ಅವರೆಲ್ಲ ಹೊರಡಲು ಅನುವಾಗುವಾಗ ನರಿಯೊಂದು ಬಂದು ಹೀಗೆಂದಿತಂತೆ- ‘ಇಷ್ಟು ಆಸ್ಥೆಯಿಂದ ಬೆಳೆಸಿದ ಎಳೆಮಗುವನ್ನು ಬಿಟ್ಟುಹೋಗಲು ನಿಮಗೆ ಮನಸ್ಸಾದರೂ ಹೇಗೆ ಬರುವುದು? ಜಗತ್ತಿನಲ್ಲಿ ಎಂತೆಂತಹ ಅದ್ಭುತಗಳು ನಡೆಯುತ್ತೆ. ಹಾಗೆಯೇ ಈ ಹುಡುಗನೂ ಬದುಕಬಹುದು. ನಿಮಗೆಲ್ಲ ಕರುಣೆಯೇ ಇಲ್ಲವೇ? ಅವನ ಮೇಲಿನ ಪ್ರೀತಿ ಇಷ್ಟೇನೇ? ರಾತ್ರಿಯಾಗುವವರೆಗಾದರೂ ಕಾಯಬಹುದಲ್ಲ! ಮಗುವಿನೊಡನಿದ್ದು ಭಗವಂತನನ್ನು ಇಡೀ ಹಗಲು ಪ್ರಾರ್ಥಿಸಿ. ಅವನಾಗ ಜೀವಂತನಾಗಬಹುದು. ಅವನನ್ನು ಎಲ್ಲರೂ ಹೀಗೆ ಬಿಟ್ಟುಹೋಗುವ ನಿಮ್ಮ ಹೃದಯಗಳು ಕಲ್ಲಾಗಿವೆಯೇ’ ಎಂದೆಲ್ಲ. ಮತ್ತೆ ಅವರೆಲ್ಲ ಹುಡುಗನನ್ನು ತೊಡೆಯಮೇಲಿರಿಸಿ ಗೋಳಾಡತೊಡಗಿದರು. ಪುನಃ ಹದ್ದಿನ ಧರ್ವೇಪದೇಶ ಆರಂಭ. ಹೊರಟರೆ ನರಿಯ ಉಪದೇಶ. ಈ ತೊಳಲಾಟ ನೋಡಲಾಗದೇ ಭಗವಂತ ಆ ಮಗುವನ್ನು ಬದುಕಿಸಿದನಂತೆ, ಎಂಬುದು ಮುಂದಿನ ಕಥೆ. ಇರಲಿ. ಹದ್ದು, ಅವರು ಬಿಟ್ಟುಹೋದಮೇಲೆ ಶವವನ್ನು ಹಗಲಿನಲ್ಲೇ ತಿಂದುಮುಗಿಸಬಹುದು ಎಂಬುದಕ್ಕಾಗಿ ಧರ್ಮಶಾಸ್ತ್ರವನ್ನೆಲ್ಲ ಬಳಸಿತು. ಹದ್ದು ಇದ್ದಾಗ ತನಗೆ ಮಾಂಸ ಸಿಗದು. ಅದಕ್ಕಾಗಿ ರಾತ್ರಿಯಾದರೆ ಹದ್ದಿನ ಕಾಟ ಇರುವುದಿಲ್ಲ ತಾನೇ ಹುಡುಗನ ಶವವನ್ನು ತಿನ್ನಬಹುದು ಎಂಬುದು ನರಿಯ ಆಲೋಚನೆ. ಎರಡಕ್ಕೂ ಯಾವ ಧರ್ಮಶಾಸ್ತ್ರವೂ ಬೇಕಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಧರ್ಮದ ಮಾತುಗಳ ದುರ್ಬಳಕೆ ಮಾಡುತ್ತಿವೆ ಅಷ್ಟೇ. ಎರಡೂ ತಮ್ಮ ತಮ್ಮ ವರಸೆಯಲ್ಲಿ ಸಹಾನುಭೂತಿಯ ನಾಟಕವಾಡುತ್ತಿವೆ.
ಹಿರಿಯರು ಸಮಾಜದ ಒಳಿತಿಗೆಂದು ಅರುಹಿದ ಧರ್ಮದ ಮಾತುಗಳನ್ನು ಕೆಲವರು ತಮ್ಮ ಸ್ವಾರ್ಥಸಾಧನೆಗೆ ಅಸಮಯದಲ್ಲಿ ಬಳಸುತ್ತಾರೆ. ಅಲ್ಲೆಲ್ಲ ನಾವು ವಿವೇಕದಿಂದ ನಿರ್ಣಯಿಸಬೇಕಾಗುತ್ತದೆ. ಕುರುಕ್ಷೇತ್ರದಲ್ಲಿ ಅರ್ಜುನನೂ, ಆ ಸಮಯದ ತನ್ನ ಹೃದಯದೌರ್ಬಲ್ಯವನ್ನು ಸಮರ್ಥಿಸಲು, ಕರ್ತವ್ಯರೂಪವಾದ ಯುದ್ಧ ಮಾಡದಿರಲು ಧರ್ಮಶಾಸ್ತ್ರದ ಮಾತುಗಳನ್ನೇ ಆಡಿದ. ಆದರೆ ಆ ಮಾತುಗಳ ಮೂಲ, ಧರ್ಮಪ್ರಜ್ಞೆಯಲ್ಲದೇ, ಅವನ ಆಗಿನ ದೌರ್ಬಲ್ಯವಾಗಿತ್ತು ಎಂಬುದನ್ನು ಮನಗಂಡ ಸರ್ವೆಶ್ವರನಾದ ಕೃಷ್ಣಪ್ರಭು ಅದನ್ನು ಅವನಿಗೆ ನಿಜವಾದ ಧರ್ಮಮಾರ್ಗವನ್ನು ತೋರಿಸಿಕೊಡಬೇಕಾಯಿತು. ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ- ‘ಜೀವನದ ಅಪಾರ್ಥಗಳನ್ನೆಲ್ಲ ಕಳೆದು, ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಅವನು (ಅರ್ಜುನನು) ಪಾರ್ಥಸಾರಥಿಯನ್ನು ತನ್ನ ಜೊತೆ ಇಟ್ಟುಕೊಂಡನಪ್ಪಾ’. ಹಾಗೆ ಜೀವನದ ನಿರ್ಣಯಗಳಲ್ಲಿ ಶ್ರೀಕೃಷ್ಣನಂತಹ ಜ್ಞಾನಿಶ್ರೇಷ್ಠರ ನಡೆ ನಮಗೆ ದಾರಿದೀಪವಾಗಲಿ.
(ಲೇಖಕರು ಸಂಸ್ಕೃತಿ ಚಿಂತಕರು)