ಸಾಂದರ್ಭಿಕ ಚಿತ್ರ 
ಟೆಕ್ನಾಲಜಿ

ನೀವು ಡಿಲೀಟ್ ಮಾಡಿದ ಫೋಟೋ ನಿಜವಾಗಿಯೂ ಅಳಿಸಿಹೋಗುತ್ತದೆಯೇ? ಇದರ ಹಿಂದಿರುವ ಅಚ್ಚರಿ ಸತ್ಯ ನಿಮಗೆ ಗೊತ್ತಾ? Smartphone

ಮೊಬೈಲ್‌ನಲ್ಲಿ ಫೋಟೋ ಡಿಲೀಟ್ ಮಾಡೋದು ಅಂದ್ರೆ ಅದು ತಕ್ಷಣವೇ ಶಾಶ್ವತವಾಗಿ ನಾಶವಾಗುತ್ತದೆ ಅಂತ ಅರ್ಥವಲ್ಲ. ಕೆಲವು ಸಂದರ್ಭಗಳಲ್ಲಿ ನಾವು ಅಳಿಸಿದ ಫೋಟೋಗಳು ರೀಸೆಂಟ್ಲಿ ಡಿಲೀಟ್ ಫೋಲ್ಡರ್‌ನಲ್ಲಿ, ಗೂಗಲ್ ಪೋಟೋಸ್ ಬ್ಯಾಕಪ್‌ನಲ್ಲಿ ಅಥವಾ ಬೇರೆ ಸಾಧನದಲ್ಲಿ ಉಳಿದಿರಬಹುದು.

Smartphone : ನಮ್ಮ ಮೊಬೈಲ್‌ನಲ್ಲಿ ಸ್ಟೋರೇಜ್ ಫುಲ್ ಆಯ್ತು ಅಂದ್ರೆ ಸಾಕು, ತಕ್ಷಣ ಗ್ಯಾಲರಿ ಓಪನ್ ಮಾಡಿ ಬೇಡವಾದ ಫೋಟೋಗಳನ್ನೆಲ್ಲ ಡಿಲೀಟ್ ಮಾಡೋಕೆ ಶುರು ಮಾಡ್ತೀವಿ. ಕೆಲವೊಮ್ಮೆ ಹಳೆಯ ಫೋಟೋಗಳನ್ನು ಅಳಿಸುತ್ತೇವೆ, ಇನ್ನು ಕೆಲವೊಮ್ಮೆ ವೈಯಕ್ತಿಕ ಫೋಟೋಗಳನ್ನು ಯಾರಿಗೂ ಕಾಣಬಾರದು ಅಂತ ಡಿಲೀಟ್ ಮಾಡುತ್ತೇವೆ. ಫೋಟೋ ಡಿಲೀಟ್ ಆಯ್ತು, ಇನ್ನು ಅದು ನಮ್ಮ ಮೊಬೈಲ್‌ನಲ್ಲಿ ಇಲ್ಲ ಅಂತ ನೆಮ್ಮದಿಯಾಗಿರುತ್ತೇವೆ. ಆದರೆ, ಒಂದು ನಿಮಿಷ ಯೋಚನೆ ಮಾಡಿ ನೋಡಿ, ನೀವು ಡಿಲೀಟ್ ಮಾಡಿದ ಆ ಫೋಟೋ ನಿಜವಾಗಿಯೂ ಸಂಪೂರ್ಣವಾಗಿ ಅಳಿಸಿಹೋಗಿದೆಯಾ? ಅಥವಾ ನಿಮಗೆ ಕಾಣದ ಯಾವುದೋ ಜಾಗದಲ್ಲಿ ಇನ್ನೂ ಉಳಿದುಕೊಂಡಿದೆಯಾ?

