ಲೈಫ್‌ಸ್ಟೈಲ್

ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಲು ಬೇಕು ಮುನ್ನೆಚ್ಚರ

ಬಾಯಿ ದೇಹದ ಕನ್ನಡಿ. ಅದು ನಮ್ಮ ಒಟ್ಟಾರೆ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಬಾಯಿ ಆರೋಗ್ಯ ಮತ್ತು ದೇಹದ ಆರೋಗ್ಯ ಪರಸ್ಪರ ಅವಲಂಬಿತವಾಗಿದ್ದು ಬಾಯಿ ತೆಗೆದರೆ ದೇಹದ ಗುಟ್ಟು ರಟ್ಟಾಗುವುದಂತು ನಿಜ. ಆಹಾರ ಬಾಯಿಯ ಮೂಲಕವೇ ನಮ್ಮ ದೇಹವನ್ನು ತಲುಪಬೇಕು ಇಂತಹ ಬಾಯಿಯನ್ನು ಯೋಗ್ಯ ರೀತಿಯಲ್ಲಿ ಕಾಳಜಿ ವಹಿಸುವುದರಿಂದ ನಮ್ಮ ಬಾಯಿ ದೇಹ ಹಾಗು ಮನಸ್ಸು ಎಲ್ಲವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಹಲ್ಲುಗಳ ಆರೋಗ್ಯ ನಾವು ಸೇವಿಸುವ ಆಹಾರದೊಂದಿಗೆ ನೇರ ಸಂಪರ್ಕ ಹೊಂದಿದ್ದು ಹಲ್ಲುಗಳನ್ನು ಪರೀಕ್ಷಿಸುವ ಮೂಲಕ ನಾವು ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಿದ್ದೇವೋ ಇಲ್ಲವೋ ಎಂದು ಹೇಳಬಹುದು. ಕಳಪೆ ಆಹಾರ ನಮ್ಮ ಬಾಯಿ ಆರೋಗ್ಯವನ್ನು ಹಾಳು ಮಾಡುತ್ತದೆ.

ಹೆಚ್ಚು ಆಮ್ಲೀಯ ಪದಾರ್ಥಗಳು ಮತ್ತು ಸಕ್ಕರೆ ಅಂಶ ಉಳ್ಳ ಆಹಾರ ಪದಾರ್ಥಗಳು ಹಲ್ಲಿನ ಆರೋಗ್ಯಕ್ಕೆ ಕೆಟ್ಟದ್ದು. ಹಲ್ಲಿನ ಮೇಲ್ಪದರವಾದ ಎನಾಮಿಲ್ ದೇಹದ ಅತ್ಯಂತ ಕಠಿಣ ಭಾಗವಾಗಿದ್ದು ಅತಿ ಹೆಚ್ಚು ಖನಿಜಗಳನ್ನು ಹೊಂದಿರುತ್ತದೆ ಮತ್ತು ಇದೇ ಕಾರಣದಿಂದಾಗಿ ಹಲ್ಲುಗಳು ದೇಹದಲ್ಲೇ ಕಠಿಣ ಅಥವಾ ಗಟ್ಟಿಯಾದ ಭಾಗವೆಂದು ಗುರುತಿಸ ಬಹುದು. ಆದರೆ ನಾವು ಸೇವಿಸುವ ಅಸಹಜ ಆಹಾರದ ಪರಿಣಾಮವಾಗಿ ಖನಿಜಾಂಶದ ಕೊರತೆ ಉಂಟಾಗಿ, ಹಲ್ಲುಗಳ ಅಂಗಾಂಶವು ತನ್ನ ಗುಣಗಳನ್ನು ಕಳೆದುಕೊಂಡು ಹುಳುಕಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ದಂತಕ್ಷಯ ಎಂದೂ ಕರೆಯುತ್ತೇವೆ.

ದಂತಕ್ಷಯ ಬಹುತೇಕ ಎಲ್ಲರೂ ಎದುರಿಸುವ ಪ್ರಮುಖವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು ಇದರಿಂದ ಹಲ್ಲುಗಳು ಶಾಶ್ವತವಾಗಿ ಹಾನಿಗೊಳಗಾಗುತ್ತವೆ. ಇದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ನಾವು ತಿನ್ನುವ ಆಹಾರ ಮತ್ತು ಲಾಲಾರಸದೊಂದಿಗೆ ಬ್ಯಾಕ್ಟೀರಿಯಾಗಳು ಸೇರಿ ಹಲ್ಲಿನ ಮೇಲೆ ಪ್ಲಾಕ್ ಎಂಬ ಜಿಗುಟಾದ ಪದರವನ್ನು ರೂಪಿಸುತ್ತವೆ, ಇದರಿಂದ ಉತ್ಪತ್ತಿಯಾಗುವ ಆಮ್ಲವು ನಿಧಾನವಾಗಿ ಹಲ್ಲಿನ ಮೇಲಿನ ಗಡುಸಾದ ಹೊಳೆಯುವ ಪದರವಾದ ಎನಾಮಲ್ ಅನ್ನು ಕರಗಿಸುತ್ತದೆ. ಎನಾಮಲ್ ದುರ್ಬಲಗೊಳ್ಳುತ್ತಿದ್ದಂತೆ ಹಲ್ಲಿನ ಕೊಳೆಯುವಿಕೆಯ ಅಪಾಯವು ಹೆಚ್ಚಾಗುತ್ತದೆ.

