Sea Pig : ಸಮುದ್ರದ ಆಳದಲ್ಲಿ ಅಡಗಿರುವ ಜೀವಜಗತ್ತು ಇಂದಿಗೂ ವಿಜ್ಞಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿಯನ್ನು ನೀಡುತ್ತಿದೆ. ಸಮುದ್ರದ ತಳದಲ್ಲಿ ಹಂದಿಯಂತೆ ಕಾಣುವ ವಿಚಿತ್ರ ಜೀವಿಯೊಂದರ ದೇಹದೊಳಗೆ ಈವರೆಗೆ ಗುರುತಿಸದ ಬ್ಯಾಕ್ಟೀರಿಯಾವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ವಿಶೇಷವೆಂದರೆ, ಈ ಸೂಕ್ಷ್ಮಜೀವಿಯ ದೇಹದಲ್ಲಿರುವ ಕೆಲವು ಪ್ರೋಟೀನ್ಗಳು ಸಾಮಾನ್ಯ ಬ್ಯಾಕ್ಟೀರಿಯಾಗಳಿಗಿಂತ ಹಲವು ಪಟ್ಟು ದೊಡ್ಡದಾಗಿವೆ. ಈ ಸಂಗತಿ ಸಮುದ್ರದ ಸೂಕ್ಷ್ಮಜೀವಿಗಳ ಕುರಿತ ಸಂಶೋಧನೆಗೆ ಹೊಸ ಕುತೂಹಲ ಮೂಡಿಸಿದೆ.
ಸೀ ಪಿಗ್ ಎಂದು ಕರೆಯಲಾಗುವ ಈ ಜೀವಿ ನೋಡಲು ಸಣ್ಣ ಹಂದಿಯಂತೆ ಕಾಣುತ್ತದೆ. ಆದರೆ ಇದು ಹಂದಿ ಕುಟುಂಬಕ್ಕೆ ಸೇರಿದ್ದಲ್ಲ. ಸಮುದ್ರ ಸೌತೆಕಾಯಿ ಜಾತಿಗೆ ಸೇರಿದ ಜೀವಿಯಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಕೋಟೋಪ್ಲೇನ್ಸ್ ಮೃದುವಾದ ಗುಲಾಬಿ ಬಣ್ಣದ ದೇಹ, ಕಾಲುಗಳಂತೆ ಕಾಣುವ ಕೊಳವೆಯಾಕಾರದ ಅಂಗಗಳು ಇದರ ವಿಶೇಷತೆ. ಸಮುದ್ರದ ತಳದಲ್ಲಿ ನಿಧಾನವಾಗಿ ಚಲಿಸುವ ಈ ಜೀವಿ ಅಲ್ಲಿ ಸಂಗ್ರಹವಾಗಿರುವ ಸಾವಯವ ಪದಾರ್ಥಗಳನ್ನು ಆಹಾರವಾಗಿ ಸೇವಿಸುತ್ತದೆ. ಸಮುದ್ರದ ಸಾವಿರಾರು ಮೀಟರ್ ಆಳದಲ್ಲಿಯೂ ಇವು ಬದುಕಬಲ್ಲವು. ಪ್ರತಿಕೂಲ ಪರಿಸರದಲ್ಲಿಯೂ ಇವು ಹೇಗೆ ಬದುಕುತ್ತವೆ ಎಂಬುದು ವಿಜ್ಞಾನಿಗಳಿಗೆ ಆಸಕ್ತಿಯ ವಿಷಯವಾಗಿದೆ.
ಜಪಾನ್ನ ಟೋಕಿಯೊ ವಿಶ್ವವಿದ್ಯಾಲಯದ ಸಂಶೋಧಕರು ಸಮುದ್ರದ ಹಂದಿಗಳ ದೇಹದಲ್ಲಿರುವ ಸೂಕ್ಷ್ಮಜೀವಿಗಳನ್ನು ಅಧ್ಯಯನ ಮಾಡುವಾಗ ಈ ವಿಚಿತ್ರ ಬ್ಯಾಕ್ಟೀರಿಯಾವನ್ನು ಗುರುತಿಸಿದ್ದಾರೆ. ಕ್ಯಾಂಡಿಡೇಟಸ್ ಮೈಕೋಪ್ಲಾಸ್ಮಾ ಸ್ಕೋಟೋಪ್ಲೇನೆಸಿಕೋಲಾ ಎಂದು ಇದಕ್ಕೆ ಹೆಸರಿಡಲಾಗಿದೆ. ಸಂಶೋಧಕರು ಎಂಟು ಸೀ ಪಿಗ್ಗಳ ಅಂಗಾಂಶಗಳನ್ನು ಪರೀಕ್ಷಿಸಿ, ಅವುಗಳ ಡಿಎನ್ಎಯನ್ನು ವಿಶ್ಲೇಷಿಸಿದ್ದಾರೆ. ಈ ವೇಳೆ ದೇಹದ ಗೋಡೆಯ ಕೆಳಭಾಗದಲ್ಲಿ ನಿರ್ದಿಷ್ಟ ಬ್ಯಾಕ್ಟೀರಿಯಾ ನೆಲೆಸಿರುವುದು ಪತ್ತೆಯಾಗಿದೆ. ಅದರ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಚಿತ್ರಣ ತಂತ್ರಜ್ಞಾನವನ್ನೂ ಬಳಸಲಾಗಿದೆ.