ಇದನ್ನು ಕೇಳಿದಾಗ ಸ್ವಲ್ಪ ಆಶ್ಚರ್ಯವಾಗಬಹುದು. ಯಾಕಂದ್ರೆ, ಮೊಬೈಲ್‌ನಲ್ಲಿ ಫೋಟೋ ಡಿಲೀಟ್ ಮಾಡೋದು ಅಂದ್ರೆ ಅದು ತಕ್ಷಣವೇ ಶಾಶ್ವತವಾಗಿ ನಾಶವಾಗುತ್ತದೆ ಅಂತ ಅರ್ಥವಲ್ಲ. ಕೆಲವು ಸಂದರ್ಭಗಳಲ್ಲಿ ನಾವು ಅಳಿಸಿದ ಫೋಟೋಗಳು ರೀಸೆಂಟ್ಲಿ ಡಿಲೀಟ್ ಫೋಲ್ಡರ್‌ನಲ್ಲಿ, ಗೂಗಲ್ ಪೋಟೋಸ್ ಬ್ಯಾಕಪ್‌ನಲ್ಲಿ ಅಥವಾ ಬೇರೆ ಸಾಧನದಲ್ಲಿ ಉಳಿದಿರಬಹುದು. ಹಾಗಾದರೆ, ನಾವು ಫೋಟೋ ಡಿಲೀಟ್ ಮಾಡಿದಾಗ ನಿಜವಾಗಿ ಏನಾಗುತ್ತದೆ? ಅಳಿಸಿಹೋದ ಫೋಟೋವನ್ನು ಮತ್ತೆ ಪಡೆಯಲು ಸಾಧ್ಯವೇ? ನಮ್ಮ ವೈಯಕ್ತಿಕ ಫೋಟೋಗಳು ನಿಜಕ್ಕೂ ಸುರಕ್ಷಿತವಾಗಿವೆಯೇ? ಫೋಟೋ ಡಿಲೀಟ್ ಮಾಡಿದ ತಕ್ಷಣ ಅದು ಮಾಯವಾಗುತ್ತದೆಯಾ?

ನಾವು ಮೊಬೈಲ್‌ನಲ್ಲಿ ಫೋಟೋ ಡಿಲೀಟ್ ಮಾಡಿದಾಗ ಅದು ಯಾವಾಗಲೂ ತಕ್ಷಣವೇ ಶಾಶ್ವತವಾಗಿ ನಾಶವಾಗುವುದಿಲ್ಲ. ಅನೇಕ ಮೊಬೈಲ್‌ಗಳಲ್ಲಿ ಅಳಿಸಿದ ಫೋಟೋಗಳು ಮೊದಲು ರೀಸೆಂಟ್ಟಿ ಡಿಲೀಟ್ ಅಥವಾ ಟ್ರಾಶ್ ಅನ್ನೋ ಫೋಲ್ಡರ್‌ಗೆ ಹೋಗುತ್ತವೆ. ಅಂದ್ರೆ, ತಪ್ಪಾಗಿ ಫೋಟೋ ಡಿಲೀಟ್ ಮಾಡಿದರೂ ಅದನ್ನು ಮತ್ತೆ ವಾಪಸ್ ಪಡೆಯೋಕೆ ಅವಕಾಶ ಇರುತ್ತದೆ. ಈ ಫೋಲ್ಡರ್‌ನಲ್ಲಿ ಫೋಟೋ ಎಷ್ಟು ದಿನ ಉಳಿಯುತ್ತದೆ ಅನ್ನೋದು ನಿಮ್ಮ ಮೊಬೈಲ್ ಅಥವಾ ಬಳಸುವ ಆ್ಯಪ್ ಅನ್ನು ಅವಲಂಬಿಸಿರುತ್ತದೆ. ಹಾಗಾಗಿ, ಗ್ಯಾಲರಿಯಲ್ಲಿ ಫೋಟೋ ಕಾಣಿಸುತ್ತಿಲ್ಲ ಅಂದ್ರೆ ಅದು ಸಂಪೂರ್ಣವಾಗಿ ಅಳಿಸಿಹೋಗಿದೆ ಅಂತ ಅಂದುಕೊಳ್ಳಬೇಡಿ.