ತುಂಬಾ ಸಿಹಿಯಾದ ಜಿಗುಟಾದ ಮತ್ತು ಆಮ್ಲೀಯವಾದ ಆಹಾರ ಪದಾರ್ಥಗಳ ಸೇವನೆ ಲಾಲಾ ರಸ ಉತ್ಪತ್ತಿಯನ್ನು ಕಡಿಮೆ ಮಾಡುವ ಔಷಧಿಗಳ ಸೇವನೆ. ಪ್ರತಿದಿನ ಬ್ರಷ್ ಮತ್ತು ಫ್ಲಾಸ್ (ಸಣ್ಣ ದಾರಗಳಿಂದ ಹಲ್ಲುಗಳ ನಡುವಿನ ಸಂದುಗಳನ್ನು ಶುಚಿಗೊಳಿಸುವುದು) ಮಾಡಲು ವಿಫಲವಾದಾಗ ಹಲ್ಲು ಹುಳುಕಾಗುವ ಅಪಾಯ ಹೆಚ್ಚಾಗುತ್ತದೆ. ದಂತಕ್ಷಯ ಅಥವಾ ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಬಹುದು. ಪ್ರತಿದಿನ ಹಲ್ಲುಗಳನ್ನು ಉಜ್ಜುವುದು - ಪ್ರಮುಖವಾಗಿ ಆಹಾರವನ್ನು ಸೇವಿಸಿದ ನಂತರ - ಜೊತೆಗೆ ಫ್ಲಾಸ್​ಗಳ ಮೂಲಕ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸುವುದು ಮುಖ್ಯ.

ಸಿಹಿಯಾದ ಜಿಗುಟಾದ ಆಮ್ಲೀಯ ಆಹಾರ ಅಥವಾ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು, ಫ್ಲೋ›ರೈಡ್ ಯುಕ್ತ ಟೂತ್​ಪೇಸ್ಟ್ ಬಳಕೆ ಮಾಡುವುದು, ಆಂಟಿ ಬ್ಯಾಕ್ಟೀರಿಯಲ್ ಮೌತ್ ವಾಶ್​ಗಳ ಬಳಕೆಯಿಂದ ದಂತಕ್ಷಯಕ್ಕೆ ಕಾರಣವಾಗುವ ಸೂಕ್ಷ್ಮ ಕ್ರಿಮಿಗಳನ್ನು ಕಡಿಮೆ ಮಾಡಬಹುದು. ನಿಯಮಿತ ದಂತ ಪರೀಕ್ಷೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆಯಾದರೂ ದಂತ ವೈದ್ಯರಿಂದ ಹಲ್ಲುಗಳನ್ನು ಶುಚಿ ಮಾಡಿಸಿಕೊಳ್ಳುವುದರಿಂದ ದಂತ ಕ್ಷಯವನ್ನು ತಡೆಯಬಹುದು.

ಹಲ್ಲು ಹುಳುಕು ಎಷ್ಟು ಪ್ರಮಾಣದಲ್ಲಿ ಇರುವುದು ಎಂಬುದರ ಮೇಲೆ ಚಿಕಿತ್ಸಾ ವಿಧಾನ ಅವಲಂಬಿತವಾಗಿದ್ದು ಯಾವುದೇ ಹಂತದಲ್ಲೂ ಚಿಕಿತ್ಸೆ ನೀಡದೆ ಸರಿಪಡಿಸಲಾಗುವುದಿಲ್ಲ. ಹುಳುಕು ಆರಂಭಿಕ ಹಂತದಲ್ಲಿದ್ದು ಆಳವಾಗಿಲ್ಲದಿದ್ದಲ್ಲಿ ಅದನ್ನು ಸರಳವಾದ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು, ಹೀಗೆ ಮಾಡದೆ ಚಿಕಿತ್ಸೆಯನ್ನು ಮುಂದೂಡಿದರೆ ಹುಳುಕು ಮುಂದುವರಿದು ರೂಟ್ ಕೆನಾಲ್ ಚಿಕಿತ್ಸೆಯ ಅವಶ್ಯಕತೆ ಉಂಟಾಗುತ್ತದೆ.