ಲೈಫ್‌ಸ್ಟೈಲ್

ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ರುಚಿ ಜತೆ ಆರೋಗ್ಯ

ಬೆಂಗಳೂರು: ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುತ್ತಿದ್ದರು. ಮಣ್ಣಿನ ಪಾತ್ರೆಗಳಲ್ಲಿಯೂ ಅಡುಗೆ ಮಾಡುತ್ತಿದ್ದರು. ಆದರೆ ಕಾಲ ಕಳೆದಂತೆ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮಣ್ಣಿನ ಪಾತ್ರೆಗಳು ಬಳಕೆಯಲ್ಲಿಲ್ಲದ ಕಾರಣ ನಾನ್ ಸ್ಟಿಕ್, ಸ್ಟೀಲ್, ಅಲ್ಯೂಮಿನಿಯಂ ಮತ್ತಿತರ ಪಾತ್ರೆಗಳು ಅಡುಗೆ ಕೋಣೆಗೆ ಪ್ರವೇಶಿಸಿವೆ.  ಆದರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಹಾಗಿದ್ರೆ ಈ ಕುರಿತಾಗಿ ಇಂದು ತಿಳಿದುಕೊಳ್ಳೋಣ,...

ಮಣ್ಣಿನ ಪಾತ್ರೆಗಳನ್ನು ಬಳಸುವ ಮೊದಲು:  ಕೆಲ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡುವುದನ್ನು ಮರೆಯದಿರಿ. ಜೇಡಿಮಣ್ಣಿನ ಮಡಿಕೆಯಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿರುವ ಕಾರಣ ಅವು ತೇವಾಂಶವನ್ನು ಉಳಿಸಿಕೊಳ್ಳುತ್ತವೆ. ಇದರಿಂದ ಪಾತ್ರೆಗಳು ಬಿರುಕಾಗುವುದನ್ನು ತಡೆಯಬಹುದು. ನೀರಿನಲ್ಲಿ ನೆನೆಸಿದ ಬಳಿಕ ಬಟ್ಟೆಯಿಂದ ಒರೆಸಿ. ನಂತರ ಮಡಿಕೆಯಲ್ಲಿ ಸ್ವಲ್ಪ ನೀರು ಇರಿಸಿ, ಸಣ್ಣ ಉರಿಯಲ್ಲಿ ಎರಡು ನಿಮಿಷ ಕುದಿಸಿ. ನಂತರ ಆ ನೀರನ್ನು ಹೊರ ಹಾಕಿ. ನಂತರ ಬಳಸಿ.

1) ಮಣ್ಣಿನ ಮಡಕೆಗಳು ಆರೋಗ್ಯಕ್ಕೆ ಸುರಕ್ಷಿತ. ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳು ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರದಲ್ಲಿ ಇರುತ್ತವೆ. ಇಂತಹ ಪೌಷ್ಟಿಕ ಆಹಾರ ಸೇವಿಸುವುದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಉಂಟಾಗುವುದಿಲ್ಲ.

2)  ಮಣ್ಣಿನ ಪಾತ್ರೆಯಲ್ಲಿ ಆಹಾರವನ್ನು ನಿಧಾನವಾಗಿ ಮತ್ತು ಸರಿಯಾಗಿ ಬೇಯಿಸಲಾಗುತ್ತದೆ. ಈ ಆಹಾರಗಳ ಸೇವನೆಯು ಇನ್ಸುಲಿನ್ ಉತ್ಪಾದನೆಯನ್ನು ಸಮತೋಲನಗೊಳಿಸುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

3) ಮಲಬದ್ಧತೆ ಅಸಿಡಿಟಿ ಸಮಸ್ಯೆಗಳು ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಪರಿಹಾರವನ್ನು ಪಡೆಯಬಹುದು

4) ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಅದರ ರುಚಿ ಸಂಪೂರ್ಣವಾಗಿ ಬದಲಾಗುತ್ತದೆ. ವಾಸ್ತವವಾಗಿ ಮಣ್ಣು ಕ್ಷಾರೀಯ ಸ್ವಭಾವವನ್ನು ಹೊಂದಿದೆ. ಮಣ್ಣಿನ ಪಾತ್ರೆಗಳು ಆಹಾರದಲ್ಲಿರುವ ಪೋಷಕಾಂಶಗಳು ಹೊರಹೋಗದಂತೆ ನೋಡಿಕೊಳ್ಳುತ್ತವೆ. ಹಾಗಾಗಿ ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಅಡುಗೆಯ ರುಚಿಯನ್ನೂ ಹೆಚ್ಚಿಸುತ್ತದೆ.