ಮೊಬೈಲ್‌ನಿಂದ ಅಳಿಸಿದ ಫೋಟೋ ಗೂಗಲ್ ಪೋಟೋಸ್​ನಲ್ಲೂ ಇರಬಹುದಾ?ಇದು ನೀವು ತಿಳಿದುಕೊಳ್ಳಬೇಕಾದ ಮುಖ್ಯವಾದ ವಿಷಯ. ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪೋಟೋಸ್ ಅಥವಾ ಬೇರೆ ಕ್ಲೌಡ್ ಸೇವೆಯ ಬ್ಯಾಕಪ್ ಆನ್ ಆಗಿದ್ದರೆ, ನಿಮ್ಮ ಫೋಟೋಗಳ ಪ್ರತಿಗಳು ಆನ್‌ಲೈನ್‌ನಲ್ಲಿ ಉಳಿದಿರಬಹುದು. ಕೆಲವು ಸಂದರ್ಭಗಳಲ್ಲಿ ಬೇರೆ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿಯೂ ಆ ಫೋಟೋ ಸಿಗಬಹುದು. ಆದರೆ, ಇಲ್ಲಿ ಒಂದು ವಿಷಯ ಗಮನದಲ್ಲಿರಲಿ. ನೀವು ಬಳಸುವ ಆ್ಯಪ್, ಬ್ಯಾಕಪ್ ಸೆಟ್ಟಿಂಗ್‌ಗಳು ಮತ್ತು ಫೋಟೋ ಡಿಲೀಟ್ ಮಾಡುವ ವಿಧಾನಕ್ಕೆ ಅನುಗುಣವಾಗಿ ಇದು ಬದಲಾಗುತ್ತದೆ. ಒಂದು ಜಾಗದಲ್ಲಿ ಫೋಟೋ ಅಳಿಸಿದರೆ ಎಲ್ಲ ಕಡೆಗಳಿಂದಲೂ ಅದು ಅಳಿಸಿಹೋಗುತ್ತದೆ ಅಂತ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ವೈಯಕ್ತಿಕ ಫೋಟೋಗಳನ್ನು ಅಳಿಸುವಾಗ ಗ್ಯಾಲರಿ ಮಾತ್ರವಲ್ಲದೆ, ಬ್ಯಾಕಪ್ ಮತ್ತು ಬೇರೆ ಸಾಧನಗಳಲ್ಲೂ ಅವು ಉಳಿದಿವೆಯೇ ಅನ್ನೋದನ್ನು ಪರಿಶೀಲಿಸುವುದು ಒಳ್ಳೆಯದು. ಡಿಲೀಟ್ ಮಾಡಿದ ಫೋಟೋವನ್ನು ಮತ್ತೆ ವಾಪಸ್ ಪಡೆಯಬಹುದಾ? ಹೌದು, ಕೆಲವು ಸಂದರ್ಭಗಳಲ್ಲಿ ಫೋಟೋವನ್ನು ಮತ್ತೆ ಪಡೆಯಬಹುದು.

ಫೋಟೋ ಇನ್ನೂ ಟ್ರಾಶ್ ಅಥವಾ ರೀಸೆಂಟ್ಲಿ ಡಿಲೀಟ್ ಫೋಲ್ಡರ್‌ನಲ್ಲಿದ್ದರೆ ಅದನ್ನು ಸುಲಭವಾಗಿ ಮರುಪಡೆಯಬಹುದು. ಆದರೆ ಅಲ್ಲಿಂದಲೂ ಶಾಶ್ವತವಾಗಿ ಅಳಿಸಿದ ನಂತರ ಫೋಟೋವನ್ನು ಮರಳಿ ಪಡೆಯಲು ಸಾಧ್ಯವೇ ಅನ್ನೋದು ಸಾಧನದ ಸಂಗ್ರಹಣಾ ವ್ಯವಸ್ಥೆ, ಎನ್‌ಕ್ರಿಪ್ಷನ್ ಮತ್ತು ಲಭ್ಯವಿರುವ ಬ್ಯಾಕಪ್‌ಗಳನ್ನು ಅವಲಂಬಿಸಿರುತ್ತದೆ. ಹಾಗಂತ, ಡಿಲೀಟ್ ಮಾಡಿದ ಪ್ರತಿಯೊಂದು ಫೋಟೋವನ್ನೂ ಯಾರಾದರೂ ಖಂಡಿತವಾಗಿ ವಾಪಸ್ ಪಡೆಯಬಹುದು ಅಂತ ಭಯಪಡುವ ಅಗತ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಡೇಟಾವನ್ನು ಮರಳಿ ಪಡೆಯುವುದು ಸಾಧ್ಯವಾಗದೇ ಇರಬಹುದು.

ನಿಮ್ಮ ವೈಯಕ್ತಿಕ ಫೋಟೋಗಳು ಸುರಕ್ಷಿತವಾಗಿರಲು ಏನು ಮಾಡಬೇಕು?

