Rose Water: ಮುಖದ ಮೇಲೆ ಎಷ್ಟೇ ಕಾಳಜಿ ವಹಿಸಿದರೂ ಕೆಲವೊಮ್ಮೆ ಚರ್ಮ ಮಂಕಾಗಿ ಕಾಣಿಸುತ್ತದೆ ಎಂಬುದು ಹಲವರ ಚಿಂತೆ. ಮುಖದಲ್ಲಿ, ಒಣಗಿರುವಂತೆ, ಸಣ್ಣ ಸಣ್ಣ ಒರಟುತನ ಅಥವಾ ಚರ್ಮದ ಹೊಳಪು ಕಡಿಮೆಯಾಗಿದೆ ಎಂಬ ಸಮಸ್ಯೆಗಳು ಕಾಡುವುದು ತೀರ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ದುಬಾರಿ ಸೌಂದರ್ಯ ಉತ್ಪನ್ನಗಳ ಮೊರೆ ಹೋಗುವ ಬದಲು ಮನೆಯಲ್ಲೇ ಸುಲಭವಾಗಿ ಬಳಸಬಹುದಾದ ರೋಸ್ ವಾಟರ್ ಬಗ್ಗೆ ಅನೇಕರಿಗೆ ಮಾಹಿತಿ ಇದೆ. ಆದರೆ, ದಿನನಿತ್ಯ ಇದನ್ನು ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಬಣ್ಣವು ಬದಲಾಗುತ್ತದೆಯೇ ಎಂಬ ಒಂದಷ್ಟು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಹುಡುಕೋಣ ಬನ್ನಿ.
ಗುಲಾಬಿ ಹೂವಿನ ದಳಗಳಿಂದ ತಯಾರಾಗುವ ರೋಸ್ ವಾಟರ್ ಅನ್ನು ಹಲವು ವರ್ಷಗಳಿಂದ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತಿದೆ. ಇದು ಚರ್ಮಕ್ಕೆ ಹಗುರವಾದ ತೇವಾಂಶ ನೀಡುವುದರ ಜತೆಗೆ ಮುಖಕ್ಕೆ ತಾಜಾತನದ ಅನುಭವ ಒದಗಿಸಬಹುದು. ವಿಶೇಷವಾಗಿ ಚರ್ಮ ಒಣಗಿದಾಗ ಮುಖದ ಮೇಲಿನ ಸಣ್ಣ ರೇಖೆಗಳು ಮತ್ತು ಒರಟುತನ ಹೆಚ್ಚು ಗೋಚರಿಸಬಹುದು. ಚರ್ಮದಲ್ಲಿ ತೇವಾಂಶ ಉಳಿದಾಗ ಅದು ಸ್ವಲ್ಪ ಮೃದುವಾಗಿ ಹಾಗೂ ನಯವಾಗಿ ಕಾಣಲು ಸಾಧ್ಯವಾಗುತ್ತದೆ. ಈ ಕಾರಣದಿಂದ ರೋಸ್ ವಾಟರ್ ಬಳಸಿದ ನಂತರ ಕೆಲವರಿಗೆ ಮುಖದ ಚರ್ಮದಲ್ಲಿ ಸ್ವಲ್ಪ ಬದಲಾವಣೆ ಕಂಡುಬರಬಹುದು. ಆದರೆ, ಎಲ್ಲರ ಚರ್ಮವೂ ಒಂದೇ ರೀತಿ ಇರುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಮುಖ ಒಣಗಿದಂತೆ, ಮಂಕಾಗಿ ಮತ್ತು ಒರಟಾಗಿ ಕಾಣಬಹುದು. ರೋಸ್ ವಾಟರ್ ಚರ್ಮಕ್ಕೆ ಹಗುರವಾದ ತೇವಾಂಶ ನೀಡುವುದರಿಂದ ಮುಖ ಸ್ವಲ್ಪ ಮೃದುವಾಗಿ ಕಾಣಲು ಸಹಾಯ ಮಾಡಬಹುದು. ಹಾಗಂತ, ರೋಸ್ ವಾಟರ್ ಮಾತ್ರ ಸಾಕು ಎಂದು ಸುಮ್ಮನಾಗಬೇಡಿ. ಬದಲಿಗೆ, ಅದನ್ನು ಬಳಸಿದ ನಂತರ ಚರ್ಮಕ್ಕೆ ಹೊಂದುವ ತೇವಾಂಶ ಕ್ರೀಮ್ ಹಚ್ಚುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಹೆಚ್ಚು ಸಹಾಯವಾಗಬಹುದು.
ಚರ್ಮದಲ್ಲಿ ಸಣ್ಣ ಪ್ರಮಾಣದ ಉರಿ ಕಂಡುಬಂದಾಗ ಕೆಲವರಿಗೆ ರೋಸ್ ವಾಟರ್ ಹಿತಕರವಾದ ಅನುಭವ ನೀಡಬಹುದು. ಗುಲಾಬಿಯಲ್ಲಿರುವ ಕೆಲವು ಸಸ್ಯಜನ್ಯ ಅಂಶಗಳು ಚರ್ಮವನ್ನು ತಣ್ಣಗಾಗಿಸುವ ಗುಣ ಹೊಂದಿರಬಹುದು. ಆದರೆ ತೀವ್ರವಾದ ಅಲರ್ಜಿ, ಮೊಡವೆ, ಚರ್ಮದ ಉರಿ ಅಥವಾ ಯಾವುದೇ ಚರ್ಮ ರೋಗಗಳಿದ್ದರೆ, ರೋಸ್ ವಾಟರ್ ಅನ್ನು ಚಿಕಿತ್ಸೆಯಂತೆ ಬಳಸಬಾರದು. ಅಂತಹ ಸಮಸ್ಯೆಗಳು ಕಾಣಿಸಿಕೊಂಡರೆ ತಜ್ಞರ ಸಲಹೆ ಅಗತ್ಯ.
