ಲೈಫ್‌ಸ್ಟೈಲ್

ನಿದ್ರೆಯಲ್ಲಿರುವಾಗ ಯಾರೋ ಹತ್ತಿರ ಬಂದಂತೆ ಭಾಸವಾಗಿ ಕಣ್ಣು ಬಿಡಲಾಗದ ಸ್ಥಿತಿ ಅನುಭವಿಸಿದ್ದೀರಾ? ಅದಕ್ಕೆ ಕಾರಣ ಇಲ್ಲಿದೆ….

ನಿದ್ರೆ ಎಂಬುದು ಮಾನವನ ಅವಿಭಾಜ್ಯ ಅಂಗ. ಸರಿಯಾದಿ ನಿದ್ರೆ ಇಲ್ಲದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ರೆ ಅವಶ್ಯಕ ಎಂದು ತಜ್ಞರು ಹೇಳುತ್ತಾರೆ. ಕೆಲವರು ಗಾಢ ನಿದ್ರೆಯಲ್ಲಿದ್ದರೂ ದುಸ್ವಪ್ನ ಸೇರಿದಂತೆ ಅನೇಕ ಕಾರಣಗಳಿಂದ ದಿಢೀರನೇ ಎಚ್ಚರಗೊಳ್ಳುತ್ತಾರೆ.

ನಿಮ್ಮ ಜೀವನದಲ್ಲಿ ಆಗಿರಬಹುದು 

ಕೆಲವೊಮ್ಮೆ ನಿದ್ದೆಯಲ್ಲಿರುವಾಗ ಯಾರೋ ನಮ್ಮ ಬಳಿ ಬರುತ್ತಿರುವಂತೆ ಭಾಸವಾಗುತ್ತದೆ. ಈ ವೇಳೆ ಕಣ್ಣುಗಳನ್ನು ತೆರೆಯಬೇಕೆಂದರೂ ಸಾಧ್ಯವಾಗುವುದಿಲ್ಲ. ಯಾರೋ ನಮ್ಮ ಪಕ್ಕದಲ್ಲೇ ಮಲಗಿದ್ದಾರೆ ಎಂದು ಭಾಸವಾಗುತ್ತದೆ. ಈ ವೇಳೆ ನಿದ್ರೆಯಿಂದ ಏಳಬೇಕೆಂದು ಅಂದುಕೊಂಡರು ತುಂಬಾ ಕಷ್ಟವಾಗುತ್ತದೆ. ಕೊಂಚ ಸಮಯದ ಬಳಿಕ ಎದ್ದು ನೋಡಿದಾಗ ಸುತ್ತಮುತ್ತ ಏನು ಇರುವುದಿಲ್ಲ. ಈ ಅನುಭವ ಒಂದು ಕ್ಷಣ ಆಘಾತಕ್ಕೆ ದೂಡುತ್ತದೆ. ಇಂತಹ ಅನುಭವ ನಿಮ್ಮ ಜೀವನದಲ್ಲಿ ಆಗಿರಬಹುದು ಅಥವಾ ನಿಮ್ಮ ಸ್ನೇಹಿತರೂ ಹೇಳುವುದನ್ನು ಕೇಳಿರಬಹುದು. ನಿದ್ರೆಯಲ್ಲಿರುವಾಗ ಈ ವಿದ್ಯಾಮಾನ ಏಕೆ ಸಂಭವಿಸುತ್ತದೆ? ಇದಕ್ಕೆ ವೈದ್ಯಕೀಯ ವಿಜ್ಞಾನದಲ್ಲಿ ಏನೆಂದು ಕರೆಯುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನಿದ್ರಾ ಪಾರ್ಶ್ವವಾಯು 

