು ನೂಡಲ್ಸ್ ಅಂದರೆ ಬಾಯಲ್ಲಿ ನೀರೂರುತ್ತದೆ. ಈ ಚಾಟ್ಸ್ಗಳಿಗೆ ಸೈಡ್ನಲ್ಲಿ ಕೊಡುವ ಟೊಮೊಟೊ ಕೆಚಪ್ ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಸಲಿಗೆ, ನಾಲಿಗೆಯ ರುಚಿ ಹೆಚ್ಚಿಸುವ ಈ ಕೆಚಪ್ನಲ್ಲಿಯೂ ಸಕ್ಕರೆಯನ್ನು ಸೇರಿಸಿರುತ್ತಾರೆ. ನಾವು ಅರಿವಿಲ್ಲದೆಯೇ ಇದರಲ್ಲಿರುವ ಸಿಹಿ ಅಂಶವನ್ನು ನಮ್ಮ ದೇಹಕ್ಕೆ ಸೇರಿಸುವುದು ದುರಂತವೇ ಸರಿ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪನಿ ಜ್ಯೂಸ್ಗಳು ನೋಡಲು ಆಕರ್ಷಿತವಾಗಿ ಕಾಣಿಸುತ್ತದೆ. ತಾಜಾ ಹಣ್ಣಿನ ರಸವನ್ನು ಕುಡಿಯದ ನಮ್ಮ ಜನ, ಹೆಚ್ಚಾಗಿ ಇಂತಹ ಟೆಟ್ರಾ ಪ್ಯಾಕ್ ಅಥವಾ ಬಾಟಲಿ ಜ್ಯೂಸ್ ಅನ್ನು ಕುಡಿಯುತ್ತಾರೆ. ಇದು "100% ಹಣ್ಣಿನ ರಸ" ಎಂದು ಲೇಬಲ್ ಮಾಡಿರುತ್ತಾರೆ. ಆದರೆ, ವಾಸ್ತವದಲ್ಲಿ ಇದಕ್ಕೆ ಸಕ್ಕರೆಯನ್ನು ರುಚಿಗಾಗಿ ಸೇರಿಸಿರುತ್ತಾರೆ. ಹಣ್ಣಿನ ಜ್ಯೂಸ್ ಹೆಸರಿನಲ್ಲಿ ನಾವು ಪರೋಕ್ಷವಾಗಿ ಸಕ್ಕರೆಯನ್ನು ಸೇವಿಸುತ್ತಿದ್ದೇವೆ.
ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ನಾನಾ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಾವು ಸೇವಿಸುವ ಆಹಾರಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮತ್ತು ಸಕ್ಕರೆ ಅಂಶ ಎಷ್ಟಿದೆ? ಎಂಬುದನ್ನು ಸರಿಯಾಗಿ ಪರಿಶೀಲಿಸಿಕೊಳ್ಳುತ್ತಿರಬೇಕು.
ಆದಷ್ಟು ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ಖರೀದಿಸುವ ಮುನ್ನ ಅದರ ಮೇಲಿರುವ ಲೇಬಲ್ ಅನ್ನು ಸರಿಯಾಗಿ ಗಮನಿಸಿ. ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡಿ. ಚಹಾ ಮತ್ತು ಕಾಫಿಯಲ್ಲಿ ಸಕ್ಕರೆಯ ಪ್ರಮಾಣವನ್ನು ಪೂರ್ತಿ ಅಲ್ಲದೆ ಹೋದರೆ ಕೊಂಚ ಇಳಿಸಿ. ಸಕ್ಕರೆ ಮಿಶ್ರಿತ ತಿಂಡಿಗಳ ಬದಲಿಗೆ ಹಣ್ಣುಗಳನ್ನು ಸೇವಿಸಿ,(ಏಜೆನ್ಸೀಸ್).ಗಮನಿಸಿ: ನಿಮ್ಮ ಫಿಟ್ನೆಸ್ ಮಟ್ಟವನ್ನು ಅವಲಂಬಿಸಿ ಕ್ರಮೇಣ ವೇಗ ಮತ್ತು ಸಮಯವನ್ನು ಹೆಚ್ಚಿಸುವುದು ಉತ್ತಮ. ಯಾವುದೇ ಹೊಸ ವ್ಯಾಯಾಮ ಕ್ರಮವನ್ನು ಪ್ರಾರಂಭಿಸುವ ಮೊದಲು ವೃತ್ತಿಪರ ಸಲಹೆಯನ್ನು ಪಡೆಯುವುದು ಯಾವಾಗಲೂ ಉತ್ತಮ.