ದಿನವಿಡೀ ಹೊರಗೆ ಓಡಾಡುವುದು, ಬಿಸಿಲಿಗೆ ಒಡ್ಡಿಕೊಳ್ಳುವುದು ಅಥವಾ ಒಣ ವಾತಾವರಣದಲ್ಲಿ ಇರುವುದರಿಂದ ಮುಖ ದಣಿದಂತೆ ಕಾಣಬಹುದು. ಇಂತಹ ಸಂದರ್ಭದಲ್ಲಿ ರೋಸ್ ವಾಟರ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡರೆ ತಾಜಾತನದ ಅನುಭವ ಸಿಗಬಹುದು. ಆದರೆ, ಬಿಸಿಲಿನಿಂದ ಚರ್ಮಕ್ಕೆ ಆಗುವ ಹಾನಿಯನ್ನು ರೋಸ್ ವಾಟರ್ ತಡೆಗಟ್ಟುತ್ತದೆ ಎಂದು ನೀವೇ ನಿರ್ಧರಿಸಬೇಡಿ. ಹೊರಗೆ ಹೋಗುವಾಗ ಸೂರ್ಯನ ಕಿರಣಗಳಿಂದ ಚರ್ಮದ ಕಾಂತಿಯನ್ನು ರಕ್ಷಿಸಲು ಸನ್‌ಸ್ಕ್ರೀನ್ ಬಳಸುವುದು ಒಳಿತು.
ಮೊದಲು ಮುಖವನ್ನು ಫೇಸ್ ವಾಶ್ ಮೂಲಕ ತೊಳೆಯಿರಿ. ನಂತರ ಸ್ವಲ್ಪ ಪ್ರಮಾಣದ ರೋಸ್ ವಾಟರ್ ಅನ್ನು ಸ್ವಚ್ಛವಾದ ಕೈಗಳಿಂದ ನಿಧಾನವಾಗಿ ಮುಖಕ್ಕೆ ಲೇಪಿಸಿಕೊಳ್ಳಿ. ಚರ್ಮ ಸ್ವಲ್ಪ ತೇವವಾಗಿರುವಾಗ ರೋಸ್ ವಾಟರ್ ಹಚ್ಚಿದರೆ ಚರ್ಮದ ತೇವಾಂಶ ಕಾಪಾಡುಕೊಳ್ಳಲು ಸಹಾಯವಾಗಬಹುದು. ಇನ್ನು, ಇದನ್ನು ಅತಿಯಾಗಿ ಬಳಸಬೇಕೆಂದಿಲ್ಲ. ದಿನಕ್ಕೆ ಒಂದು ಅಥವಾ ಎರಡು ಬಾರಿ ಬಳಸಿದರೆ ಸಾಕು. ಮುಖ್ಯವಾಗಿ, ಬಳಸಿದ ನಂತರ ಚರ್ಮದಲ್ಲಿ ಯಾವುದೇ ಬದಲಾವಣೆ ಆಗುತ್ತಿದೆಯೇ ಎಂಬುದನ್ನು ಗಮನಿಸಿ.
ಇದು ಬಹಳ ಮುಖ್ಯವಾದ ವಿಷಯ. ಅಂಗಡಿಗಳಲ್ಲಿ ಸಿಗುವ ಪ್ರತಿಯೊಂದು ರೋಸ್ ವಾಟರ್ ಕೂಡ ಒಂದೇ ರೀತಿಯದ್ದಲ್ಲ. ಕೆಲವು ಉತ್ಪನ್ನಗಳಲ್ಲಿ ಹೆಚ್ಚುವರಿ ಸುಗಂಧ ಅಥವಾ ಚರ್ಮಕ್ಕೆ ಕಿರಿಕಿರಿ ಉಂಟುಮಾಡಬಹುದಾದ ಇತರ ಪದಾರ್ಥಗಳು ಇರಬಹುದು. ಆದ್ದರಿಂದ, ಖರೀದಿಸುವ ಮೊದಲು ಅದರ ಮೇಲಿರುವ ಪದಾರ್ಥಗಳ ಪಟ್ಟಿಯನ್ನು ಪರಿಶೀಲಿಸಿ. ಸೂಕ್ಷ್ಮ ಚರ್ಮ ಹೊಂದಿರುವವರು ವಿಶೇಷವಾಗಿ ಎಚ್ಚರಿಕೆ ವಹಿಸುವುದು ಉತ್ತಮ.
ಒಟ್ಟಿನಲ್ಲಿ ರೋಸ್ ವಾಟರ್ ಚರ್ಮದ ಆರೈಕೆಯಲ್ಲಿ ಸರಳವಾದ ವಿಧಾನವಾಗಿದೆ. ನಿಯಮಿತವಾಗಿ ಬಳಸುವುದರಿಂದ ಕೆಲವರಿಗೆ ಚರ್ಮ ಹೆಚ್ಚು ತಾಜಾ, ಮೃದುವಾಗಿ ಮತ್ತು ತೇವಾಂಶ ಹೊಂದಿದಂತೆ ಕಾಣಬಹುದು. ಆದರೆ, ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕಾರಣ, ನಿಮ್ಮ ಚರ್ಮಕ್ಕೆ ಅದು ಹೊಂದುತ್ತಾ ಎಂಬುದನ್ನು ಗಮನಿಸುತ್ತಾ ಬಳಕೆ ಮಾಡುವುದು ಉತ್ತಮ ನಿರ್ಧಾರ,(ಏಜೆನ್ಸೀಸ್).