ಅಂದಹಾಗೆ ಈ ಸ್ಥಿತಿಯನ್ನು ನಿದ್ರಾ ಪಾರ್ಶ್ವವಾಯು ಎಂದು ಕರೆಯುತ್ತಾರೆ. ಇಂಗ್ಲಿಷ್​ನಲ್ಲಿ ಇದನ್ನು ಸ್ಲೀಪ್​ ಪ್ಯಾರಾಲಿಸಿಸ್ ಎನ್ನುತ್ತಾರೆ. ಅನೇಕ ಜನರಿಗೆ ಈ ನಿದ್ರಾ ಪಾರ್ಶ್ವವಾಯು ಒಂದು ದುಸ್ವಪ್ನ ಇದ್ದಂತೆ. ನಿದ್ರೆಯಿಂದ ಎಚ್ಚರವಾದಂತೆ ತೋರುತ್ತದೆ ಆದರೆ ನಿದ್ರೆಯಿಂದ ಎಚ್ಚರಗೊಂಡಿರುವುದಿಲ್ಲ. ಎಚ್ಚರಗೊಳ್ಳಲು ಅನೇಕ ಬಾರಿ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಯಾರೋ ಒಬ್ಬರು ನಮಗೆ ತೊಂದರೆ ಮಾಡಲು ನಮ್ಮ ಬಳಿ ಬರುತ್ತಿದ್ದಾರೆ ಎಂದು ಭಾಸವಾಗುತ್ತದೆ. ಅಲ್ಲದೆ, ಇಲ್ಲದಿರುವ ವಿಷಯಗಳನ್ನು ಕೇಳುವ ಮತ್ತು ಅನುಭವಿಸುವ ಸ್ಥಿತಿ ಇದಾಗಿದೆ. ಆದರೆ, ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿಯ ಕಾರಣದಿಂದಾಗಿ ಉಂಟಾಗುವ ವಿದ್ಯಾಮಾನಗಳನ್ನು ಒಬ್ಬ ವ್ಯಕ್ತಿಯು ಕೆಲವೇ ಸೆಕೆಂಡುಗಳಲ್ಲಿ ಅನುಭವಿಸಲು ಸಾಧ್ಯ. ಆದರೆ, ಇದು ನಿಯಮಿತವಾಗಿ ಸಂಭವಿಸಿದಲ್ಲಿ, ನಿದ್ರೆ ಹಾಳಾಗುತ್ತದೆ ಮತ್ತು ಕೆಲವು ಜನರು ಮಲಗಲು ಕೂಡ ಹೆದರುತ್ತಾರೆ. ಏಕೆಂದರೆ ಈ ವಿದ್ಯಾಮಾನವು ರಾತ್ರಿಯಲ್ಲಿ ನಿದ್ರೆಯ ಸಮಯದಲ್ಲೇ ಹೆಚ್ಚಾಗಿ ಸಂಭವಿಸುತ್ತದೆ.

ಕಾರಣವೇನು?

ನಿದ್ರಾ ಪಾರ್ಶ್ವವಾಯು ಏಕೆ ಸಂಭವಿಸುತ್ತದೆ ಎಂದು ಕೇಳಿದಾಗ, ನಿಖರವಾದ ಉತ್ತರವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದಾಗ್ಯೂ, ನಿದ್ರಾಹೀನತೆ, ನಾರ್ಕೊಲೆಪ್ಸಿ, ಒತ್ತಡ, ಆತಂಕ, ಗಾಬರಿಯಿಂದ ಈ ಸ್ಥಿತಿ ಉಂಟಾಗಬಹುದು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ಸ್ಥಿತಿಯನ್ನು ಹೊಂದಿದ್ದರೆ ಅದು ಆನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಹೇಳುತ್ತಾರೆ.

ಪರಿಹಾರವೇನು?

ಈ ಕೆಟ್ಟ ಪರಿಸ್ಥಿತಿಯನ್ನು ತಪ್ಪಿಸಲು ಪ್ರತಿಯೊಬ್ಬರೂ ಗಮನ ಹರಿಸಬೇಕಾದ ಕೆಲವು ವಿಷಯಗಳಿವೆ. ಮಲಗುವ ಮುನ್ನ ಭಾರವಾದ ಅಥವಾ ಗಟ್ಟಿಯಾದ ಆಹಾರವನ್ನು ಸೇವಿಸಬೇಡಿ. ಇದಿಷ್ಟೇ ಅಲ್ಲದೆ, ಮದ್ಯಪಾನ, ಧೂಮಪಾನ ಮತ್ತು ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಇದರೊಂದಿಗೆ ಊಟದ ಸಮಯಕ್ಕೂ ಮತ್ತು ಮಲಗುವ ಸಮಯಕ್ಕೂ ಎರಡ್ಮೂರು ಗಂಟೆ ಅಂತರವಿರಲಿ. (ಏಜೆನ್ಸೀಸ್​)