ಈ ಸಂಶೋಧನೆಯಲ್ಲಿ ಅತ್ಯಂತ ಕುತೂಹಲ ಮೂಡಿಸಿರುವುದು ಬ್ಯಾಕ್ಟೀರಿಯಾದ ಜೀನೋಮ್ ರಚನೆ. ಇದರ ಜೀನೋಮ್ನಲ್ಲಿ ಕೇವಲ 6.49 ಲಕ್ಷ ಡಿಎನ್ಎ ಮೂಲ ಘಟಕಗಳಿವೆ. ಅಂದರೆ, ಆನುವಂಶಿಕ ಮಾಹಿತಿಯ ಪ್ರಮಾಣ ಕಡಿಮೆ ಇದ್ದರೂ, ಕೆಲವು ಪ್ರೋಟೀನ್ಗಳ ರಚನೆ ಮಾತ್ರ ಅಸಾಮಾನ್ಯವಾಗಿದೆ.ಇದರ ಜೀನೋಮ್ನ ಶೇ.27.6ರಷ್ಟು ಭಾಗವು ಜೀವಕೋಶದ ಮೇಲ್ಮೈಗೆ ಸಂಬಂಧಿಸಿದ ಪ್ರೋಟೀನ್ಗಳನ್ನು ಉತ್ಪಾದಿಸುವ ಜೀನ್ಗಳನ್ನು ಹೊಂದಿದೆ. ಕೆಲವು ಪ್ರೋಟೀನ್ಗಳು 5,000ಕ್ಕೂ ಹೆಚ್ಚು ಅಮೈನೋ ಆಮ್ಲಗಳನ್ನು ಹೊಂದಿವೆ. ಸಾಮಾನ್ಯ ಬ್ಯಾಕ್ಟೀರಿಯಾಗಳ ಪ್ರೋಟೀನ್ಗಳಿಗೆ ಹೋಲಿಸಿದರೆ ಇದು ಗಮನಾರ್ಹ ವ್ಯತ್ಯಾಸವಾಗಿದೆ. ಈ ಬೃಹತ್ ಪ್ರೋಟೀನ್ಗಳು ಬ್ಯಾಕ್ಟೀರಿಯಾ ಸಮುದ್ರಜೀವಿಯ ದೇಹದೊಳಗೆ ನೆಲೆಸಲು ಅಥವಾ ಅದರ ಅಂಗಾಂಶಗಳೊಂದಿಗೆ ಸಂವಹನ ನಡೆಸಲು ನೆರವಾಗುತ್ತಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಕ್ಯಾಂಡಿಡೇಟಸ್ ಅಬಿಸ್ಸೋಪ್ಲಾಸ್ಮಾ ಸ್ಕೋಟೋಪ್ಲೇನಿಸಿಕೋಲಾ ಈ ಬ್ಯಾಕ್ಟೀರಿಯಾ ಸಮುದ್ರದ ಹಂದಿಯ ದೇಹದಲ್ಲಿ ವಾಸಿಸುತ್ತಿರುವುದೇನೋ ಪತ್ತೆಯಾಗಿದೆ. ಆದರೆ ಅದರಿಂದ ಆತಿಥೇಯ ಜೀವಿಗೆ ಏನು ಪ್ರಯೋಜನವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೋಷಕಾಂಶಗಳ ವಿನಿಮಯ, ದೇಹದೊಳಗಿನ ರಕ್ಷಣೆ ಅಥವಾ ಇತರ ಜೈವಿಕ ಚಟುವಟಿಕೆಗಳಲ್ಲಿ ಇದು ಪಾತ್ರ ವಹಿಸುತ್ತಿರಬಹುದು ಎಂಬ ಸಾಧ್ಯತೆಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ.
ಸಮುದ್ರದ ಆಳದಲ್ಲಿ ವಾಸಿಸುವ ಒಂದು ಸಣ್ಣ ಜೀವಿಯ ದೇಹದೊಳಗೆ ಅಡಗಿರುವ ಬ್ಯಾಕ್ಟೀರಿಯಾ ಕೂಡ ಎಷ್ಟು ವಿಶಿಷ್ಟವಾಗಿರಬಹುದು ಎಂಬುದಕ್ಕೆ ಈ ಸಂಶೋಧನೆ ಉತ್ತಮ ಉದಾಹರಣೆಯಾಗಿದೆ. ಈ ಸೂಕ್ಷ್ಮಜೀವಿ ಮತ್ತು ಸೀ ಪಿಗ್ ನಡುವಿನ ಸಂಬಂಧದ ಸಂಪೂರ್ಣ ರಹಸ್ಯ ಬಯಲಾಗಲು ಮುಂದಿನ ಅಧ್ಯಯನಗಳು ಅಗತ್ಯವಾಗಿವೆ.