* ನಿಮ್ಮ ಫೋಟೋಗಳು ನಿಮ್ಮ ಖಾಸಗಿ ವಿಷಯಗಳಾಗಿದ್ದರೆ, ಅವುಗಳನ್ನು ಡಿಲೀಟ್ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.

* ಫೋಟೋ ಡಿಲೀಟ್ ಮಾಡಿದ ನಂತರ ಟ್ರಾಶ್ ಅಥವಾ ರೀಸೆಂಟ್ಲಿ ಡಿಲೀಟ್ ಫೋಲ್ಡರ್ ಪರಿಶೀಲಿಸಿ.ಕೆಲವೊಮ್ಮೆ ಪೈಲ್ ಮ್ಯಾನೇಜರ್ ಪೋಲ್ಡರ್ ಅಲ್ಲಿಯೂ ಕೂಡಾ ನಮ್ಮ ಫೋಟೋಗಳು ಸಂಗ್ರಹವಾಗಿರಿರುತ್ತವೆ.

* ಗೂಗಲ್ ಫೋಟೋಸ್ ಸೇರಿದಂತೆ ನೀವು ಬಳಸುವ ಕ್ಲೌಡ್ ಸೇವೆಗಳಲ್ಲಿ ಬ್ಯಾಕಪ್ ಆನ್ ಆಗಿದೆಯೇ ಎಂದು ನೋಡಿ.

* ನಿಮಗೆ ಬೇಡವಾದ ಹಂಚಿಕೆ ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಿ.

* ನಿಮ್ಮ ಖಾತೆಗಳಿಗೆ ಬಲವಾದ ಪಾಸ್‌ವರ್ಡ್ ಬಳಸಿ ಮತ್ತು ಎರಡು ಹಂತದ ದೃಢೀಕರಣವನ್ನು ಸಕ್ರಿಯಗೊಳಿಸಿ.

* ಮೊಬೈಲ್ ಅನ್ನು ಬೇರೆಯವರಿಗೆ ಮಾರಾಟ ಮಾಡುವಾಗ ಅಧಿಕೃತ ಫ್ಯಾಕ್ಟರಿ ರೀಸೆಟ್ ವಿಧಾನ ಬಳಸಿ. ಅದಕ್ಕೂ ಮೊದಲು ಬೇಕಾದ ಫೈಲ್‌ಗಳನ್ನು ಬ್ಯಾಕಪ್ ಮಾಡಿಕೊಂಡು, ನಿಮ್ಮ ಖಾತೆಗಳಿಂದ ಸೈನ್ ಔಟ್ ಆಗಿ.

ನಾವು ಮೊಬೈಲ್‌ನಲ್ಲಿ ಫೋಟೋ ಡಿಲೀಟ್ ಮಾಡಿದಾಗ ಅದು ತಕ್ಷಣವೇ ಸಂಪೂರ್ಣವಾಗಿ ನಾಶವಾಗುತ್ತದೆ ಅಂತ ಅಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ, ಆ ಫೋಟೋ ಎಲ್ಲಿ ಸಂಗ್ರಹವಾಗಿತ್ತು, ಬ್ಯಾಕಪ್ ಆನ್ ಆಗಿತ್ತಾ ಮತ್ತು ಯಾವ ರೀತಿಯಲ್ಲಿ ಅಳಿಸಲಾಗಿದೆ ಅನ್ನೋದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.ಹಾಗಾಗಿ, ಮುಂದಿನ ಬಾರಿ ಫೋಟೋ ಡಿಲೀಟ್ ಮಾಡುವಾಗ ಗ್ಯಾಲರಿಯಿಂದ ತೆಗೆದುಹಾಕಿದರೆ ಸಾಕು ಅಂತ ಅಂದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಿ ಉಳಿದಿರಬಹುದು ಅನ್ನೋದನ್ನೂ ಒಮ್ಮೆ ಪರಿಶೀಲಿಸಿ.ಯಾಕಂದ್ರೆ, ಡಿಜಿಟಲ್ ಜಗತ್ತಿನಲ್ಲಿ ನಮಗೆ ಕಾಣಿಸದಿರುವುದು ಯಾವಾಗಲೂ ಇಲ್ಲವಾಗಿರುತ್ತದೆ ಅಂತ ಅರ್ಥವಲ್ಲ, (ಏಜೆನ್ಸೀಸ್​).